
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು ಹಾಗೂ ವ್ಯಾಪಾರಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದರು.
ಯಶವಂತಪುರ ಎಪಿಎಂಸಿಗೆ ಸಿಎಂ ಡಿಕೆಶಿ ದಿಢೀರ್ ಭೇಟಿ: ರೈತರ ಅಹವಾಲು ಸ್ವೀಕಾರ
ರೈತರು ಯಾವ ಊರಿನಿಂದ ಬಂದಿದ್ದಾರೆ, ಎಷ್ಟು ಎಕರೆ ಜಮೀನಿದೆ, ಬೆಳೆಗಳಿಗೆ ಎಷ್ಟು ದರ ಸಿಗುತ್ತಿದೆ ಮತ್ತು ಕೃಷಿಯಿಂದ ಎಷ್ಟು ಆದಾಯ ಉಳಿಯುತ್ತದೆ ಎಂಬುದನ್ನು ಡಿಕೆ ಶಿವಕುಮಾರ್ ವಿಚಾರಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು ಹಾಗೂ ವ್ಯಾಪಾರಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸಿದರು. ಈ ವೇಳೆ ಈರುಳ್ಳಿ ಮಂಡಿಯಲ್ಲಿ ರೈತರೊಂದಿಗೆ ಕುಳಿತು ಬೆಲೆ, ತೂಕ, ಕಮಿಷನ್ ಹಾಗೂ ಮಧ್ಯವರ್ತಿಗಳ ಹಾವಳಿ ಕುರಿತು ಮಾಹಿತಿ ಪಡೆದುಕೊಂಡರು.
ಈರುಳ್ಳಿ ಮಂಡಿಯಲ್ಲಿ ರೈತರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತೂಕದಲ್ಲಿ ಯಾವುದೇ ರೀತಿಯ ವಂಚನೆ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ರೈತರು ತೂಕದಲ್ಲಿ ಮೋಸವಾಗುತ್ತಿಲ್ಲ ಎಂದು ಉತ್ತರಿಸಿದರು. ಮಾರುಕಟ್ಟೆಗೆ ಬರಲು ಯಾರಾದರೂ ಒತ್ತಡ ಹೇರುತ್ತಾರೆಯೇ, ದಲ್ಲಾಳಿಗಳು ಅಥವಾ ಬ್ರೋಕರ್‌ಗಳಿಂದ ತೊಂದರೆ ಇದೆಯೇ, ಎಷ್ಟು ಕಮಿಷನ್ ನೀಡಬೇಕು ಎಂಬ ಬಗ್ಗೆಯೂ ಉಪಮುಖ್ಯಮಂತ್ರಿ ಮಾಹಿತಿ ಪಡೆದರು. ಬಳಿಕ ಈರುಳ್ಳಿ, ಬೆಳ್ಳುಳ್ಳಿ, ತೆಂಗಿನಕಾಯಿ ಹಾಗೂ ಆಲೂಗಡ್ಡೆ ಮಾರಾಟ ನಡೆಯುವ ಸ್ಥಳಗಳಿಗೂ ತೆರಳಿ ರೈತರು ಮತ್ತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು.
65 ಕೆಜಿ ಮೂಟೆಗೆ 50 ಕೆಜಿ ಲೆಕ್ಕ: ರೈತನ ಆರೋಪ
ಚಿತ್ರದುರ್ಗ ಸೇರಿದಂತೆ ಕೆಲವು ಭಾಗಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟದ ವೇಳೆ ಸಮಸ್ಯೆಗಳು ಎದುರಾಗುತ್ತಿವೆ ಎಂದು ರೈತರು ಡಿಕೆಶಿ ಬಳಿ ಅಳಲು ತೋಡಿಕೊಂಡರು. ಮಧ್ಯವರ್ತಿಗಳ ಹಸ್ತಕ್ಷೇಪದಿಂದ ತೊಂದರೆಯಾಗುತ್ತಿದೆ ಎಂದು ಹೇಳಿದ ರೈತರೊಬ್ಬರು, 65 ಕೆಜಿ ತೂಕದ ಈರುಳ್ಳಿ ಮೂಟೆಯನ್ನು ಕೆಲವೊಮ್ಮೆ 50 ಕೆಜಿ ಲೆಕ್ಕದಲ್ಲಿ ಪರಿಗಣಿಸಲಾಗುತ್ತಿದೆ ಎಂದು ಆರೋಪಿಸಿದರು. ಯಶವಂತಪುರ ಎಪಿಎಂಸಿಯಲ್ಲಿ ಮಾರಾಟ ಮಾಡಿದರೆ ಉತ್ತಮ ದರ ಸಿಗುತ್ತದೆ ಎಂಬ ಕಾರಣಕ್ಕೆ ದೂರದ ಪ್ರದೇಶಗಳಿಂದಲೂ ರೈತರು ಇಲ್ಲಿಗೆ ಬರುತ್ತಿರುವುದಾಗಿ ತಿಳಿಸಿದರು.
