
ಜಿಲ್ಲಾಧಿಕಾರಿಗಳು (ಡಿಸಿ) ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು.
ಬರ ಪರಿಸ್ಥಿತಿಗೆ ಕಟ್ಟುನಿಟ್ಟಿನ ನಿಗಾ: ಡಿಸಿ-ಸಿಇಒಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
ಸಭೆ ನಡೆಯುವ ವೇಳೆ ಉಪಮುಖ್ಯಮಂತ್ರಿಗಳು ಬರ ಪರಿಸ್ಥಿತಿ ಕುರಿತು ವಿವರಿಸುತ್ತಿದ್ದಾಗ ಒಬ್ಬ ಅಧಿಕಾರಿ ಮೊಬೈಲ್ ಫೋನ್‌ನಲ್ಲಿ ತೊಡಗಿಸಿಕೊಂಡಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು (ಡಿಸಿ) ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬರ ಪರಿಸ್ಥಿತಿ ಕುರಿತಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು.
ಪೇಪರ್ ವರದಿಗಿಂತ ಕ್ಷೇತ್ರ ವರದಿಗೆ ಆದ್ಯತೆ
ಕೇವಲ ಕಚೇರಿ ಮಟ್ಟದ ವರದಿಗಳ ಆಧಾರದ ಮೇಲೆ ಪರಿಸ್ಥಿತಿಯನ್ನು ಅಳೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಅಧಿಕಾರಿಗಳು ಸಲ್ಲಿಸುವ ಲಿಖಿತ ವರದಿ ಮತ್ತು ಸರ್ಕಾರಕ್ಕೆ ವಿವಿಧ ಮೂಲಗಳಿಂದ ದೊರೆಯುವ ಕ್ಷೇತ್ರಮಟ್ಟದ ಮಾಹಿತಿ ನಡುವೆ ಯಾವುದೇ ವ್ಯತ್ಯಾಸ ಇರಬಾರದು ಎಂದು ಎಚ್ಚರಿಸಿದರು.
ಕ್ಷೇತ್ರದಲ್ಲಿ ನೈಜ ಪರಿಸ್ಥಿತಿಯನ್ನು ಅರಿತು ಕ್ರಮ ಕೈಗೊಳ್ಳುವುದೇ ಮುಖ್ಯವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.
'ಟೀಮ್ ಕರ್ನಾಟಕ' ಮನೋಭಾವದಿಂದ ಕೆಲಸ ಮಾಡುವಂತೆ ಸೂಚನೆ
ಆಡಳಿತದಲ್ಲಿ ಸಮನ್ವಯಕ್ಕೆ ಒತ್ತು ನೀಡಿದ ಮುಖ್ಯಮಂತ್ರಿ, ಎಲ್ಲ ಅಧಿಕಾರಿಗಳು "ಟೀಮ್ ಕರ್ನಾಟಕ" ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ತಮ್ಮ ಆಡಳಿತಾತ್ಮಕ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ತೋರಿಸಬೇಕೆಂದು ತಿಳಿಸಿದರು.
ಈಗಾಗಲೇ ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಲಾಗಿದ್ದು, ಅಲ್ಲಿ ನೀಡಿದ ಸೂಚನೆಗಳು ನಿಗದಿತ ಅವಧಿಯೊಳಗೆ ಜಾರಿಯಾಗುತ್ತಿವೆ ಎಂದು ಅವರು ಹೇಳಿದರು.
ಸಭೆಯಲ್ಲೇ ಮೊಬೈಲ್ ಬಳಕೆ ಕುರಿತು ಅಸಮಾಧಾನ
ಸಭೆ ನಡೆಯುವ ವೇಳೆ ಉಪಮುಖ್ಯಮಂತ್ರಿಗಳು ಬರ ಪರಿಸ್ಥಿತಿ ಕುರಿತು ವಿವರಿಸುತ್ತಿದ್ದಾಗ ಒಬ್ಬ ಅಧಿಕಾರಿ ಮೊಬೈಲ್ ಫೋನ್‌ನಲ್ಲಿ ತೊಡಗಿಸಿಕೊಂಡಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು. ತುರ್ತು ಕರೆ ಇದ್ದರೆ ಸಭಾಂಗಣದ ಹೊರಗೆ ತೆರಳಿ ಮಾತನಾಡುವುದು ಸೂಕ್ತ ಎಂದು ಸೂಚಿಸಿದರು.
ಉಪಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪ್ರಸ್ತುತಿಗೆ ಅಧಿಕಾರಿಗಳು ಅಗತ್ಯ ಗೌರವ ನೀಡಬೇಕು ಎಂದು ತಿಳಿಸಿದರು.
ನಿವೃತ್ತ ಅಧಿಕಾರಿಗಳ ಅನುಭವ ಬಳಸಿಕೊಳ್ಳಿ
ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸಲು ನಿವೃತ್ತ ಐಎಎಸ್ ಅಧಿಕಾರಿಗಳ ಅನುಭವ ಮತ್ತು ಪರಿಣತಿಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ, ಅಧಿಕಾರಿಗಳೂ ಅಗತ್ಯವಿದ್ದಲ್ಲಿ ಅವರ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಿದರು.
