ರಾಜಕಾರಣ ಹೊರಗೆ ಮಾಡೋಣ, ಇಲ್ಲಿ ಜನ ಸೇವೆ ಮಾಡೋಣ: ಸಿಎಂ ಡಿ ಕೆ ಶಿವಕುಮಾರ್
x

"ರಾಜಕಾರಣ ಹೊರಗೆ ಮಾಡೋಣ, ಇಲ್ಲಿ ಜನ ಸೇವೆ ಮಾಡೋಣ": ಸಿಎಂ ಡಿ ಕೆ ಶಿವಕುಮಾರ್

ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣಿನ ಮಗ ಎನ್ನುವ ಬಿರುದು ಸುಮ್ಮನೆ ಬಂದಿಲ್ಲ. ಅವರು ನಾಡಿನ ರೈತರ ಪರವಾಗಿ ಅಪಾರ ಹೋರಾಟ ಮಾಡಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.


Click the Play button to hear this message in audio format

"ನನಗೆ ರಾಜ್ಯದ ಜನರ ಸೇವೆ ಮಾಡಲು ಅನೇಕ ಕನಸುಗಳಿವೆ. ಈ ಕನಸುಗಳನ್ನು ಈಡೇರಿಸಲು ನೀವೆಲ್ಲರೂ ಸಹಕಾರ ನೀಡಿ. ರಾಜಕಾರಣ ಹೊರಗೆ ಮಾಡೋಣ. ಇಲ್ಲಿ ಸೇವೆ ಮಾಡೋಣ. ರಾಜ್ಯದ ಯಶಸ್ಸಿಗೆ ಒಟ್ಟಾಗಿ ನಡೆಯೋಣ. ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳೋಣ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಶುಕ್ರವಾರ ಮಾತನಾಡಿ, "ಈ ಹಿಂದೆ ಆಡಳಿತ ನಡೆಸಿದ ಅನೇಕರ ಸಾಕ್ಷಿಗುಡ್ಡೆಗಳನ್ನು ಅಳಿಸಲು ಆಗುತ್ತದೆಯೇ? ಎಲ್ಲರೂ ಸೇರಿ ಇತಿಹಾಸ ನಿರ್ಮಾಣ ಮಾಡೋಣ. ಅಧಿಕಾರ ಶಾಶ್ವತವಲ್ಲ. ಇಂದು ಬರುತ್ತದೆ, ನಾಳೆ ಹೋಗುತ್ತದೆ. ನಾವು ಮಾಡಿದ ಸಾಧನೆ ಮಾತ್ರ ಸಾಕ್ಷಿಗುಡ್ಡೆಯಾಗಿ ಉಳಿಯುತ್ತದೆ. ಜನರು ನಮ್ಮನ್ನು ನೆನಪಿಟ್ಟುಕೊಳ್ಳುವುದು ಅಧಿಕಾರದಿಂದಲ್ಲ, ನಾವು ಮಾಡಿದ ಕೆಲಸದಿಂದ. ಬಿಜೆಪಿ, ಕಾಂಗ್ರೆಸ್‌ನಲ್ಲಿ ಇದ್ದವರು ಈಗ ಅಂದರ್ ಬಾಹರ್ ಆಗಿದ್ದಾರೆ. ಅಧಿಕಾರ ಹೇಗೆಂದು ಅಳೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಪಕ್ಷೇತರರು ಸೇರಿ ಮುಖ್ಯಮಂತ್ರಿ ಮಾಡಿದರು. ಅಧಿಕಾರದ ಆಟ ಸಾಕಷ್ಟು ನಡೆಯಿತು. ‌ಅಂತಿಮವಾಗಿ ಉಳಿದದ್ದು ಅಧಿಕಾರವಲ್ಲ, ಮನುಷ್ಯತ್ವ. ಮಾಡಿದ ಕೆಲಸ" ಎಂದರು.

