SIR| ಭಾರತ ರತ್ನ ಪ್ರೊ. ಸಿ.ಎನ್‌ಆರ್‌ಗೆ ನೋಟಿಸ್ ; ಜಾರಿಯಾಗಿಲ್ಲ ಎಂದ ಚುನಾವಣಾಧಿಕಾರಿ
x

ಲು ಸಿಎನ್‌ಆರ್‌ ರಾವ್‌ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಮೀಪ ನಡೆಯುವ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು.

SIR| ಭಾರತ ರತ್ನ ಪ್ರೊ. ಸಿ.ಎನ್‌ಆರ್‌ಗೆ ನೋಟಿಸ್ ; ಜಾರಿಯಾಗಿಲ್ಲ ಎಂದ ಚುನಾವಣಾಧಿಕಾರಿ

ಸಿಎನ್‌ಆರ್‌ ರಾವ್‌ ಅವರ ಕಚೇರಿ ಪ್ರತಿನಿಧಿ ನೋಟಿಸ್‌ ಇನ್ನೂ ತಮಗೆ ತಲುಪಿಲ್ಲ ಎಂದು ತಿಳಿಸಿದ್ದಾರೆ. ನೋಟಿಸ್‌ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಕಟವಾಗಿರಬಹುದು ಎಂದು ಅವರು ಹೇಳಿದ್ದಾರೆ.


Click the Play button to hear this message in audio format

ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ. ಸಿಎನ್‌ಆರ್‌ ರಾವ್‌ ಅವರಿಗೆ ಕರ್ನಾಟಕದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ‘ಸ್ವಯಂ ಹೆಸರು ಹೊಂದಾಣಿಕೆಯಾಗಿಲ್ಲ’ ಎಂಬ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಹಿಂದಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರು ‘ಪ್ರೊ. ಸಿಎನ್‌ಆರ್‌ ರಾವ್’ ಎಂದು ದಾಖಲಾಗಿದ್ದರೆ, ಪ್ರಸ್ತುತ ಮತದಾರರ ಪಟ್ಟಿಯಲ್ಲಿ ‘‘Proff CNR Rao’ ಎಂದು ಹೆಚ್ಚುವರಿ ‘ಎಫ್’ ಸೇರಿದೆ ಎಂದು ಹೇಳಲಾಗಿದೆ.

ಆದರೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ, ಎಕ್ಸ್‌ನಲ್ಲಿ ನೀಡಿದ ಹೇಳಿಕೆಯಲ್ಲಿ, ರಾವ್ ಅವರಿಗೆ ಅಂತಹ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ನಿರಾಕರಿಸಿದ್ದಾರೆ. ಮಾಧ್ಯಮ ವರದಿಗಳನ್ನು ನಿರಾಕರಿಸಿದ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಹಿಂದಿನ ಮತ್ತು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ರಾವ್ ಅವರ ಹೆಸರಿನಲ್ಲಿ ವ್ಯತ್ಯಾಸವಿದೆ. ಆದರೆ ಅವರ ಸ್ಥಾನಮಾನ ಮತ್ತು ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಅಂತಹ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಆಯೋಗದಿಂದ ಸ್ಪಷ್ಟನೆ

ಗೌರವಾನ್ವಿತ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಪ್ರಸ್ತುತ ಕರಡು ಮತದಾರರ ಪಟ್ಟಿಯ ಪ್ರಕಾರ 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರ ಮತದಾರರಾಗಿದ್ದಾರೆ. ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ‘ಪ್ರೊ. ಸಿ.ಎನ್.ಆರ್. ರಾವ್, ಎಸ್/ಒ ನಾಗೇಶ್ ರಾವ್ ಹೆಚ್.’ ಎಂದು ದಾಖಲಾಗಿದೆ. ಆದರೆ, 2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ‘ರಾಮ, ಎಸ್/ಒ ಹೆಚ್. ನಾಗೇಶ್’ ಎಂದು ನಮೂದಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯ ವೇಳೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ, ಬೆಂಗಳೂರು ಪಶ್ಚಿಮ ನಗರ ನಿಗಮದ ಆಯುಕ್ತರು, ಮಲ್ಲೇಶ್ವರಂ ಚುನಾವಣಾ ನೋಂದಣಾಧಿಕಾರಿ ಹಾಗೂ ಭಾಗ ಸಂಖ್ಯೆ 59ರ ಬೂತ್ ಮಟ್ಟದ ಅಧಿಕಾರಿ ಅವರು ಗಣತಿ ನಮೂನೆಯನ್ನು ಸಿ.ಎನ್.ಆರ್. ರಾವ್ ಅವರ ನಿವಾಸಕ್ಕೆ ತೆರಳಿ ಗೌರವಪೂರ್ವಕವಾಗಿ ಹಸ್ತಾಂತರಿಸಿದ್ದಾರೆ.

