ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶ: ಸಾಂಪ್ರದಾಯಿಕ ಕ್ರಮಕ್ಕೆ ಸಮ್ಮತಿ
x

ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶ: ಸಾಂಪ್ರದಾಯಿಕ ಕ್ರಮಕ್ಕೆ ಸಮ್ಮತಿ

1ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿರುವ ಜನಿವಾರ, ಹಿಜಾಬ್, ಉಡುದಾರ ಹಾಗೂ ರುದ್ರಾಕ್ಷಿಯಂತಹ ಸಂಕೇತಗಳನ್ನು ಧರಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ


Click the Play button to hear this message in audio format

ರಾಜ್ಯದಲ್ಲಿ ಶೈಕ್ಷಣಿಕ ಸಂಸ್ಥೆಗಳ ಸಮವಸ್ತ್ರ ನೀತಿ ಹಾಗೂ ಧಾರ್ಮಿಕ ಸಂಕೇತಗಳ ಬಳಕೆಯ ಬಗ್ಗೆ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದು, ಪ್ರಾಥಮಿಕ ತರಗತಿಯಿಂದ ಹಿಡಿದು 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿರುವ ಜನಿವಾರ, ಹಿಜಾಬ್, ಉಡುದಾರ ಹಾಗೂ ರುದ್ರಾಕ್ಷಿಯಂತಹ ಸಂಕೇತಗಳನ್ನು ಧರಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಯಾವ್ಯಾವ ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಿಕೊಂಡು ಬರುತ್ತಿದ್ದಾರೋ, ಅವುಗಳನ್ನು ಮುಂದುವರಿಸಲು ಅವಕಾಶವಿದೆ. ಆದರೆ, ಹೊಸದಾಗಿ ಇಂತಹ ಸಂಕೇತಗಳನ್ನು ಕಡ್ಡಾಯಗೊಳಿಸುವುದು ಅಥವಾ ಹೊಸದಾಗಿ ಧರಿಸುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಶಿಕ್ಷಣದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುವ ಬದಲು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಡೀಸೆಲ್ ಬಳಕೆ ಕಡಿತಗೊಳಿಸುವ ಉದ್ದೇಶದಿಂದ ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ತಾತ್ಕಾಲಿಕ ಕ್ರಮ. ಪ್ರಧಾನಿಗಳು ಇಂಧನ ಉಳಿತಾಯಕ್ಕಾಗಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಸರಿಯಾದ ಕ್ರಮವಲ್ಲ. ಇಂಧನ ಬೆಲೆ ಏರಿಕೆ ಮತ್ತು ಬಳಕೆ ಕಡಿಮೆ ಮಾಡುವ ಕುರಿತು ಇಂತಹ ಅಲ್ಪಾವಧಿ ತಂತ್ರಗಳಿಗಿಂತ, ಬೇರೆ ದೇಶಗಳೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ನಿಯಂತ್ರಣ ಅಥವಾ ಪರ್ಯಾಯ ವ್ಯವಸ್ಥೆಯ ಬಗ್ಗೆ ಒಮ್ಮತಕ್ಕೆ ಬರುವುದು ಸೂಕ್ತ ಮತ್ತು ಶಾಶ್ವತ ಪರಿಹಾರವಾಗಿದೆ ಎಂದು ಹೇಳಿದರು.

ಸಂಪುಟ ಪುನರ್ ರಚನೆ

ಈ ನಡುವೆ, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಂಪುಟ ಪುನರ್ ರಚನೆಯ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಸಂಪುಟ ಪುನರ್ ರಚನೆ ಮಾಡುವ ಉದ್ದೇಶವಿದೆ ಎಂದು ಉತ್ತರಿಸಿದ್ದಾರೆ. ಈ ಮೂಲಕ ಸಂಪುಟದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯನ್ನು ಖಚಿತಪಡಿಸಿದರು. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಹೈಕಮಾಂಡ್ ಜತೆಗಿನ ಚರ್ಚೆಯ ನಂತರ ಈ ಪ್ರಕ್ರಿಯೆ ಚುರುಕಾಗುವ ನಿರೀಕ್ಷೆಯಿದೆ.

ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತೀವ್ರ ಆಕ್ರೋಶ

ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿರುವ ನೀಟ್ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸೋರಿಕೆ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನೀಟ್ ಪರೀಕ್ಷೆಯನ್ನು ಕೇಂದ್ರ ಸರ್ಕಾರವು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಇದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಟ್ಟಲೆ ಶ್ರಮಪಟ್ಟು ಸಿದ್ಧರಾಗಿರುವ ಪರೀಕ್ಷೆಯಲ್ಲಿ ಇಂತಹ ಅಕ್ರಮಗಳು ನಡೆದಿರುವುದು ದುರದೃಷ್ಟಕರ ಮತ್ತು ವಿದ್ಯಾರ್ಥಿಗಳಿಗೆ ಎಸಗಿದ ದೊಡ್ಡ ಅನ್ಯಾಯವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದ ಇಂತಹ ನಿರ್ಲಕ್ಷ್ಯದ ಧೋರಣೆಯಿಂದಾಗಿ ಯುವ ಸಮುದಾಯದ ಭವಿಷ್ಯದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಟೀಕಿಸಿದರು.

Read More
Next Story