
ಸಾಂದರ್ಭಿಕ ಚಿತ್ರ
ಇಕ್ಬಾಲ್ ಹೆಸರಿಗಷ್ಟೇ, ನಾನೇ ರಾಮನಗರ ಶಾಸಕ: ನಾನಾ ಚರ್ಚೆಗೆ ಗ್ರಾಸವಾದ ಸಿಎಂ ಹೇಳಿಕೆ!
ನಾನು ಮುಖ್ಯಮಂತ್ರಿ ಆಗಿದ್ದರೂ ನಿಮ್ಮ ಸೇವಕನಷ್ಟೇ, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಫಲವಾಗಿದ್ದೇನೆ. ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಝಿರೋ ಟ್ರಾಫಿಕ್ ತಪ್ಪಿಸಲು ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಮೆಟ್ರೋ ರೈಲಿನಲ್ಲಿ ಜನರೊಂದಿಗೆ ಆತ್ಮೀಯವಾಗಿ ಬೆರೆತು, ಮಾತುಕತೆ ನಡೆಸಿದ ಸಿಎಂ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೂ ಮೆಟ್ರೋದಲ್ಲೇ ಪ್ರಯಾಣಿಸಿ ಯುವಕರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಕುಶಲೋಪರಿ ನಡೆಸಿದರು.
ಕನಕಪುರಕ್ಕೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಅವರಿಗೆ ಹಾರೋಹಳ್ಳಿಯಲ್ಲಿ ಭರ್ಜರಿ ಸ್ವಾಗತ, ಅಲ್ಲಿಂದ ರೋಡ್ ಶೋ ನಡೆಸಿದರು. ನಾನು ಮುಖ್ಯಮಂತ್ರಿ ಆಗಿದ್ದರೂ ನಿಮ್ಮ ಸೇವಕನಷ್ಟೇ, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಫಲವಾಗಿದ್ದೇನೆ. ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ ಎಂದು ಭರವಸೆ ನೀಡಿದರು. ನನ್ನ ಮೇಲೆ ವಿಶ್ವಾಸವಿಟ್ಟು ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿದ್ದೀರಿ. ಇಕ್ಬಾಲ್ ಹುಸೇನ್ ಹೆಸರಿಗೆ ಮಾತ್ರ, ರಾಮನಗರಕ್ಕೆ ನಾನೇ ಶಾಸಕ ಎಂದು ಹೇಳಿದರು.
ಶೀಘ್ರವೇ ಮೆಡಿಕಲ್ ಕಾಲೇಜು ನಿರ್ಮಾಣ
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿದ್ದು ಐತಿಹಾಸಿಕ ನಿರ್ಧಾರ. ಹೆಸರು ಬದಲಾವಣೆಯಿಂದ ನಿಮ್ಮ ಭೂಮಿಯ ಬೆಲೆ ಹೆಚ್ಚಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋದಕ್ಕೆ ಕೆಲವರು ವಿರೋಧಿಸಿದರು. ಜಿಲ್ಲೆಯ ಹೆಸರು ಬದಲಾವಣೆಯಿಂದ ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಹಾರೋಹಳ್ಳಿ ಅಭಿವೃದ್ಧಿಗೆ ಪ್ರತ್ಯೇಕ ಸಭೆ ಮಾಡುತ್ತೇನೆ. ಕನಕಪುರದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುತ್ತೇವೆ. ಇಲ್ಲಿನ ಜನರು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ನಾನು ಈ ಹಿಂದೆ ಬಿಜೆಪಿಯನ್ನು ದೂರ ಇಡಬೇಕು ಎಂದು ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೆ. ಜೆಡಿಎಸ್ ಪಕ್ಷದವರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ತೆಗೆದಿದೆ ಬಹಿರಂಗವಾಗಿಯೇ ಆಹ್ವಾನ ನೀಡಿದರು. ದೇವರು ವರ, ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ಮುಂದಿನ ಬಾರಿ 136 ವಿಧಾನಸಭಾ ಕ್ಷೇತ್ರಗಳಿಗೂ ಹೆಚ್ಚು ಬೆಂಬಲ ನೀಡಬೇಕು ಎಂದು ಕೋರಿದರು.