ಸಿ.ಎನ್.ಆರ್. ರಾವ್ ಅವರ ಸ್ಥಾನಮಾನ ಮತ್ತು ದೇಶಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಅಧಿಕಾರಿಗಳಿಗೆ ತಿಳಿದಿರುವ ಕಾರಣ, ಅವರಿಗೆ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಅವರ ಪ್ರಕರಣದಲ್ಲಿ ಯಾವುದೇ ನೋಟಿಸ್ ನೀಡದೆ, ಬಿಎಲ್‌ಒ ಅವರು ದಾಖಲೆಯನ್ನು ಅಂತಿಮ ಅನುಮೋದನೆಗಾಗಿ ಈ ಉದ್ದೇಶಕ್ಕಾಗಿ ನೇಮಿಸಲಾದ ಹೆಚ್ಚುವರಿ ಚುನಾವಣಾ ನೋಂದಣಾಧಿಕಾರಿ (AERO) ಅವರಿಗೆ ಶಿಫಾರಸು ಮಾಡಿದ್ದಾರೆ. ಬಳಿಕ, ಸೆಪ್ಟೆಂಬರ್ 8ರಂದು ಚುನಾವಣಾ ನೋಂದಣಾಧಿಕಾರಿ ಅವರು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ದಾಖಲೆಯನ್ನು ಅನುಮೋದಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನೋಟಿಸ್‌ ಬಂದಿಲ್ಲ ಎಂದ ರಾವ್‌ ಕಚೇರಿ

ಆದರೆ ಸಿಎನ್‌ಆರ್‌ ರಾವ್‌ ಅವರ ಕಚೇರಿ ಪ್ರತಿನಿಧಿ, ನೋಟಿಸ್‌ ಇನ್ನೂ ತಮಗೆ ತಲುಪಿಲ್ಲ ಎಂದು ತಿಳಿಸಿದ್ದಾರೆ. ನೋಟಿಸ್‌ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಕಟವಾಗಿರಬಹುದು ಎಂದು ಅವರು ಹೇಳಿದ್ದಾರೆ. ಆದರೆ, ಹೆಸರಿನಲ್ಲಿರುವ ಹೆಚ್ಚುವರಿ ‘ಎಫ್’ ಹೊರತುಪಡಿಸಿ ಬೇರೆ ಯಾವುದೇ ವ್ಯತ್ಯಾಸವಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ.

ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚನೆ

ನೋಟಿಸ್‌ ಪ್ರಕಾರ, ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸವನ್ನು ಸರಿಪಡಿಸಲು ಸಿಎನ್‌ಆರ್‌ ರಾವ್‌ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಮೀಪ ನಡೆಯುವ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು. ನೋಟಿಸ್‌ ಪಡೆದ ವ್ಯಕ್ತಿಗೆ ಮಾತ್ರ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಲಾಗಿದೆ.