ಬಂಗಾರಪ್ಪ ಅವರು ನುಡಿದ ಭವಿಷ್ಯ ನಿಜವಾಗಿದೆ

"ಬಂಗಾರಪ್ಪ ಅವರು ಧರಂಸಿಂಗ್ ಅವರ ಬಳಿಯಿದ್ದ ಬಂಧೀಖಾನೆ ಖಾತೆಯನ್ನು ನನಗೆ ನೀಡಿದರು. ಆಗ ಅವರು ನಾನೂ ಈ ಖಾತೆ ನಿರ್ವಹಿಸಿ ಈಗ ಸಿಎಂ ಆಗಿದ್ದೀನಿ. ನೀನೂ ಒಂದಲ್ಲ‌ ಒಂದು ದಿನ ಸಿಎಂ‌ ಆಗುವೆ ಎಂದಿದ್ದರು.‌ ಈಗ ಅವರ ಭವಿಷ್ಯ ನಿಜವಾಗಿದೆ ನಾನು ಮಾನವೀಯತೆ ನಂಬುತ್ತೇನೆ. ನನ್ನ ಗುರುಗಳು ನನಗೆ ಇದನ್ನೇ ಹೇಳಿಕೊಟ್ಟಿದ್ದಾರೆ. ಈ ರಾಜ್ಯದ ಜನರ ಆಶೀರ್ವಾದ, ಪಕ್ಷದ ವರಿಷ್ಠರ ತೀರ್ಮಾನದಿಂದ, ನಮ್ಮ ಪಕ್ಷದ ಶಾಸಕರಿಂದ, ನಾನು ನಂಬಿದ ಗುರುಪೀಠ, ಮಠ, ಸರ್ವಧರ್ಮದ ಗುರುಗಳು ಹಾಗೂ ನನ್ನ ಪರವಾಗಿ ನಿಂತ,‌ ಹರಕೆ ಕಟ್ಟಿದ ಜನರ ಪ್ರಾರ್ಥನೆಯಿಂದ ಸಿಎಂ ಸ್ಥಾನವನ್ನು ಅಲಂಕರಿಸಿದ್ದೇನೆ. ನಾನು ಈಗ ಜನರ ಪ್ರತಿನಿಧಿ. ನಾವೆಲ್ಲರೂ ಸೇರಿ ರಾಜ್ಯದ ಜನರ ಸೇವೆಯನ್ನು ಮಾಡೋಣ ಎಂದು ಹೇಳಿದರು.

ಇತಿಹಾಸ ನೆನಪಿಸಿಕೊಂಡ ಸಿಎಂ

ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಬಳಸಿಕೊಳ್ಳಬೇಕು. ಕೆಂಗಲ್ ‌ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಕೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ‌ಹನುಮಂತಯ್ಯ ಅವರ ಮೇಲೆ ಕೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದು ಇತಿಹಾಸ. ಇಷ್ಟೆಲ್ಲ ಆಗಿ, ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರಿಗೇ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ. ಎಸ್ ಎಂ ಕೃಷ್ಣ ಅವರ ಫಲವೇ ವಿಕಾಸಸೌಧ. ಇದರ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಅವರಿಗೆ ಕುರ್ಚಿ ಮೀಸಲಿಡಲಾಗಿತ್ತು. ಆ ಕುರ್ಚಿ ಮೇಲೆ ಲೋಕೋಪಯೋಗಿ ಸಚಿವರಾಗಿದ್ದ ಧರಂಸಿಂಗ್ ಅವರನ್ನು ಕೂರಿಸಿದರು. ಆಗ ನನಗೆ ಭವಿಷ್ಯ ಕಣ್ಣ ಮುಂದೆ ಬಂದಿತು. ನಂತರ ಧರ್ಮಸಿಂಗ್ ಅವರೇ ಮುಖ್ಯಮಂತ್ರಿಯಾದರು ಎಂದು ಇತಿಹಾಸ ನೆನಪಿಸಿಕೊಂಡರು.

8 ಸಲ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಅವರುಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಜೆ.ಎಚ್ ಪಟೇಲ್ ಅವರಷ್ಟು ಅತ್ಯಂತ ಹೃದಯ ವೈಶಾಲ್ಯತೆಯಿದ್ದ ನಾಯಕರನ್ನು ಇಂದಿಗೂ ನೋಡಿಲ್ಲ. ಬೊಮ್ಮಾಯಿ ಅವರ ಆಡಳಿತ ಹಾಗೂ ಅವರನ್ನು ಅಧಿಕಾರದ ಕುರ್ಚಿಯಿಂದ ಇಳಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ. ಬಂಗಾರಪ್ಪ ಅವರ ಕಾಲದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಬಂತು. ಈಗಲೂ ಅಂದು ಮುಂದುವರಿದಿದೆ. ಆಗ 1 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈಗ ಅದು 20 ಸಾವಿರ ಕೋಟಿಯಾಗಿದೆ. ಬಂಗಾರಪ್ಪ ಅವರು ಇಂದು ಬದುಕಿಲ್ಲ. ಅವರು ಜಾರಿ ಮಾಡಿದ ಯೋಜನೆ ಜೀವಂತವಾಗಿದೆ. ವೀರಪ್ಪ ಮೊಯ್ಲಿ ಅವರು ಸಿಇಟಿ ಪ್ರಾರಂಭ ಮಾಡಿದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ಇಂದು ಕರ್ನಾಟಕ ಈ ದೇಶಕ್ಕೆ ಎಂಜಿನಿಯರ್, ಡಾಕ್ಟರ್‌ಗಳನ್ನು ನೀಡಿದ ರಾಜ್ಯವಾಗಿದೆ ಎಂದು ಬಣ್ಣಿಸಿದರು.