4,500 ಕೋಟಿ ರೂ. ವಂಚನೆ
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬರೋಬ್ಬರಿ 4,500 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆರೋಪಿ ಶಿವಾನಂದ ನೀಲಣ್ಣವರ್ ನಡೆಸುತ್ತಿದ್ದ ಹೂಡಿಕೆ ದಂಧೆಯ ಕರಾಳ ಮುಖಗಳು ಒಂದೊಂದಾಗಿಯೇ ಬಯಲಿಗೆ ಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಸಿಐಡಿ ಡಿಐಜಿಪಿ ಡಾ. ಭೀಮಾಶಂಕರ್ ಗುಳೇದ್ ಅವರು, ವಂಚನೆಯ ನೆಟ್ವರ್ಕ್ ಮತ್ತು ಸಾರ್ವಜನಿಕರ ಹಣ ದುರುಪಯೋಗದ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿವಂ ಅಸೋಸಿಯೇಟ್‌ನಲ್ಲಿ ಒಟ್ಟು 40,700 ಜನರಿಂದ ಕೋಟ್ಯಂತರ ರೂಪಾಯಿಯನ್ನು ಹೂಡಿಕೆ ಹೆಸರಲ್ಲಿ ಈವರೆಗೆ 2400 ಕೋಟಿ ಸಂಗ್ರಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸದ್ಯಕ್ಕೆ 660 ಕೋಟಿ ರೂ. ಕೊರತೆ ಇದೆ. ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದ್ದ 540 ಕೋಟಿ ರೂ. ಪೈಕಿ 170 ಕೋಟಿ ರೂ. ನಷ್ಟವಾಗಿರುವುದು ಬೆಳಕಿಗೆ ಬಂದಿದೆ. ಈಗಾಗಲೇ 5 ಐಷಾರಾಮಿ ಕಾರುಗಳು ಸೀಜ್ ಮಾಡಲಾಗಿದೆ. ಉಳಿದ 11 ವೋಲ್ವೋ Volvo XC90 ಕಾರುಗಳ ಜಪ್ತಿಗೆ ಬಲೆ ಬೀಸಿದ್ದೇವೆ ಎಂದು ಗುಳೇದ್ ಹೇಳಿದ್ಧಾರೆ.
ಹೊಸಬರಿಂದ ವಸೂಲಿ, ಹಳಬರಿಗೆ 'ಬಡ್ಡಿ'
ಸಿಐಡಿ ಡಿಐಜಿಪಿ ಹೇಳುವ ಪ್ರಕಾರ, ಶಿವಾನಂದ ನೀಲಣ್ಣವರ್ ಯಾವುದೇ ಕಾನೂನುಬದ್ಧ ಉದ್ಯಮ ನಡೆಸಿ ಲಾಭ ತರುತ್ತಿರಲಿಲ್ಲ. ಬದಲಿಗೆ, ಹೊಸದಾಗಿ ಬರುತ್ತಿದ್ದ ಹೂಡಿಕೆದಾರರ ಹಣವನ್ನೇ ಹಳಬರಿಗೆ 'ಬಡ್ಡಿ' ರೂಪದಲ್ಲಿ ಹಂಚುತ್ತಿದ್ದ. ಯಾವಾಗ ಹೊಸ ಹೂಡಿಕೆಗಿಂತ ಕೊಡಬೇಕಾದ ಬಡ್ಡಿಯ ಮೊತ್ತವೇ ಹೆಚ್ಚಾಯಿತೋ, ಆಗ ಈ ವಂಚನೆಯ ಜಾಲ ತಾನಾಗಿಯೇ ಮುಳುವಾಯಿತು. ಈ ವ್ಯವಸ್ಥೆಯಲ್ಲಿ ಈಗಾಗಲೇ 400 ಕೋಟಿ ರೂ. ಹಣ ಹೆಚ್ಚುವರಿಯಾಗಿ ಹಳಬರ ಕೈಸೇರಿದ್ದು, ಆ ಹಣವನ್ನೂ ವಾಪಸ್ ಪಡೆಯಲು ಸಿಐಡಿ ನಿರ್ಧರಿಸಿದೆ.
ಎಫ್ಐಆರ್ ಆದ ನಂತರವೂ ಹೂಡಿಕೆ ಮಾಡಿದ ಜನ
"ಸಾಮಾನ್ಯವಾಗಿ ತನಿಖೆ ಪ್ರಗತಿಯಲ್ಲಿರುವಾಗ ನಾವು ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ಆದರೆ, ಸಂಸ್ಥೆಯ ಮೇಲೆ ಎಫ್ಐಆರ್ ದಾಖಲಾದ ಮೇಲೂ ಸಾರ್ವಜನಿಕರು ಶಿವಂ ಅಸೋಸಿಯೇಟ್ಸ್‌ಗೆ ಇನ್ನೂ 5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ! ಜನರ ಈ ಮುಗ್ಧತೆ ಅಥವಾ ಅರಿವಿನ ಕೊರತೆಯನ್ನು ತಡೆಯಲು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಸುದ್ದಿಗೋಷ್ಠಿ ಅನಿವಾರ್ಯವಾಗಿತ್ತು." ಎಂದು ಡಾ. ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
ಸಿನಿಮಾ ತಾರೆಯರಿಗೂ ಸಂಕಷ್ಟ?
