
ಸಿಎಂಗೆ ಪತ್ರ ಬರೆದಿದ್ದ ವಿದ್ಯಾರ್ಥಿನಿ ವರ್ಷಿಣಿ ಆರ್.
ಮಕ್ಕಳ ಪತ್ರಕ್ಕೆ ಕರಗಿದ ಸಿಎಂ: ಉಡುತೊರೆಹಳ್ಳ ಯೋಜನೆಗೆ ಬಜೆಟ್‌ನಲ್ಲಿ 490 ಕೋಟಿ ರೂ. ಘೋಷಣೆ
ಅಹವಾಲು ಸಲ್ಲಿಸಿದ ಮಕ್ಕಳ ಧ್ವನಿ ಎಳೆಯದಾದರೂ, ಅದನ್ನು ಕಡೆಗಣಿಸದೆ ಮುಕ್ತವಾಗಿ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ತಾಯಿಯ ಹೃದಯ ನಮ್ಮ ಸರ್ಕಾರದ್ದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕುಡಿಯುವ ನೀರಿಗೆ ಒತ್ತಾಯಿಸಿ ಮಕ್ಕಳು ಬರೆದಿದ್ದ ಪತ್ರವೊಂದು ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಕೆಂಪಯ್ಯನಹಟ್ಟಿ ಗ್ರಾಮದ ಕುಡಿಯುವ ನೀರಿಗಾಗಿ ಬಜೆಟ್‌ನಲ್ಲಿ 490 ಕೋಟಿ ರೂ. ಹಣವನ್ನು ಮೀಸಲಿಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮಕ್ಕಳ ಮನವಿಗೆ ಸ್ಪಂದಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ ಸಮಸ್ಯೆ ಕುರಿತು ಸ್ವಲ್ಪ ಸಮಯದ ಹಿಂದೆ ಮಕ್ಕಳು ಪತ್ರ ಬರೆದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ನನ್ನಲ್ಲಿ ಮನವಿ ಮಾಡಿದ್ದರು. ಮಕ್ಕಳ ಕೋರಿಕೆಯ ಮೇರೆಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದಾಗ ಆ ಹಳ್ಳಿಗೆ ಸಮರ್ಪಕ ನೀರಾವರಿ ಯೋಜನೆಯೊಂದರ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್ ನಲ್ಲಿ "ಉಡುತೊರೆಹಳ್ಳ ನೀರಾವರಿ ಯೋಜನೆ"ಯನ್ನು ಘೋಷಿಸಿ, 490 ಕೋಟಿ ರೂ. ಅನುದಾನ ಸಹ ಮೀಸಲಿಟ್ಟಿದ್ದೇನೆ" ಎಂದು ತಿಳಿಸಿದ್ದಾರೆ.
ಮಕ್ಕಳ ಧ್ವನಿಯಿಂದ ಸಾವಿರಾರು ಕುಟುಂಬಗಳಿಗೆ ನೀರು
ಮುಂದುವರೆದು, ಅಹವಾಲು ಸಲ್ಲಿಸಿದ ಮಕ್ಕಳ ಧ್ವನಿ ಎಳೆಯದಾದರೂ, ಅದನ್ನು ಕಡೆಗಣಿಸದೆ ಮುಕ್ತವಾಗಿ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ತಾಯಿಯ ಹೃದಯ ನಮ್ಮ ಸರ್ಕಾರದ್ದು. ಪುಟಾಣಿ ಮಕ್ಕಳ ಧನ್ಯವಾದವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ, ನನ್ನ ಮತ್ತು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ತಮ್ಮ ಕಷ್ಟವನ್ನು ನಮ್ಮ ಗಮನಕ್ಕೆ ತಂದು, ಇಂದು ಸಾವಿರಾರು ಕುಟುಂಬಗಳ ಭವಿಷ್ಯ ಬದಲಾಗಲು ಕಾರಣರಾದ ಪುಟಾಣಿಗಳಿಗೂ ಪ್ರೀತಿ ತುಂಬಿದ ಅಪ್ಪುಗೆಗಳು ಎಂದು ಸಂತಸ ಹಂಚಿಕೊಂಡಿದ್ದಾರೆ.
ಸ್ಥಳೀಯ ಆಡಳಿತ ವೈಫಲ್ಯವೇ ?
ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ತಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಿಎಂ ಕಚೇರಿಗೆ ಪತ್ರ ತಲುವವರೆಗೂ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದರು ? ಇಲ್ಲಿಯವರೆಗೂ ಈ ಸಮಸ್ಯೆ ಏಕೆ ಬಗೆಹರಿದಿರಲಿಲ್ಲ ? ಇದು ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಅಧಿಕಾರಿಗಳ ಆಡಳಿತ ವೈಫಲ್ಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