ರೈತರ ಜೀವನೋಪಾಯದ ಬಗ್ಗೆಯೂ ವಿಚಾರಣೆ
ರೈತರು ಯಾವ ಪ್ರದೇಶದಿಂದ ಬಂದಿದ್ದಾರೆ, ಬೆಳೆಗಳಿಗೆ ಸಿಗುತ್ತಿರುವ ದರ ಎಷ್ಟಿದೆ, ಎಷ್ಟು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ, ಕೃಷಿಯಿಂದ ಎಷ್ಟು ಆದಾಯ ಉಳಿಯುತ್ತದೆ ಎಂಬ ಬಗ್ಗೆ ಡಿಕೆಶಿ ಪ್ರಶ್ನಿಸಿದರು. ಕಳೆದ ವರ್ಷದ ಆದಾಯ ಮತ್ತು ಕುಟುಂಬದ ಪರಿಸ್ಥಿತಿಯ ಬಗ್ಗೆಯೂ ಮಾಹಿತಿ ಪಡೆದರು.
ಚಳ್ಳಕೆರೆ ಭಾಗದ ರೈತರೊಬ್ಬರೊಂದಿಗೆ ಮಾತನಾಡುವ ವೇಳೆ ಜಮೀನಿನಲ್ಲಿ ವಿದ್ಯುತ್ ಹಾಗೂ ರಸ್ತೆ ಸೌಲಭ್ಯವಿಲ್ಲದಿರುವ ವಿಚಾರ ಬೆಳಕಿಗೆ ಬಂತು. ಜಮೀನಿನಲ್ಲೇ ಸಣ್ಣ ಮನೆ ನಿರ್ಮಿಸಿಕೊಂಡಿದ್ದು, ವಿದ್ಯುತ್ ಸೌಲಭ್ಯವೂ ಸಮರ್ಪಕವಾಗಿಲ್ಲ ಎಂದು ರೈತ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ವಿದ್ಯುತ್ ಸಂಪರ್ಕಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ರಸ್ತೆ ಸಮಸ್ಯೆಯನ್ನೂ ನಂತರ ಪರಿಶೀಲಿಸುವುದಾಗಿ ಹೇಳಿ ರೈತನ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡರು.
ಗೃಹಲಕ್ಷ್ಮಿ, ಗೃಹಜ್ಯೋತಿ ಬಗ್ಗೆ ರೈತರ ಬಳಿ ಮಾಹಿತಿ
ಮಹಿಳಾ ರೈತರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿದೆಯೇ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದೀರಾ ಎಂಬುದನ್ನೂ ವಿಚಾರಿಸಿದರು. ಚಳ್ಳಕೆರೆ ಮೂಲದ ರೈತರೊಬ್ಬರು ಯೋಜನೆಗಳ ಪ್ರಯೋಜನ ದೊರೆಯುತ್ತಿದೆ ಎಂದು ತಿಳಿಸಿದರು. ಇದಕ್ಕೆ ಡಿಕೆಶಿ ಶುಭ ಹಾರೈಸಿದರು.
ಆಲೂಗಡ್ಡೆ ಮಾರುಕಟ್ಟೆಗೆ ತೆರಳಿದ ಡಿ.ಕೆ. ಶಿವಕುಮಾರ್, ಉತ್ಪನ್ನದ ಗುಣಮಟ್ಟ, ಹರಾಜು ಪ್ರಕ್ರಿಯೆ ಹಾಗೂ ಕಮಿಷನ್ ಕುರಿತು ಮಾಹಿತಿ ಪಡೆದರು. ಇಲ್ಲಿಗೆ ವ್ಯಾಪಾರಿಗಳು ಬಂದು ಆಲೂಗಡ್ಡೆ ಖರೀದಿಸುತ್ತಾರೆ. ಸುಮಾರು ಶೇ.6ರಷ್ಟು ಕಮಿಷನ್ ನೀಡಬೇಕಾಗುತ್ತದೆ. ಬಳಿಕ ಉತ್ಪನ್ನವನ್ನು ಬೇರೆ ಮಾರುಕಟ್ಟೆಗಳಿಗೆ ಕೊಂಡೊಯ್ದು ಮಾರಾಟ ಮಾಡಲಾಗುತ್ತದೆ ಎಂದು ಮಹಿಳಾ ರೈತರೊಬ್ಬರು ವಿವರಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಂಚನೆ ನಡೆಯುತ್ತಿದೆಯೇ ಎಂದು ಡಿಕೆಶಿ ಪ್ರಶ್ನಿಸಿದಾಗ, ಅಂತಹ ಸಮಸ್ಯೆ ಇಲ್ಲ ಎಂದು ಮಹಿಳೆ ತಿಳಿಸಿದರು. ತಿಂಗಳಿಗೆ ಎಷ್ಟು ಬಾರಿ ಮಾರುಕಟ್ಟೆಗೆ ಬರುತ್ತೀರಿ, ಒಂದು ಪ್ರಮಾಣದ ಉತ್ಪನ್ನ ಮಾರಾಟ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದರ ಬಗ್ಗೆಯೂ ಅವರು ಮಾಹಿತಿ ಪಡೆದರು.