ವಂಚಕ ನೀಲಣ್ಣವರ್ ತನ್ನ ಅಕ್ರಮ ಕಂಪನಿಯಿಂದ ಸ್ವಂತಕ್ಕೆ 55 ಕೋಟಿ ರೂ. ಬಳಸಿಕೊಂಡಿದ್ದಾನೆ. ಪ್ರಕರಣದಲ್ಲಿ ಮತ್ತೊಬ್ಬ ಪಾಲುದಾರನ ಕೈವಾಡವೂ ಇದೆ. ಕಂಪನಿಯ ಕೇವಲ ಒಂದು ಬ್ಯಾಂಕ್ ಖಾತೆಯಲ್ಲೇ ಬರೋಬ್ಬರಿ 36,200 ಪುಟಗಳಷ್ಟು ವಹಿವಾಟು ನಡೆದಿದ್ದು, ಒಟ್ಟು 30 ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಒಂದೊಮ್ಮೆ ಶಿವಂ ಅಸೋಸಿಯೇಟ್ಸ್‌ನಿಂದ ಸಿನಿಮಾ ತಾರೆಯರಿಗೆ ಅಥವಾ ಸೆಲೆಬ್ರಿಟಿಗಳಿಗೆ ಹಣ ಸಂದಾಯವಾಗಿದ್ದರೆ, ಅವರಿಗೂ ನೋಟಿಸ್ ಜಾರಿ ಮಾಡಿ ತನಿಖೆಗೆ ಕರೆಯಿಸಲಾಗುವುದು ಎಂದು ಸಿಐಡಿ ಎಚ್ಚರಿಸಿದೆ. ನೆರೆಯ ಮಹಾರಾಷ್ಟ್ರದಲ್ಲೂ ಈತ ಅತಿ ಹೆಚ್ಚು ಹೂಡಿಕೆ ಮಾಡಿಸಿಕೊಂಡಿದ್ದು, ಅಲ್ಲಿನ ಪೊಲೀಸರ ಸಹಕಾರದೊಂದಿಗೆ ತನಿಖೆ ಮುಂದುವರಿದಿದೆ.
ಸದ್ಯಕ್ಕೆ 330 ಕೋಟಿ ರೂಪಾಯಿ ಆಸ್ತಿ ರಿಕವರಿಯಾಗುವ ಭರವಸೆ ಇದ್ದು, ವಶಪಡಿಸಿಕೊಂಡ ಸಂಪತ್ತನ್ನು ಕಟ್ಟುನಿಟ್ಟಿನ 'ಬಡ್ಸ್ ಕಾಯ್ದೆ'ಯ (BUDS Act) ಮುಖ್ಯಸ್ಥರಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಹಸ್ತಾಂತರಿಸಲಾಗುವುದು. ತದನಂತರ ಕಾನೂನು ಪ್ರಕ್ರಿಯೆಗಳ ಮೂಲಕ ವಂಚನೆಗೊಳಗಾದ ಸಾರ್ವಜನಿಕರಿಗೆ ಹಣವನ್ನು ಮರುಪಾವತಿಸಲಾಗುವುದು ಎಂದು ಸಿಐಡಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅದೃಷ್ಟವಶಾತ್ ಕಂಪನಿ ಪೂರ್ತಿ ಮುಳುಗುವ ಮುನ್ನವೇ ಜಾಗೃತರಾದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿ ಭಾರಿ ದುರಂತವನ್ನು ತಪ್ಪಿಸಿದೆ.
ಮುಂದಿನ 30 ವರ್ಷಗಳ ಅವಧಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಕಸ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಕಂಪನಿಗೆ ವಹಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಧೋರಣೆಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ರಾಜಧಾನಿಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ 39,437 ಕೋಟಿ ಮೊತ್ತದ ಬೃಹತ್ ಟೆಂಡರ್ ಪ್ರಕ್ರಿಯೆಯನ್ನು ಮರುಪರಿಶೀಲಿಸಲು ಮತ್ತು ತನಿಖೆ ನಡೆಸಲು ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ
ಟೆಂಡರ್ ನಿಯಮ ಮತ್ತು ಹಣಕಾಸು ಇಲಾಖೆಯ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸರ್ಕಾರವು 4 ಸದಸ್ಯರ ಸಮಿತಿಯನ್ನು ನೇಮಿಸಿದೆ. ಈ ಸಮಿತಿಯಲ್ಲಿ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ.ಸಿ. ಜಾಫರ್, ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯ ಎಂಜಿನಿಯರ್ ಹಾಗೂ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಇರಲಿದ್ದಾರೆ.
ಹಣಕಾಸು ಇಲಾಖೆ ಆಕ್ಷೇಪಣೆಗಳೇನು?