2002ರ ಪಟ್ಟಿಗೂ ಪ್ರಸ್ತುತ ಪಟ್ಟಿಗೂ ವ್ಯತ್ಯಾಸ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮತದಾರರು ಆ ಪಟ್ಟಿಯಲ್ಲಿನ ವಿವರಗಳನ್ನು ಆಧರಿಸಿ ಎನ್ಯೂಮರೇಷನ್‌ ಫಾರ್ಮ್‌ ಭರ್ತಿ ಮಾಡುತ್ತಾರೆ. 2002ರ ಪಟ್ಟಿಯಲ್ಲಿನ ವಿವರಗಳು ಮತ್ತು ಪ್ರಸ್ತುತ ಮತದಾರರ ಪಟ್ಟಿಯ ವಿವರಗಳು ಹೊಂದಿಕೆಯಾಗದಿದ್ದಾಗ ‘ಸ್ವಯಂ ಹೆಸರು ಹೊಂದಾಣಿಕೆ’ ಸಮಸ್ಯೆ ಉಂಟಾಗುತ್ತದೆ. ಸಿಎನ್‌ಆರ್‌ ರಾವ್‌ ಅವರ ಪ್ರಕರಣದಲ್ಲೂ ಇದೇ ರೀತಿಯ ವ್ಯತ್ಯಾಸ ಪತ್ತೆಯಾಗಿದೆ.

ಫೋನ್‌, ಇ-ಮೇಲ್‌ ಬಳಕೆಯಲ್ಲಿ ರಾವ್‌ ಅಂತರ ಕಾಯ್ದುಕೊಂಡಿದ್ದಾರೆ

ಜವಾಹರಲಾಲ್‌ ನೆಹರು ಸೆಂಟರ್‌ ಫಾರ್‌ ಅಡ್ವಾನ್ಸ್ಡ್‌ ಸೈಂಟಿಫಿಕ್‌ ರಿಸರ್ಚ್‌ನ (ಜೆಎನ್‌ಸಿಎಎಸ್‌ಆರ್‌) ರಾವ್‌ ಅವರ ಪರಿಚಯಸ್ಥರ ಪ್ರಕಾರ, ಅವರು ಮೊಬೈಲ್‌ ಫೋನ್‌ ಅನ್ನು ಅಪರೂಪವಾಗಿ ಬಳಸುತ್ತಾರೆ. ಕರೆ ಮಾಡುವುದಾಗಲಿ, ಇ-ಮೇಲ್‌ ಪರಿಶೀಲಿಸುವುದಾಗಲಿ ಅವರು ಹೆಚ್ಚು ಮಾಡುವುದಿಲ್ಲ. ಫೋನ್‌ ಮತ್ತು ಕಂಪ್ಯೂಟರ್‌ಗಳು ತಮ್ಮ ಗಮನವನ್ನು ಬೇರೆಡೆ ಸೆಳೆಯುತ್ತವೆ ಎಂಬ ಕಾರಣಕ್ಕೆ ಅವುಗಳಿಂದ ದೂರವಿರುತ್ತಾರೆ ಎಂದು ಅವರು ಹೇಳಿದ್ದಾರೆ.

ವಿಜ್ಞಾನ ಕ್ಷೇತ್ರದಲ್ಲಿ ಸಿಎನ್‌ಆರ್‌ ರಾವ್‌ ಕೊಡುಗೆ

ಘನಸ್ಥಿತಿ ಮತ್ತು ರಚನಾತ್ಮಕ ರಸಾಯನಶಾಸ್ತ್ರ ಕ್ಷೇತ್ರದಲ್ಲಿನ ಮಹತ್ವದ ಸಂಶೋಧನೆಗಾಗಿ ಸಿಎನ್‌ಆರ್‌ ರಾವ್‌ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದಾರೆ. ಅವರು ಪದ್ಮಶ್ರೀ, ಪದ್ಮವಿಭೂಷಣ ಮತ್ತು ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ. ದೇಶದ ವಿಜ್ಞಾನ ನೀತಿ ರೂಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಧಾನಿ ಇಂದಿರಾ ಗಾಂಧಿ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದ ಅವರು, ಬಳಿಕ ರಾಜೀವ್‌ ಗಾಂಧಿ, ಎಚ್‌.ಡಿ. ದೇವೇಗೌಡ, ಐ.ಕೆ. ಗುಜ್ರಾಲ್‌ ಮತ್ತು ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ವೈಜ್ಞಾನಿಕ ಸಲಹಾ ಮಂಡಳಿಗಳ ನೇತೃತ್ವ ವಹಿಸಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಅವರು, ಜಕ್ಕೂರಿನಲ್ಲಿ ಜೆಎನ್‌ಸಿಎಎಸ್‌ಆರ್‌ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Read More
Next Story