'ನಾನು ಯಾರು ಗೊತ್ತಾ?' ಎಂದ ಡಿಕೆಶಿ; ಮಹಿಳೆಯ ಉತ್ತರಕ್ಕೆ ನಗು
ಮಹಿಳಾ ರೈತರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಡಿಕೆಶಿ ಪ್ರಶ್ನೆಗಳನ್ನು ಕೇಳಿದರು. ಉಚಿತ ವಿದ್ಯುತ್, ಮಹಿಳೆಯರಿಗೆ ನೀಡಲಾಗುತ್ತಿರುವ ಹಣ ಹಾಗೂ ಬಸ್ ಪ್ರಯಾಣದ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ಈ ಯೋಜನೆಗಳ ಬಗ್ಗೆ ಮಾತನಾಡಿದ ಮಹಿಳೆ, ಸಿದ್ದರಾಮಯ್ಯ ಅವರ ಸರ್ಕಾರದಿಂದ ಇವು ಜಾರಿಯಾಗಿವೆ ಎಂದು ಹೇಳಿದರು. ತಮ್ಮ ಕುಟುಂಬ ಹಲವು ವರ್ಷಗಳಿಂದ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾ ಬಂದಿದೆ ಎಂದು ಕೂಡ ತಿಳಿಸಿದರು.
ಈ ವೇಳೆ ಡಿ.ಕೆ. ಶಿವಕುಮಾರ್ ಅವರು, "ನಾನು ಯಾರು ಗೊತ್ತಾ?" ಎಂದು ಪ್ರಶ್ನಿಸಿದಾಗ, ಮಹಿಳೆ ಸರಳವಾಗಿ "ಇಲ್ಲ ಸ್ವಾಮಿ" ಎಂದು ಉತ್ತರಿಸಿದರು. ಮಹಿಳೆಯ ಮುಗ್ಧ ಉತ್ತರಕ್ಕೆ ಡಿಕೆಶಿ ಮಂದಹಾಸ ಬೀರಿದರು.
30-40 ವರ್ಷಗಳ ಬಳಿಕ ಎಪಿಎಂಸಿಗೆ ಸಚಿವರ ಭೇಟಿ: ರೈತರ ಮೆಚ್ಚುಗೆ
ಮುಖ್ಯಮಂತ್ರಿಗಳ ಭೇಟಿ ಕುರಿತು ರೈತರು ಸಂತಸ ವ್ಯಕ್ತಪಡಿಸಿದರು. ಹಲವು ದಶಕಗಳಿಂದ ಎಪಿಎಂಸಿ ಮಾರುಕಟ್ಟೆಗೆ ಈ ರೀತಿಯಾಗಿ ಹಿರಿಯ ಜನಪ್ರತಿನಿಧಿಗಳು ಬಂದು ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಿರಲಿಲ್ಲ ಎಂದು ಕೆಲವರು ಹೇಳಿದರು. "ನೀವು ಬಂದಿರುವುದರಿಂದ ನಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಲು ಸಾಧ್ಯವಾಗಿದೆ. 30ರಿಂದ 40 ವರ್ಷಗಳಿಂದ ಎಪಿಎಂಸಿಗೆ ಇಂತಹ ಭೇಟಿ ನಡೆದಿರಲಿಲ್ಲ" ಎಂದು ರೈತರು ಡಿಕೆಶಿ ಅವರ ಭೇಟಿಯನ್ನು ಸ್ವಾಗತಿಸಿದರು.
ರೈತರ ಅಹವಾಲುಗಳನ್ನು ಆಲಿಸಿದ ಡಿ.ಕೆ. ಶಿವಕುಮಾರ್, ಮಾರುಕಟ್ಟೆಯಲ್ಲಿನ ವಹಿವಾಟು, ಬೆಲೆ, ಕಮಿಷನ್, ತೂಕ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ಸಂಗ್ರಹಿಸಿದರು.

