
ಬಸವಕಲ್ಯಾಣದಿಂದಲೇ ಅಭಿವೃದ್ಧಿ ಪರ್ವ: ಸಿಎಂ ಉತ್ತರ ಕರ್ನಾಟಕ ಪ್ರವಾಸದ ಸಂಕಲ್ಪ
ಸೂಫಿ-ಸಂತರ ಸಾಮರಸ್ಯದ ಪರಂಪರೆಗೆ ಹೆಸರಾದ ಬೀದರ್ - ಕಲ್ಬುರ್ಗಿ ಜಿಲ್ಲೆಗಳಿಂದಲೇ ಈ ಪ್ರವಾಸವನ್ನು ಆರಂಭಿಸುತ್ತಿರುವುದು ರಾಜಕೀಯ, ಆಡಳಿತಾತ್ಮಕ ಹಾಗೂ ಸಾಂಸ್ಕೃತಿಕವಾಗಿ ವಿಶೇಷ ಮಹತ್ವ ಪಡೆದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಕೈಗೊಂಡಿರುವ ತಮ್ಮ ಮೊದಲ ಉತ್ತರ ಕರ್ನಾಟಕ ಪ್ರವಾಸವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ವಿಶೇಷವಾಗಿ ಬಸವಕಲ್ಯಾಣದಂತಹ ಪವಿತ್ರ ಹಾಗೂ ಐತಿಹಾಸಿಕ ನೆಲೆಯಿಂದ ತಮ್ಮ ಪ್ರವಾಸವನ್ನು ಆರಂಭಿಸಿರುವುದು ರಾಜಕೀಯ ಮತ್ತು ಸಾಮಾಜಿಕ ಸಂದೇಶವಾಗಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಾದಿ ಶರಣರ ಸಮಾನತೆಯ ನೆಲೆ ಬಸವಕಲ್ಯಾಣದಿಂದಲೇ ಆರಂಭಿಸಿದ್ದಾರೆ. ಸೂಫಿ-ಸಂತರ ಸಾಮರಸ್ಯದ ಪರಂಪರೆಗೂ ಹೆಸರಾದ ಬೀದರ್ ಮತ್ತು ಕಲ್ಬುರ್ಗಿ ಜಿಲ್ಲೆಗಳಿಂದಲೇ ಈ ಪ್ರವಾಸವನ್ನು ಆರಂಭಿಸುತ್ತಿರುವುದು ರಾಜಕೀಯ, ಆಡಳಿತಾತ್ಮಕ ಹಾಗೂ ಸಾಂಸ್ಕೃತಿಕವಾಗಿ ವಿಶೇಷ ಮಹತ್ವ ಪಡೆದಿದೆ.
ಬಸವಕಲ್ಯಾಣವು 12ನೇ ಶತಮಾನದ ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳ ಉಗಮ ಸ್ಥಾನ. ಸಮಾನತೆ ಮತ್ತು ಜನಕೇಂದ್ರಿತ ಆಡಳಿತದ ಪರಿಕಲ್ಪನೆಗೆ ಈ ನೆಲೆಯೇ ಸಾಕ್ಷಿ. ಡಿ.ಕೆ. ಶಿವಕುಮಾರ್ ಅವರು ಈ ಸ್ಥಳವನ್ನು ಆರಿಸಿಕೊಳ್ಳುವ ಮೂಲಕ, ತಮ್ಮ ಸರ್ಕಾರವೂ ಬಸವಾದಿ ಶರಣರ ತತ್ವಗಳ ಆಶಯದಂತೆ ಅಸಮಾನತೆಯನ್ನು ಹೋಗಲಾಡಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತದ ಫಲ ತಲುಪಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ. ಬೀದರ್ ಮತ್ತು ಕಲಬುರಗಿ ಜಿಲ್ಲೆಗಳು ಸೂಫಿ-ಸಂತರ ಸಾಮರಸ್ಯದ ಭೂಮಿಯೂ ಹೌದು. ಈ ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸ ಕೈಗೊಂಡಿರುವುದು ಅವರ ರಾಜಕೀಯ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ.
