ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ - ಡಿ.ಕೆ.ಶಿವಕುಮಾರ್
x

ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ - ಡಿ.ಕೆ.ಶಿವಕುಮಾರ್

ರಾಮಲಿಂಗಾ ರೆಡ್ಡಿ ಅವರು ವಾಟ್ಸ್‌ಆ್ಯಪ್ ಮೂಲಕ ರಾಜೀನಾಮೆ ಕಳುಹಿಸಿದ್ದು ಸತ್ಯ, ಆದರೆ ನಾವು ಆ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದೇವೆ. ಅವರು ಮುಂದುವರಿಯಲಿದ್ದಾರೆ


Click the Play button to hear this message in audio format

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭಿಕ ದಿನಗಳಲ್ಲಿಯೇ ಸಚಿವ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಸಂಕಷ್ಟಕ್ಕೆ ಸಿಲುಕಿದ್ದ ಡಿ.ಕೆ. ಶಿವಕುಮಾರ್, ಇದೀಗ ಆ ಬಿಕ್ಕಟ್ಟನ್ನು ರಾಜತಾಂತ್ರಿಕವಾಗಿ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ರಾಮಲಿಂಗಾ ರೆಡ್ಡಿ ನನ್ನ ಆಪ್ತ ಸ್ನೇಹಿತರು, ಅವರೊಂದಿಗೆ ಚರ್ಚಿಸಲಾಗಿದೆ, ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿವಾದದ ತೀವ್ರತೆಯನ್ನು ತಗ್ಗಿಸಲು ಪ್ರಯತ್ನಿಸಿದರು. ಅನಗತ್ಯವಾಗಿ ತಲೆಕೆಡಿಸಿಕೊಂಡು ವದಂತಿಗಳನ್ನು ಸೃಷ್ಟಿಸಬೇಡಿ. ರಾಮಲಿಂಗಾ ರೆಡ್ಡಿ ಅವರು ವಾಟ್ಸ್‌ಆ್ಯಪ್ ಮೂಲಕ ರಾಜೀನಾಮೆ ಕಳುಹಿಸಿದ್ದು ಸತ್ಯ, ಆದರೆ ನಾವು ಆ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದೇವೆ. ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಸರ್ಕಾರದ ಬಿಕ್ಕಟ್ಟಿನ ಸುದ್ದಿಯ ನಡುವೆಯೇ, ಕಾಂಗ್ರೆಸ್ ತನ್ನ ಮುಂದಿನ ಚುನಾವಣಾ ತಂತ್ರಗಾರಿಕೆ ಮುಂದುವರಿಸಿದೆ. ರಾಜ್ಯಸಭೆಯ 3 ಸ್ಥಾನಗಳಿಗೆ ಮತ್ತು ವಿಧಾನ ಪರಿಷತ್ತಿನ 5 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ವಕ್ತಾರ ಪವನ್ ಖೇರಾ ಮತ್ತು ಯುವ ಮುಖಂಡ ಮನ್ಸೂರ್ ಅಲಿ ಖಾನ್ ಅವರು ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ವಿಧಾನ ಪರಿಷತ್‌ನ ಎಲ್ಲ ಐದು ಸ್ಥಾನಗಳಿಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ ಎಂದರು. ಈ ಮೂಲಕ ಪಕ್ಷದ ಸಂಘಟನೆಯನ್ನು ಬಲಪಡಿಸುವ ಮತ್ತು ಹಿರಿಯ ಹಾಗೂ ಯುವ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನವನ್ನು ಡಿಕೆಶಿ ನಡೆಸಿದ್ದಾರೆ.

ಮೋದಿ ಹೇಳಿಕೆಗೆ ಡಿಕೆಶಿ ತಿರುಗೇಟು

ರಾಜ್ಯದಲ್ಲಿ ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆಯಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಪ್ರಧಾನಿ ಮೋದಿ ಅವರು ನನಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶುಭ ಕೋರಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾವು ಗೌರವಯುತವಾಗಿ ಅವರ ಭೇಟಿಗೆ ಹೋಗುತ್ತೇವೆ. ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವಾಗ ರಾಜಕೀಯವನ್ನು ಬದಿಗಿಟ್ಟು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಉತ್ತಮ ಸಮನ್ವಯ ಸಾಧಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು. ಪ್ರಧಾನಿಗಳ ಆರೋಪವನ್ನು ನೇರವಾಗಿ ಖಂಡಿಸದೆ, ರಾಜಕೀಯ ಸಂಘರ್ಷಕ್ಕಿಂತ ಅಭಿವೃದ್ಧಿಯೇ ಮುಖ್ಯ ಎಂಬ ಸಂದೇಶವನ್ನು ರವಾನಿಸಿದರು.

Read More
Next Story