
ಸ್ಥಳೀಯ ಮೀನುಗಾರರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ರಕ್ಷಣಾ ಕಾರ್ಯ ನಡೆಸಿದರು.
ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಗಿ ಜಲಸಮಾಧಿ; ಮೃತರ ಸಂಖ್ಯೆ 11ಕ್ಕೆ ಏರಿಕೆ
ಎನ್‌ಡಿಆರ್‌ಎಫ್ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡವು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಮಾದೇವ್ ಮೃತದೇಹವನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಕಡಲತೀರದಲ್ಲಿ ಭಾನುವಾರ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಜಲಸಮಾಧಿಯಾದವರ ಸಂಖ್ಯೆ ಈಗ 11ಕ್ಕೆ ಏರಿಕೆಯಾಗಿದೆ.
ಅವಘಡ ನಡೆದ ದಿನ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಮತ್ತೊಬ್ಬ ವ್ಯಕ್ತಿ ಮಾದೇವ್ ನಾಯ್ಕ್ ಮೃತದೇಹ ಇಂದು (ಮೇ 25) ಪತ್ತೆಯಾಗಿದೆ. ಎನ್‌ಡಿಆರ್‌ಎಫ್ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡವು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಮಾದೇವ್ ಮೃತದೇಹವನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿದೆ.
ತಾಯಿ ಉಳಿಸಲು ಹೋಗಿ ಮಗನೂ ಸಾವು
ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಹಾಗೂ ಅವರ ಮಗ ಉಮೇಶ್ ನಾಯ್ಕ್ ಅವರ ಸಾವು ಅತ್ಯಂತ ಕರುಣಾಜನಕವಾಗಿದೆ. “ತಾಯಿ ಮಾಸ್ತಮ್ಮ ಅವರು ನದಿಯ ನೀರಿನಲ್ಲೇ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ, ಮಗ ಉಮೇಶ್ ಸಮೀಪದ ಬಂಡೆಯೊಂದರ ಮೇಲೆ ನಿಂತು ಚಿಪ್ಪುಗಳನ್ನು ಸಂಗ್ರಹಿಸುತ್ತಿದ್ದ. ಈ ವೇಳೆ ಹಠಾತ್ ಆಗಿ ಬಂದ ಬೃಹತ್ ಅಲೆಗೆ ತಾಯಿ ನೀರೊಳಗೆ ಮುಳುಗುತ್ತಿರುವುದನ್ನು ಕಂಡು ಮಗ ಉಮೇಶ್ ಅವರು ತಾಯಿಯನ್ನು ರಕ್ಷಿಸಲು ತಕ್ಷಣ ನೀರಿಗೆ ಹಾರಿದ್ದಾನೆ. ತಾಯಿ ದಪ್ಪಗಿದ್ದ ಕಾರಣ ಆಕೆಯನ್ನು ನೀರಿನಿಂದ ಹೊರಗೆಳೆಯಲು ಇನ್ನಿಲ್ಲದ ಸಾಹಸ ಪಟ್ಟಿದ್ದಾನೆ. ಆದರೆ, ಅಷ್ಟರಲ್ಲಿ ತಾಯಿ ಮೃತಪಟ್ಟಿದ್ದರು.
ದುರದೃಷ್ಟವಶಾತ್, ಉಮೇಶ್ ನೀರಿನಿಂದ ಮೇಲಕ್ಕೆ ಬರಲು ಯತ್ನಿಸುವಾಗ ಮುಳುಗುತ್ತಿದ್ದ ಮತ್ತಿಬ್ಬರು ಜೀವಭಯದಲ್ಲಿ ಉಮೇಶ್ ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಎಳೆದಿದ್ದಾರೆ. ಹೀಗಾಗಿ ಉಮೇಶ್ ಕೂಡ ನೀರಿನ ಆಳಕ್ಕೆ ಮುಳುಗಿ ಜಲಸಮಾಧಿಯಾದರು" ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಒಂದೊಂದು ಕುಟುಂಬದ್ದೂ ಕರುಣಾಜನಕ ಕಥೆ
ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳ ಕಥೆಗಳು ಎಲ್ಲರ ಕಣ್ಣಾಲಿಗಳಲ್ಲಿ ನೀರು ತುಂಬಿಸುತ್ತವೆ. ದುರಂತದಲ್ಲಿ ಮಾದೇವ ನಾಯ್ಕ್ ಮತ್ತು ಅವರ ಪತ್ನಿ ಲಕ್ಷ್ಮಿ ನಾಯ್ಕ್ ಇಬ್ಬರೂ ಒಟ್ಟಿಗೆ ಮೃತಪಟ್ಟಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಾದ ದರ್ಶನ (23) ಹಾಗೂ ಕೀರ್ತನಾ (20) ದಿಕ್ಕು ತೋಚದಂತಾಗಿದ್ದಾರೆ.
ಮತ್ತೊಂದೆಡೆ, ಮೃತ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಕಳೆದ 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ನಾಲ್ವರು ಮಕ್ಕಳಿಗೆ ಈಕೆಯೇ ಆಧಾರವಾಗಿದ್ದರು. ದಿನದ ದುಡಿಮೆಗೆಂದು ಹೋದ ತಾಯಿ ಶವವಾಗಿ ಮನೆಗೆ ಮರಳಿದ್ದು, ನಾಲ್ವರು ಮಕ್ಕಳು ಇದೀಗ ಆಸರೆಯಿಲ್ಲದೆ ಬೀದಿಗೆ ಬಿದ್ದಿದ್ದಾರೆ.
ಇಡೀ ಭಟ್ಕಳ ತಾಲೂಕಿನಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