ಕುಡಿಯುವ ನೀರಿಗೆ ಹೆಚ್ಚುವರಿ ಅನುದಾನ
ಗ್ರಾಮೀಣ ಭಾಗದ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಲಾ ಒಂದು ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಮಳೆಯ ಪ್ರಮಾಣ ಹಾಗೂ ಜಲಾಶಯಗಳಲ್ಲಿನ ನೀರಿನ ಸಂಗ್ರಹವನ್ನು ಗಮನದಲ್ಲಿಟ್ಟುಕೊಂಡು ಕೃಷಿ ಚಟುವಟಿಕೆಗಳ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಮೇಲಿದೆ ಎಂದರು.
ರಾಜ್ಯದಲ್ಲಿ ಶೇ. 60 ಮಳೆ ಕೊರತೆ
ಪ್ರಸ್ತುತ ರಾಜ್ಯದಲ್ಲಿ ಸುಮಾರು ಶೇಕಡಾ 60ರಷ್ಟು ಮಳೆ ಕೊರತೆ ಕಂಡುಬಂದಿದ್ದು, 178 ತಾಲ್ಲೂಕುಗಳಲ್ಲಿ ಮಳೆಯ ಅಭಾವ ದಾಖಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. ಪರಿಸ್ಥಿತಿಯ ಎರಡನೇ ಹಂತದ ಮೌಲ್ಯಮಾಪನ ನಡೆಸುವ ಅಗತ್ಯವಿದ್ದು, ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿ ಕುರಿತ ಸಮಗ್ರ ವರದಿ ಕಳುಹಿಸಬೇಕಿದೆ ಎಂದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ತ್ವರಿತವಾಗಿ ನಿಖರ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.
ನಕಲಿ ಬೋರ್‌ವೆಲ್‌ಗೆ ಅವಕಾಶ ಇಲ್ಲ
ಬರ ನಿರ್ವಹಣೆಯ ಭಾಗವಾಗಿ ಹೊಸ ಬೋರ್‌ವೆಲ್‌ಗಳನ್ನು ಕೊರೆಸುವಾಗ ಸಂಪೂರ್ಣ ಪ್ರಕ್ರಿಯೆಯ ವಿಡಿಯೊ ದಾಖಲಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರು. ಕಾಗದದಲ್ಲಿ ಮಾತ್ರ ಬೋರ್‌ವೆಲ್ ತೋರಿಸಿ ಅನುದಾನ ದುರುಪಯೋಗ ಮಾಡುವ ಪ್ರಕರಣಗಳಿಗೆ ಅವಕಾಶ ನೀಡಬಾರದು. ನಕಲಿ ಅಥವಾ ಬೋಗಸ್ ಬೋರ್‌ವೆಲ್ ಪ್ರಕರಣಗಳು ಬೆಳಕಿಗೆ ಬಂದರೆ ಸಂಬಂಧಿಸಿದ ಜಿಲ್ಲಾ ಪಂಚಾಯಿತಿ ಸಿಇಒಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಟ್ರಾನ್ಸ್‌ಫಾರ್ಮರ್ ದುರಸ್ತಿ ಹಾಗೂ ವಿದ್ಯುತ್ ವ್ಯವಸ್ಥೆಗೆ ಸೂಚನೆ
ಬರ ಪರಿಸ್ಥಿತಿಯಲ್ಲಿ ವಿದ್ಯುತ್ ಪೂರೈಕೆ ಅಡಚಣೆಯಾಗದಂತೆ ಟ್ರಾನ್ಸ್‌ಫಾರ್ಮರ್ ದುರಸ್ತಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಶು ಸಂಗೋಪನೆ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಯೋಜನೆಗಳು ವೇಗವಾಗಿ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಹ ಅದೇ ರೀತಿಯ ಸ್ಪಂದನೆ ನೀಡಬೇಕು ಎಂದರು.
ಕೇಂದ್ರ ತಂಡಕ್ಕೆ ವಾಸ್ತವ ಚಿತ್ರಣ ನೀಡಿ
ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸುವ ಕೇಂದ್ರದ ತಂಡಕ್ಕೆ ಅಗತ್ಯ ದಾಖಲೆಗಳು ಹಾಗೂ ಪೂರಕ ಮಾಹಿತಿಯನ್ನು ಒದಗಿಸುವಂತೆ ಮುಖ್ಯಮಂತ್ರಿ ಸೂಚಿಸಿದರು. ಕೇವಲ ದಾಖಲೆಗಳಲ್ಲದೆ, ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ನೈಜ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಬರ ಪರಿಸ್ಥಿತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಇದೇ ವೇಳೆ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ಬೆಳೆ ವಿಮೆ ಸಂಬಂಧ ಅಕ್ರಮಗಳ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರತ್ಯೇಕ ವರದಿ ಕೇಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನೀಡಿದ ಎಲ್ಲ ನಿರ್ದೇಶನಗಳನ್ನು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳವರೆಗೆ ತಲುಪಿಸಿ, ಯಾವುದೇ ನೆಪವಿಲ್ಲದೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

