8 members of the same family who went to collect frog shells die, two go missing!
x

ಸ್ಥಳೀಯ ಮೀನುಗಾರರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ರಕ್ಷಣಾ ಕಾರ್ಯ ನಡೆಸಿದರು.

ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಸಾವು, ಇಬ್ಬರು ನಾಪತ್ತೆ!

ಘಟನೆ ನಡೆದ ತಕ್ಷಣ ಸ್ಥಳೀಯ ಮೀನುಗಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ನದಿಯಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ನಾಲ್ಕು ಜನರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.


Click the Play button to hear this message in audio format

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ತಟ್ಟೆಹಕ್ಕಲು ನದಿಯಲ್ಲಿ ಭಾನುವಾರ ಅತ್ಯಂತ ಭೀಕರ ದುರಂತವೊಂದು ಸಂಭವಿಸಿದೆ. ನದಿಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸಲು ತೆರಳಿದ್ದ ಒಂದೇ ಕುಟುಂಬದ 14 ಜನರಲ್ಲಿ, ನೀರಿನ ರಭಸಕ್ಕೆ ಸಿಲುಕಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

ದುರಂತಕ್ಕೆ ಕಾರಣವೇನು?

ಸ್ಥಳೀಯ ಮೂಲಗಳ ಪ್ರಕಾರ, ಶಿರಾಲಿಯ ಒಂದೇ ಕುಟುಂಬಕ್ಕೆ ಸೇರಿದ 14 ಸದಸ್ಯರು ಭಾನುವಾರ ಬೆಳಗ್ಗೆ ದೋಣಿಯ ಮೂಲಕ ವೆಂಕಟಾಪುರ ನದಿಯ ಮಧ್ಯಭಾಗಕ್ಕೆ ಕಪ್ಪೆ ಚಿಪ್ಪು ಸಂಗ್ರಹಿಸಲು ತೆರಳಿದ್ದರು. ಎಲ್ಲರೂ ನದಿಯಲ್ಲಿ ಕಾರ್ಯನಿರತರಾಗಿದ್ದಾಗ, ಆಕಸ್ಮಿಕವಾಗಿ ನದಿಯಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದ್ದು, ನೀರಿನ ಭೀಕರ ರಭಸ ಹಾಗೂ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿದ ಪರಿಣಾಮ ದೋಣಿಯಲ್ಲಿದ್ದ 14 ಮಂದಿಯೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

8 ಮೃತದೇಹಗಳು ಪತ್ತೆ

ಘಟನೆ ನಡೆದ ತಕ್ಷಣ ಸ್ಥಳೀಯ ಮೀನುಗಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ನದಿಯಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ನಾಲ್ಕು ಜನರನ್ನು ಸ್ಥಳೀಯರು ಸಾಹಸಪೂರ್ವಕವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಇವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯ ವೇಳೆ ಇದುವರೆಗೆ ಒಟ್ಟು 8 ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಮೃತರಲ್ಲಿ ಏಳು ಮಂದಿ ಮಹಿಳೆಯರು ಹಾಗೂ ಒಬ್ಬ ಪುರುಷ ಎಂದು ಗುರುತಿಸಲಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತರನ್ನು ಪಡುಶಿರಾಲಿ ಬೆಂಗ್ರೆಯ ಲಕ್ಷ್ಮಿ ಮಹಾದೇವ ನಾಯ್ಕ (42), ಶಾರದಾಹೊಳೆಯವರಾದ ಉಮೇಶ ನಾಯ್ಕ (30), ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49), ಜ್ಯೋತಿ ನಾಗಪ್ಪ ನಾಯ್ಕ (34), ಮಾಲತಿ ನಾಯ್ಕ (38), ಮಾಸ್ತಮ್ಮ ನಾಯ್ಕ ಎಂದು ಗುರುತಿಸಲಾಗಿದೆ. ಅಳ್ವೆಕೋಡಿಯಲ್ಲಿ ಇವರೆಲ್ಲರ ಮೃತ ದೇಹ ಪತ್ತೆಯಾಗಿದೆ.

ಇಬ್ಬರಿಗಾಗಿ ಮುಂದುವರಿದ ತೀವ್ರ ಶೋಧ

ದುರಂತದಲ್ಲಿ ಇನ್ನೂ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ನಾಪತ್ತೆಯಾಗಿದ್ದು, ಅವರಿಗಾಗಿ ನದಿಯಲ್ಲಿ ತೀವ್ರ ಹುಡುಕಾಟ ಮುಂದುವರಿದಿದೆ. ಸ್ಥಳಕ್ಕೆ ಭಟ್ಕಳ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಐದು ಲಕ್ಷ ಪರಿಹಾರ ಘೋಷಣೆ

ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಪ್ರತಿಕ್ರಿಯಿಸಿದ್ದು, "ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬಳಿಯ ತಟ್ಟೆಹಕಲ್ಲು ಕಡಲತೀರದಲ್ಲಿ ಕಪ್ಪು ಮಜ್ಜಿಗೆಗಳನ್ನು ಸಂಗ್ರಹಿಸಲು ಹೋಗಿದ್ದ ಒಂದೇ ಕುಟುಂಬದ ಎಂಟು ಸದಸ್ಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ. ಅಗಲಿದ ಆತ್ಮಗಳಿಗೆ ಚಿರಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ತಿಳಿಸಿದ್ದಾರೆ.

ಮುಂದುವರಿದು "ಇದು ಅತ್ಯಂತ ದುರಂತ ಮತ್ತು ನೋವಿನ ಘಟನೆ. ಮಾನವೀಯ ನೆಲೆಯಲ್ಲಿ, ರಾಜ್ಯ ಸರ್ಕಾರವು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುತ್ತದೆ. ಈ ಅಪಘಾತದಲ್ಲಿ ಇನ್ನೂ ಕೆಲವರು ಕಾಣೆಯಾಗಿದ್ದಾರೆ ಎಂಬ ಮಾಹಿತಿಯೂ ಇದೆ, ಮತ್ತು ಅವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಕಾಣೆಯಾದವರು ಜೀವಂತವಾಗಿ ಹಿಂತಿರುಗಿ ತಮ್ಮ ಪ್ರೀತಿಪಾತ್ರರೊಂದಿಗೆ ಮತ್ತೆ ಸೇರಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ" ಎಂದು ತಿಳಿಸಿದ್ದಾರೆ.

Read More
Next Story