ಮಣ್ಣಿನ ಮಗ ಬಿರುದು ಸುಮ್ಮನೆ ಬಂದಿಲ್ಲ

ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣಿನ ಮಗ ಎನ್ನುವ ಬಿರುದು ಸುಮ್ಮನೆ ಬಂದಿಲ್ಲ. ಅವರು ನಾಡಿನ ರೈತರ ಪರವಾಗಿ ಅಪಾರ ಹೋರಾಟ ಮಾಡಿದ್ದಾರೆ. ಅನೇಕ ನೀರಾವರಿ ಯೋಜನೆಗಳನ್ನು ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಕೂಡ ಅವರೇ. ಕುಮಾರಸ್ವಾಮಿ ಹಾಗೂ ನಮ್ಮ ನಡುವೆ ರಾಜಕೀಯ ವೈರುಧ್ಯ ಇರಬಹುದು. ಆದರೆ, ಅವರ ಪೆರಿಫೆರಲ್ ರಿಂಗ್ ರಸ್ತೆ, ಬಿಡದಿ ಸೇರಿದಂತೆ 5 ಟೌನ್ ಶಿಪ್ ನಿರ್ಮಾಣದಂತಹ ಯೋಜನೆಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಬೆಂಗಳೂರಿನ ಬೆಳವಣಿಗೆಗೆ ಅವರ ಅಪಾರ ಕೊಡುಗೆ. ಫೆರಿಫೆರಲ್ ರಿಂಗ್ ರೋಡ್ -2 ಯೋಜನೆ ರೂಪಿಸಿದರು. ಅವರಿಗೆ ಸಮಯದ ಅಭಾವವೋ, ತೊಡಕುಗಳು ಎದುರಾಯಿತೋ ಏನೋ ಯೋಜನೆ ಜಾರಿ ಮಾಡಲಾಗಲಿಲ್ಲ ಎಂದರು.

ಕುಮಾರಸ್ವಾಮಿಯವರ ಬಿಡದಿ ಟೌನ್ ಶಿಪ್ ಉತ್ತಮ ಯೋಜನೆ

ತಮ್ಮ ಭಾಷಣದ ಉದ್ದಕ್ಕೂ ಬಿಡದಿ ಟೌನ್‌ಶಿಪ್‌ ಯೋಜನೆಯ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಿಸಿದ ಸಿಎಂ ಇದು ಉತ್ತಮ ಯೋಜನೆ ಎಂದರು.‌ ಆದರೆ ಈಗ ಕೆಲವು ಒತ್ತಡಗಳಿಂದ ಕುಮಾರಸ್ವಾಮಿ ಅವರು ರಾಜಕೀಯ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಬೇಸರಿಸಿಕೊಳ್ಳುವುದಿಲ್ಲ. ಜೊತೆಗೆ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಆಗಿದ್ದ 1 ಸಾವಿರ ಎಕರೆ ಕೈಗಾರಿಕಾ ಪ್ರದೇಶದ ಬಗ್ಗೆಯೂ ಪ್ರಸ್ತಾಪಿಸಿದರು. ದೇವೇಗೌಡರ ನೈಸ್ ರಸ್ತೆ ಯೋಜನೆ ಅತ್ಯುತ್ತಮ ಎಂದು ಶ್ಲಾಘಿಸಿದರು.

ಸಿಎಸ್ ಆರ್ ದುರ್ಬಳಕೆಗೆ ಕಡಿವಾಣ

8 ಸಾವಿರ ಕೋಟಿ ಸಿಎಎಸ್‌ಆರ್ ಅನುದಾನವಿದೆ. ಎಲ್ಲವೂ ದುರ್ಬಳಕೆಯಾಗುತ್ತಿದೆ. ಶೇ.50ರಷ್ಟು ಮೊತ್ತ ವಾಪಸ್ಸು ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯದ ಪ್ರತಿಯೊಬ್ಬರಿಗೂ ಒಳ್ಳೆಯ ಶಿಕ್ಷಣ, ಉದ್ಯೋಗ ವ್ಯವಸ್ಥೆ ಮಾಡುವ ಗುರಿಯೊಂದಿಗೆ, ಈ ಸಿಎಸ್‌ಆರ್ ಅನುದಾನವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಹೊಸ ಸಿಎಸ್‌ಆರ್ ಯೋಜನೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಹಳ್ಳಿಯ ಜನರು ತುತ್ತು ಅನ್ನಕ್ಕಾಗಿ ವಲಸೆ ಹೋಗಬಾರದು. ಹಾಗೆಯೇ, ಬೆಂಗಳೂರು ಜನತೆ ಹೊರಗೆ ಹೋಗಬಾರದು. ಅದಕ್ಕಾಗಿ ಪಂಚಾಯಿತಿ ಮಟ್ಟದಲ್ಲೇ ಕಂಪನಿಗಳೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಿಎಸ್ ನಿಧಿಯನ್ನು ಬಳಸಿ ಅಭಿವೃದ್ಧಿಗೊಳಿಸುವ ಹೊಸ ನೀತಿಯನ್ನು ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.

Read More
Next Story