ವಿಧಾನಸೌಧದಿಂದ ಜನರ ಮನೆಬಾಗಿಲಿಗೆ
ಕಳೆದ ಒಂದು ತಿಂಗಳಿಂದ ವಿಧಾನಸೌಧದ ನಾಲ್ಕು ಗೋಡೆಗಳ ನಡುವೆ ನಿರಂತರವಾಗಿ ಅಧಿಕಾರಿಗಳ ಸಭೆಗಳನ್ನು ನಡೆಸುವ ಮೂಲಕ ಆಡಳಿತ ಯಂತ್ರಕ್ಕೆ ವೇಗ ನೀಡಿದ್ದ ಶಿವಕುಮಾರ್, ಇದೀಗ ನೇರವಾಗಿ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಕೇವಲ ಕಾಗದದ ಮೇಲೆ ಯೋಜನೆಗಳನ್ನು ಪರಿಶೀಲಿಸುವುದಕ್ಕಿಂತ, ಕ್ಷೇತ್ರದ ವಾಸ್ತವ ಸ್ಥಿತಿಗತಿಗಳನ್ನು ಅರಿತು ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡುವುದು ಈ ಪ್ರವಾಸದ ಪ್ರಮುಖ ಉದ್ದೇಶ. ಬರಗಾಲದ ಭೀತಿಯಲ್ಲಿರುವ ರಾಜ್ಯದ ರೈತರ ಸ್ಥಿತಿಗತಿ, ಕುಡಿಯುವ ನೀರಿನ ಅಭಾವ ಮತ್ತು ಅಗತ್ಯ ಮೂಲಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಈ ಪ್ರವಾಸ ಸಹಕಾರಿಯಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಸರ್ಕಾರದ ಪ್ರಮುಖ ಆದ್ಯತೆ
ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಭಾಗವು, ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬ ಕೊರಗು ಬಹಳ ದಿನಗಳಿಂದ ಇದೆ. ಈ ಪ್ರದೇಶದ ಶಿಕ್ಷಣ, ಆರೋಗ್ಯ, ನೀರಾವರಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಡಿ.ಕೆ. ಶಿವಕುಮಾರ್ ವಿಶೇಷ ಒತ್ತು ನೀಡಿದ್ದಾರೆ. ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ವಿಳಂಬವಾಗುತ್ತಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವುದು ಅವರ ಆದ್ಯತೆಯಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ, ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ.
ರಾಜಕೀಯ ಸಂಕಲ್ಪ ಹಾಗೂ ಕಾರ್ಯಕರ್ತರ ಹುಮ್ಮಸ್ಸು
ಈ ಪ್ರವಾಸ ಕೇವಲ ಅಧಿಕೃತ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಮುಖ್ಯಮಂತ್ರಿ ಅವರು ಪಕ್ಷದ ಕಚೇರಿಗೂ ಭೇಟಿ ನೀಡುತ್ತಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ. ಅಧಿಕಾರಕ್ಕೆ ಬಂದ ನಂತರ ಕಚೇರಿಗಳಿಗೆ ಸೀಮಿತವಾಗದೆ, ಕಾರ್ಯಕರ್ತರ ನಾಡಿಮಿಡಿತವನ್ನರಿತು ಅವರೊಂದಿಗೆ ಸಂವಾದ ನಡೆಸುವುದು ಪಕ್ಷ ಸಂಘಟನೆಗೆ ಬಲ ನೀಡಲಿದೆ. ಈ ಮಾದರಿಯನ್ನು ಇತರೆ ಸಚಿವರೂ ಪಾಲಿಸಿದರೆ, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪುವುದು ಮಾತ್ರವಲ್ಲದೆ, ಪಕ್ಷದ ತಳಹದಿಯೂ ಬಲಗೊಳ್ಳುತ್ತದೆ ಎಂಬ ಮಾತು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಈ ಪ್ರವಾಸದ ಹಿಂದಿರುವ ಬಹುಮುಖ್ಯ ಸಂದೇಶವೆಂದರೆ ಪ್ರಾದೇಶಿಕ ಸಮತೋಲನ. ಅಭಿವೃದ್ಧಿಯ ಬೆಳಕು ರಾಜ್ಯದ ಯಾವುದೇ ಭಾಗಕ್ಕೆ ವಂಚಿತವಾಗಬಾರದು ಎಂಬ ದೃಢ ನಿಲುವನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯು ರಾಜ್ಯದ ಒಟ್ಟಾರೆ ಆರ್ಥಿಕ ಪ್ರಗತಿಗೆ ಅವಶ್ಯಕವಾಗಿದೆ ಎಂಬ ಅರಿವು ಸರ್ಕಾರಕ್ಕಿದೆ. ಹೀಗಾಗಿ, ಈ ಪ್ರವಾಸವು ಸರ್ಕಾರಕ್ಕೆ ಆಡಳಿತಾತ್ಮಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಲ್ಲದೆ, ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ಬದ್ಧತೆಯನ್ನು ತೋರಿಸುತ್ತದೆ.
ಬರಗಾಲದ ಹಿನ್ನೆಲೆಯಲ್ಲಿ ನೀರಿನ ನಿರ್ವಹಣೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಯಂತಹ ದೊಡ್ಡ ಸವಾಲುಗಳು ಸರ್ಕಾರದ ಮುಂದಿವೆ. ಈ ಪ್ರವಾಸದ ನಂತರ, ಅಧಿಕಾರಿಗಳ ಕಾರ್ಯವೈಖರಿಯಲ್ಲಿ ನಿಜವಾದ ಬದಲಾವಣೆ ಆಗುತ್ತದೆಯೇ? ಅಥವಾ ಇದು ಕೇವಲ ಸಾಂಕೇತಿಕ ಪ್ರವಾಸವಾಗಿ ಉಳಿಯುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.