ಬೆಂಗಳೂರಿನ ಕಸ ನಿರ್ವಹಣೆಯ ಈ ಮೆಗಾ ಯೋಜನೆಯು ಭವಿಷ್ಯದಲ್ಲಿ ನಗರಕ್ಕೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಭಾರಿ ಆರ್ಥಿಕ ಹೊರೆಯಾಗಲಿದೆ ಎಂದು ಹಣಕಾಸು ಇಲಾಖೆ ಎಚ್ಚರಿಸಿದೆ. ಈ ಯೋಜನೆಗಾಗಿ ಸರ್ಕಾರವು ಆರಂಭದಲ್ಲಿ 33,047 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಿತ್ತು. ಆದರೆ, ಬಿಡ್ ಸಲ್ಲಿಸಿರುವ ಕಂಪನಿಯು 39,437 ಕೋಟಿ ರೂ. ಮೊತ್ತವನ್ನು ಕೋಟ್ ಮಾಡಿದೆ. ಇದು ಸರ್ಕಾರದ ಮೂಲ ಅಂದಾಜಿಗಿಂತ ಬರೋಬ್ಬರಿ 6,390 ಕೋಟಿ ರೂ. ಅಧಿಕವಾಗಿದೆ.
ಟೆಂಡರ್ ಒಪ್ಪಂದದ ಪ್ರಕಾರ, ಪ್ರತಿ ವರ್ಷ ಕಸ ನಿರ್ವಹಣೆಯ ವೆಚ್ಚದಲ್ಲಿ ಶೇ. 5ರಷ್ಟು ದರ ಏರಿಕೆ ಮಾಡಲು ಅವಕಾಶ ನೀಡಲಾಗಿದೆ. ಹೀಗೆ ವಾರ್ಷಿಕ ಶೇ 5 ರಂತೆ ಚಕ್ರಬಡ್ಡಿ ಮಾದರಿಯಲ್ಲಿ ದರ ಹೆಚ್ಚಾಗುತ್ತಾ ಹೋದರೆ, 30 ವರ್ಷಗಳ ಅವಧಿ ಮುಗಿಯುವಾಗ ಕಸ ನಿರ್ವಹಣೆಯ ವೆಚ್ಚವು ಈಗಿರುವುದಕ್ಕಿಂತ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚಾಗಲಿದೆ ಎಂದು ಹಣಕಾಸು ಇಲಾಖೆ ಎಚ್ಚರಿಸಿದೆ.
‘ವೆಂಡರ್ ಲಾಕ್-ಇನ್’ ನಿರ್ಮಾಣ
ಇಡೀ ಬೆಂಗಳೂರು ಮಹಾನಗರದ ಕಸದ ಜವಾಬ್ದಾರಿಯನ್ನು ಮೂರು ದಶಕಗಳ ಕಾಲ ಒಂದೇ ಒಂದು ಖಾಸಗಿ ಸಂಸ್ಥೆಗೆ ವಹಿಸುವುದರಿಂದ ‘ವೆಂಡರ್ ಲಾಕ್-ಇನ್’ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಕಂಪನಿಯು ಸರಿಯಾಗಿ ಕೆಲಸ ಮಾಡದಿದ್ದರೂ ಅಥವಾ ಏಕಸ್ವಾಮ್ಯ ಸಾಧಿಸಿದರೂ ಸರ್ಕಾರ ಅದರ ಮೇಲೆಯೇ ಅವಲಂಬಿತವಾಗಬೇಕಾಗುತ್ತದೆ.
"ಕಸ ಸಂಸ್ಕರಣಾ ಘಟಕಗಳಿಗೆ ಸರ್ಕಾರವೇ ಭೂಮಿಯನ್ನು ಒದಗಿಸುತ್ತಿರುವಾಗ, ಖಾಸಗಿ ಕಂಪನಿಗೆ ಇಷ್ಟು ದೀರ್ಘಾವಧಿಯ ಗುತ್ತಿಗೆ ನೀಡುವ ಅಗತ್ಯವಿಲ್ಲ" ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಬೆಂಗಳೂರಿನ ಕಸ ನಿರ್ವಹಣೆಯ ಈ ವಿವಾದಿತ ಬೃಹತ್ ಟೆಂಡರ್ ಅನ್ನು ದೆಹಲಿ ಮೂಲದ ‘ಡೆಲ್ಲಿ ಎಂಎಸ್ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್’ ಸಂಸ್ಥೆಗೆ ನೀಡಲಾಗಿತ್ತು. ಈಗ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯು ನೀಡುವ 7 ದಿನಗಳ ವರದಿಯ ಆಧಾರದ ಮೇಲೆ, ಈ ಕೋಟ್ಯಂತರ ರೂಪಾಯಿಗಳ ಟೆಂಡರ್ ರದ್ದಾಗಲಿದೆಯೇ ಅಥವಾ ನಿಯಮಗಳಲ್ಲಿ ಬದಲಾವಣೆಯಾಗಲಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.

