​Siddaramaiah| ಪ್ರಧಾನಿಗೆ ಬೇಡಿಕೆಗಳ ಪಟ್ಟಿ ಸಲ್ಲಿಸಿದ ಸಿಎಂ, ಬೆಂಗಳೂರಿಗೆ ವಿಶೇಷ ಅನುದಾನ ನೀಡಲು ಮನವಿ
x
ಪ್ರಧಾನಿ‌ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ

​Siddaramaiah| ಪ್ರಧಾನಿಗೆ ಬೇಡಿಕೆಗಳ ಪಟ್ಟಿ ಸಲ್ಲಿಸಿದ ಸಿಎಂ, ಬೆಂಗಳೂರಿಗೆ ವಿಶೇಷ ಅನುದಾನ ನೀಡಲು ಮನವಿ

ಮನವಿಯಲ್ಲಿ ಒಟ್ಟು 18 ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದ್ದು, ಒಕ್ಕೂಟ ವ್ಯವಸ್ಥೆಯ ತತ್ವದಡಿ ಕರ್ನಾಟಕದ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.


​ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳು ಹಾಗೂ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.

ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬುಧವಾರ (ಏ.15) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು.

ಮನವಿಯಲ್ಲಿ ಒಟ್ಟು 18 ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದ್ದು, ಒಕ್ಕೂಟ ವ್ಯವಸ್ಥೆಯ ತತ್ವದಡಿ ಕರ್ನಾಟಕದ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕೆಂದು ಕೋರಿದ್ದಾರೆ.

​ರೈಲ್ವೆ ಮತ್ತು ಸಾರಿಗೆ ಮೂಲಸೌಕರ್ಯ

​ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಯವರ ಗಮನ ಸೆಳೆದಿದ್ದಾರೆ.

​ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಆರಂಭಿಸಲು ರಾಜ್ಯ ಸರ್ಕಾರ 1,123 ಎಕರೆ ಭೂಮಿ ನೀಡಿದ್ದರೂ ಈವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ. ಇದನ್ನು ಕೂಡಲೇ ಆರಂಭಿಸಬೇಕು.

​ ಬೆಂಗಳೂರು-ಮೈಸೂರು ನಡುವೆ ಹೈಸ್ಪೀಡ್ ರೈಲು ಯೋಜನೆ ಆರಂಭಿಸಬೇಕು. ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್‌ಗೆ ಚಾಲನೆ ನೀಡಬೇಕು.

ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಗೆ ಕೇಂದ್ರದಿಂದ ಬರಬೇಕಾದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

​ಜಲಸಂಪನ್ಮೂಲ ಮತ್ತು ಕುಡಿಯುವ ನೀರು

​ರಾಜ್ಯದ ಜೀವನಾಡಿ ಯೋಜನೆಗಳಿಗೆ ಸಂಬಂಧಿಸಿದಂತೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಯೋಜನೆಗಳನ್ನು ಪ್ರಸ್ತಾಪಿಸಿ, ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿದ್ದಾರೆ.

​ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಶೀಘ್ರ ಅನುಮೋದನೆ ನೀಡಬೇಕು.

ಕಳಸಾ ಬಂಡೂರಿ ನಾಲಾ ತಿರುವು( ಮಹದಾಯಿ) ಯೋಜನೆಗೆ ಅಗತ್ಯವಿರುವ ವನ್ಯಜೀವಿ ಮಂಡಳಿ ಕ್ಲಿಯರೆನ್ಸ್ ನೀಡುವಂತೆ ಮನವಿ ಮಾಡಿದ್ದಾರೆ.

ಭದ್ರಾ ಮೆಲ್ದಂಡೆ ಯೋಜನೆಗೆ ಘೋಷಿತ 5,300 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಅದೇ ರೀತಿ ಕೃಷ್ಣಾ ಮೇಲ್ದಂಡೆ ಹಂತ-3 ಅನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

​ಆರ್ಥಿಕ ಅನುದಾನ ಮತ್ತು ತೆರಿಗೆ ಪಾಲು

​ಕೇಂದ್ರ ಸರ್ಕಾರದಿಂದ ಬರಬೇಕಾದ ಆರ್ಥಿಕ ನೆರವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.

​ಜಲ ಜೀವನ್ ಮಿಷನ್ ಯೋಜನೆಯಡಿ ಬಾಕಿ ಇರುವ 17,554 ಕೋಟಿ ರೂ. ಕೇಂದ್ರದ ಪಾಲನ್ನು ಬಿಡುಗಡೆ ಮಾಡಬೇಕು.

ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿಗೆ 2,860 ಕೋಟಿ ಹಾಗೂ 5,495 ಕೋಟಿ ಕಂದಾಯ ಕೊರತೆ ಅನುದಾನ ನೀಡಬೇಕು.

ಬೆಂಗಳೂರು ನಗರದ ಮೂಲಸೌಕರ್ಯ ಬಲಪಡಿಸಲು 6,000 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ.

​ಸಾಮಾಜಿಕ ಮತ್ತು ಪ್ರಾದೇಶಿಕ ಅಭಿವೃದ್ಧಿ

ರಾಜ್ಯದ ಶೇ 56 ರಷ್ಟು ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು.

​ಕಲ್ಯಾಣ ಕರ್ನಾಟಕದ ಆರ್ಟಿಕಲ್ 371(ಜೆ) ಅಡಿಯಲ್ಲಿ ಈ ಭಾಗದ ಅಭಿವೃದ್ಧಿಗೆ ವಾರ್ಷಿಕ 5,000 ಕೋಟಿ ನೀಡಬೇಕು ಹಾಗೂ ರಾಯಚೂರಿನಲ್ಲಿ AIIMS ಸ್ಥಾಪನೆಗೆ ಅಂತಿಮ ಮೊಹರು ಒತ್ತಬೇಕು ಎಂದು ಸಿಎಂ ಸಿದ್ದರಾಮಯ್ಯ ಅಗ್ರಹಿಸಿದ್ದಾರೆ.

​ ಕಳೆದ 12 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ದೊಡ್ಡ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮಂಜೂರಾಗಿಲ್ಲ ಎಂದು ಸಿಎಂ ಗಮನ ಸೆಳೆದಿದ್ದಾರೆ.

"ಕರ್ನಾಟಕವು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ ಅನುಮೋದನೆ ಮತ್ತು ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬವು ವ್ಯವಸ್ಥಿತ ಅಸಮಾನತೆಯ ಭಾವನೆ ಮೂಡಿಸುತ್ತಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ಒಕ್ಕೂಟ ವ್ಯವಸ್ಥೆ ಬಲಪಡಿಸಬೇಕು," ಎಂದು ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.

Read More
Next Story