ವಿದ್ಯಾರ್ಥಿಗಳೇ ರಾಜ್ಯದ ರಾಯಭಾರಿಗಳು – ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ
x

ವಿದ್ಯಾರ್ಥಿಗಳೇ ರಾಜ್ಯದ ರಾಯಭಾರಿಗಳು – ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ

ಉನ್ನತ ಶಿಕ್ಷಣ ಇಲಾಖೆ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವು, ಪದವಿಪೂರ್ವ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಮತ್ತು ನಾಯಕತ್ವದ ತರಬೇತಿ ನೀಡುವ ಗುರಿಯನ್ನು ಹೊಂದಿದೆ.


Click the Play button to hear this message in audio format

ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಸ್ಕೌಟ್ 2.0 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಚಾಲನೆ ನೀಡಿದರು. ಉನ್ನತ ಶಿಕ್ಷಣ ಇಲಾಖೆ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು, ಪದವಿಪೂರ್ವ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಮತ್ತು ನಾಯಕತ್ವದ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಸ್ಕೌಟ್ ಕಾರ್ಯಕ್ರಮವನ್ನು ಕೇವಲ ಮೂರು ವರ್ಷಗಳಿಗೆ ಸೀಮಿತಗೊಳಿಸದೆ, ಇದನ್ನು ದೀರ್ಘಾವಧಿಗೆ ವಿಸ್ತರಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಬ್ರಿಟಿಷ್ ಕೌನ್ಸಿಲ್ ಜೊತೆಗಿನ ನಮ್ಮ ಈ ಸಹಯೋಗವು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದ ಮೂಲಕ ಭಾರತವನ್ನು ಜಗತ್ತು ನೋಡುತ್ತಿದೆ. ಬೆಂಗಳೂರು ಕೇವಲ ಒಂದು ನಗರವಲ್ಲ, ಇದು ಜಾಗತಿಕ ಪ್ರತಿಭೆಗಳ ತಾಣ. ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬಂದಿದ್ದೇವೆ ಎಂಬ ಕೀಳರಿಮೆ ಬಿಡಬೇಕು. ಚಾಮರಾಜನಗರದಿಂದ ಬೀದರ್ ವರೆಗಿನ ಪ್ರತಿ ವಿದ್ಯಾರ್ಥಿಯೂ ಸಮರ್ಥರು. ಇಂದು ತಂತ್ರಜ್ಞಾನದ ಯುಗದಲ್ಲಿ ಮಾಹಿತಿ ನಿಮ್ಮ ಬೆರಳತುದಿಯಲ್ಲಿದೆ. ಶಿಕ್ಷಕರಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳೇ ವೇಗವಾಗಿ ಕಲಿಯುವ ಮಟ್ಟಿಗೆ ಕಾಲ ಬದಲಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ಕಿವಿಮಾತು

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಆಲೋಚನೆಗಳು ದೂರದೃಷ್ಟಿಯಿಂದ ಕೂಡಿರಬೇಕು. ನೀವು ಈ ಕಾರ್ಯಕ್ರಮದ ಮೂಲಕ ಕೇವಲ ಪದವಿ ಪಡೆಯುತ್ತಿಲ್ಲ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದೀರಿ. ನೀವು ನಮ್ಮ ರಾಜ್ಯದ ರಾಯಭಾರಿಗಳು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ನಾಯಕರುಗಳನ್ನು ತಯಾರು ಮಾಡುವವನೇ ನಿಜವಾದ ನಾಯಕ ಎಂದರು. ವಿದ್ಯಾರ್ಥಿಗಳು ವಿದೇಶಿ ವ್ಯಾಸಂಗಕ್ಕೆ ಹೋಗುವುದನ್ನು ಸ್ವಾಗತಿಸಿದರೂ, ಅಲ್ಲಿಯೇ ನೆಲೆಸುವ ಪ್ರವೃತ್ತಿಯನ್ನು ಅವರು ಎಚ್ಚರಿಸಿದರು. ನೀವು ವಿದೇಶಕ್ಕೆ ಹೋಗಿ ಜ್ಞಾನವನ್ನು ಪಡೆಯಿರಿ, ಬ್ರಿಟನ್‌ನಲ್ಲಿ ಅಧ್ಯಯನ ಮಾಡಿ, ಆದರೆ ಅಲ್ಲಿಯೇ ನೆಲೆಸಬೇಡಿ. ಭಾರತಕ್ಕೆ ಮರಳಿ ಬನ್ನಿ, ನಿಮ್ಮ ಜ್ಞಾನವನ್ನು ನಿಮ್ಮ ನಾಡಿನ ಅಭಿವೃದ್ಧಿಗಾಗಿ ಬಳಸಿ. ನಿಮ್ಮ ಕ್ಷೇತ್ರದಲ್ಲಿ ನೀವು ಬೆಳೆಯಿರಿ, ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗುವ ಗುರಿ ನಿಮ್ಮದಾಗಲಿ ಎಂದು ಕರೆ ನೀಡಿದರು.

ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಬೇರುಗಳನ್ನು ಮರೆಯಬಾರದು ಎಂದು ಸಿಎಂ ಕಿವಿಮಾತು ಹೇಳಿದರು. ಯಶಸ್ಸು ಸಾಧಿಸುವ ಹಾದಿಯಲ್ಲಿ ಶಿಸ್ತು ಮತ್ತು ಪರಿಶ್ರಮ ಬಹಳ ಮುಖ್ಯ. ನೀವು ಯಾವುದೇ ಹಂತಕ್ಕೆ ಹೋದರೂ ನಿಮ್ಮ ಮೂಲವನ್ನು ಮರೆಯಬಾರದು. ಮೂಲವನ್ನು ಮರೆತರೆ ಸಾಧಿಸುವ ಯಶಸ್ಸು ಅಸ್ಥಿರವಾಗಿರುತ್ತದೆ. ಶ್ರದ್ಧೆಯಿಂದ ಕನಸು ಕಾಣಿ, ಆ ಕನಸನ್ನು ನನಸಾಗಿಸಿಕೊಳ್ಳಲು ಹಂಬಲಿಸಿ ಮತ್ತು ಅದಕ್ಕಾಗಿ ಬದ್ಧರಾಗಿ ಕೆಲಸ ಮಾಡಿ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಗಳ ಉಪಕುಲಪತಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿಗಳು, ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಿ. ಕಳೆದ ವರ್ಷ ಗ್ರಾಮೀಣ ಮಕ್ಕಳ ಸಾಧನೆ ಉತ್ತಮವಾಗಿತ್ತು, ಈ ವರ್ಷ ಅದು ಇನ್ನೂ ಹೆಚ್ಚಾಗಬೇಕು ಎಂದು ಆಶಿಸಿದರು.

Read More
Next Story