CM November Revolution, Siddaramaiah DKShivakumar AICC no one elses statement needed
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ

ದೆಹಲಿ ಅಂಗಳದಲ್ಲಿ ಸಿಎಂ ಶಕ್ತಿ ಪ್ರದರ್ಶನ: ಹೈಕಮಾಂಡ್ ಜತೆ ನಾಳೆ ಮಹತ್ವದ ಸಭೆ

ಸಿಎಂ ಸಿದ್ದರಾಮಯ್ಯ ಬಣ ಅವರ ಸ್ಥಾನವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಬಣವು ಬದಲಾವಣೆಯ ಅಗತ್ಯವನ್ನು ಹೈಕಮಾಂಡ್ ಮುಂದೆ ಪ್ರತಿಪಾದಿಸುತ್ತಿದೆ ಎಂದು ಮೂಲಗಳು ಹೇಳಿವೆ.


Click the Play button to hear this message in audio format

ರಾಜ್ಯ ರಾಜಕೀಯ ಅಂಗಳದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ನಾಯಕತ್ವದ ಚರ್ಚೆಗಳು, ಆಂತರಿಕ ಭಿನ್ನಮತ ಮತ್ತು ಸಚಿವ ಸಂಪುಟ ಪುನಾರಚನೆಯ ಕುರಿತಾದ ಜಿಜ್ಞಾಸೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ದೂರವಾಣಿ ಕರೆಯ ಬಳಿಕ ಬಂದಿರುವ ಈ ದೆಹಲಿ ಬುಲಾವ್ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಾಗಳು, ಸಚಿವರ ನಡುವಿನ ಭಿನ್ನಮತ ಮತ್ತು ಪಕ್ಷದ ಹಿರಿಯ ನಾಯಕರ ಹೇಳಿಕೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿವೆ. ಈ ಸಂದರ್ಭದಲ್ಲಿ ಹೈಕಮಾಂಡ್‌ನಿಂದ ಕರೆ ಬಂದಿರುವುದು, ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಕಠಿಣ ನಿರ್ಧಾರ ಕೈಗೊಳ್ಳಲಿದೆಯೇ ಅಥವಾ ರಾಜಕೀಯ ಚದುರಂಗದಾಟಕ್ಕೆ ತೆರೆ ಎಳೆಯಲಿದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಕೆ.ಸಿ. ವೇಣುಗೋಪಾಲ್ ಅವರೊಂದಿಗಿನ ಮಾತುಕತೆ ಮತ್ತು ಹೈಕಮಾಂಡ್‌ನ ಸೂಚನೆಯ ಮೇರೆಗೆ ಸಿಎಂ ದೆಹಲಿಗೆ ತೆರಳುತ್ತಿರುವುದು, ಈ ಭೇಟಿಯ ಮಹತ್ವವನ್ನು ಹೆಚ್ಚಿಸಿದೆ.

ಚರ್ಚೆಯ ಪ್ರಮುಖ ವಿಷಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೆಹಲಿ ಪ್ರವಾಸವು ಕೇವಲ ಸೌಜನ್ಯದ ಭೇಟಿಯಲ್ಲ ಎಂದು ಹೇಳಲಾಗಿದೆ. ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ. ಕಳೆದ ಕೆಲವು ದಿನಗಳಿಂದ ನಾಯಕತ್ವ ಬದಲಾವಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣವು ಬದಲಾವಣೆಯ ಅಗತ್ಯವನ್ನು ಹೈಕಮಾಂಡ್ ಮುಂದೆ ಪರೋಕ್ಷವಾಗಿ ಪ್ರತಿಪಾದಿಸುತ್ತಿದೆ ಎಂದು ವರದಿಯಾಗಿದೆ. ಈ ಗೊಂದಲಗಳಿಗೆ ಮಂಗಳವಾರ ತೆರೆ ಬೀಳುವ ಸಾಧ್ಯತೆಯಿದೆ. ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಟ್ಟು ಹಿಡಿದಿದ್ದಾರೆ. ಆಡಳಿತಾತ್ಮಕವಾಗಿ ಸರ್ಕಾರವನ್ನು ಬಲಪಡಿಸಲು ಮತ್ತು ಪಕ್ಷದ ನಿಷ್ಠಾವಂತರಿಗೆ ಅವಕಾಶ ನೀಡಲು ಸಂಪುಟ ಪುನಾರಚನೆ ಅನಿವಾರ್ಯ ಎಂಬುದು ಮುಖ್ಯಮಂತ್ರಿಗಳ ಅಭಿಪ್ರಾಯ. ಈ ನಿಟ್ಟಿನಲ್ಲಿ ಹೈಕಮಾಂಡ್ ಹಸಿರು ನಿಶಾನೆ ತೋರುತ್ತದೆಯೇ ಎಂಬುದು ಈಗಿನ ದೊಡ್ಡ ಕುತೂಹಲ.

ಮುಂಬರುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಪಕ್ಷದ ಮಟ್ಟದಲ್ಲಿ ಬಹಳ ಮುಖ್ಯವಾಗಿದೆ. ಗರಿಷ್ಠ ಗೆಲುವನ್ನು ಸಾಧಿಸಲು ಯಾವ ರೀತಿಯ ತಂತ್ರ ರೂಪಿಸಬೇಕು, ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಹೈಕಮಾಂಡ್ ಜತೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಲಿದ್ದಾರೆ. ಖಾಲಿ ಇರುವ ವಿಧಾನ ಪರಿಷತ್ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ. ಪಕ್ಷದ ಹಿರಿಯರು ಮತ್ತು ನಿಷ್ಠಾವಂತರಿಗೆ ಮನ್ನಣೆ ನೀಡುವ ವಿಷಯದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳ ಜತೆ ಹಂಚಿಕೊಳ್ಳುವ ಸಾಧ್ಯತೆಗಳಿವೆ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯನವರು ಮತ್ತು ಸಂಘಟನಾತ್ಮಕವಾಗಿ ಪಕ್ಷವನ್ನು ಮುನ್ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ನಡುವಿನ ಸಮನ್ವಯದ ಕೊರತೆಯೂ ಚರ್ಚೆಯ ವಿಷಯವಾಗಿದೆ. ಸಿದ್ದರಾಮಯ್ಯನವರು ಸರ್ಕಾರದ ಆಡಳಿತದ ದೃಷ್ಟಿಯಿಂದ ಸಂಪುಟ ಪುನಾರಚನೆ ಬಯಸಿದರೆ, ಡಿ.ಕೆ. ಶಿವಕುಮಾರ್ ಅವರು ಪಕ್ಷದ ಮೇಲೆ ತಮ್ಮ ಹಿಡಿತ ಮತ್ತು ನಾಯಕತ್ವದ ವಿಷಯದಲ್ಲಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ನಾಯಕರ ಮಧ್ಯದ ಶೀತಲ ಸಮರವನ್ನು ಹೈಕಮಾಂಡ್ ಹೇಗೆ ಶಮನಗೊಳಿಸುತ್ತದೆ ಎಂಬುದು ಕುತೂಹಲಕಾರಿ.

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ

ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಮಂತ್ರಿಗಳು ಮತ್ತು ಶಾಸಕರಲ್ಲಿ ಆತಂಕ ಮತ್ತು ಕುತೂಹಲ ಮಿಶ್ರಿತ ವಾತಾವರಣ ಉಂಟಾಗಿದೆ. ದೆಹಲಿ ಮಟ್ಟದಲ್ಲಿ ನಡೆಯುವ ನಿರ್ಧಾರಗಳು ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟವಾಗಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಸಿದ್ದರಾಮಯ್ಯನವರ ಬೆಂಬಲಿಗರು ಮತ್ತು ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಸಭೆಗಳು ನಡೆಯುತ್ತಿದ್ದು, ಎಲ್ಲರೂ ಹೈಕಮಾಂಡ್‌ನ ಅಂತಿಮ ನಿರ್ಧಾರಕ್ಕೆ ಕಾಯಲಾಗುತ್ತಿದೆ.

Read More
Next Story