ಮಕ್ಕಳ ದಿನಾಚರಣೆಯಂದು ಕ್ಯಾನ್ಸರ್ ಪೀಡಿತ ಪುಟಾಣಿಗಳಿಗೆ ಆತ್ಮವಿಶ್ವಾಸ ತುಂಬಿದ ಸಿಎಂ
x

ಮಕ್ಕಳ ದಿನಾಚರಣೆಯಂದು ಕ್ಯಾನ್ಸರ್ ಪೀಡಿತ ಪುಟಾಣಿಗಳಿಗೆ ಆತ್ಮವಿಶ್ವಾಸ ತುಂಬಿದ ಸಿಎಂ

ಮಕ್ಕಳ ದಿನಾಚರಣೆ ನಿಮಿತ್ತ ಕಿದ್ವಾಯಿ ಆಸ್ಪತ್ರೆಯ ಕಪೂರ್ ಕಟ್ಟಡದ ಕೆಳಗಿದ್ದ ಮೊದಲ ವಾರ್ಡಿಗೆ ಡಿ.ಕೆ. ಶಿವಕುಮಾರ್ ಕಾಲಿಡುತ್ತಿದ್ದಂತೆ ಮಕ್ಕಳ, ಪೋಷಕರ ಕಣ್ಣುಗಳಲ್ಲಿ ಹೊಸ ನಿರೀಕ್ಷೆ ಮೂಡಿತು.


Click the Play button to hear this message in audio format

ಆಟವಾಡುತ್ತಾ, ನಲಿಯುತ್ತಾ ಬಾಲ್ಯದ ಸವಿ ಸವಿಯಬೇಕಾದ ಪುಟ್ಟ ಕಂದಮ್ಮಗಳು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಶನಿವಾರ ಮಕ್ಕಳ ದಿನಾಚರಣೆಯಂದು ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು. ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್ ವಿಭಾಗಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಾಯಿಲೆಯ ನೋವಿನಲ್ಲಿದ್ದ ಪುಟಾಣಿಗಳೊಂದಿಗೆ ಆತ್ಮೀಯವಾಗಿ ಬೆರೆತು ಧೈರ್ಯ ತುಂಬಿದರು. ಅವರ ಮಮತೆಯ ಮಾತುಗಳು, ಹಾರೈಕೆಗಳು ಪುಟ್ಟ ಮನಸ್ಸುಗಳಲ್ಲಿ ಕಾಯಿಲೆ ಗುಣವಾಗುವ ಆತ್ಮವಿಶ್ವಾಸದ ಹೊಸ ಬೆಳಕನ್ನು ಹರಿಸಿದವು.

ಶನಿವಾರ ಮಕ್ಕಳ ದಿನಾಚರಣೆಯ ನಿಮಿತ್ತ ಕಿದ್ವಾಯಿ ಆಸ್ಪತ್ರೆಯ ಕಪೂರ್ ಕಟ್ಟಡದ ಕೆಳಗಿದ್ದ ಮೊದಲ ವಾರ್ಡಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಲಿಡುತ್ತಿದ್ದಂತೆ ಮಕ್ಕಳ ಹಾಗೂ ಪೋಷಕರ ಕಣ್ಣುಗಳಲ್ಲಿ ಹೊಸ ನಿರೀಕ್ಷೆ ಮೂಡಿತು. ವಾರ್ಡಿನ ಪ್ರವೇಶದ್ವಾರದಲ್ಲೇ ಕ್ಯಾನ್ಸರ್ ಪೀಡಿತ ಬಾಲಕ ಧನುಷ್, ಮುಖ್ಯಮಂತ್ರಿಗಳಿಗೆ ಗುಲಾಬಿ ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಿದನು. ಬಾಲಕನನ್ನು ಪ್ರೀತಿಯಿಂದ ಮಾತನಾಡಿಸಿದ ಸಿಎಂ, "ಯಾವೂರು?" ಎಂದು ಕೇಳಿದರು. ಅದಕ್ಕೆ ಆ ಬಾಲಕ, "ನಂದು ಮಾಗಡಿ ಸಾರ್" ಎಂದು ಉತ್ತರಿಸಿದಾಗ ಸುತ್ತಲಿದ್ದವರ ಮುಖದಲ್ಲಿ ನಗು ಅರಳಿತು. ತಕ್ಷಣವೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ಮಾಗಡಿ! ಓಹೋ ಕೆಂಪೇಗೌಡರ ಊರು. ಧನುಷ್ ಅಂದರೆ ಏನು ಗೊತ್ತಾ? ಬಾಣ ಅಂತ. ನೀನು ಬಾಣದಂತಿರಬೇಕು, ಬಾಣ ಹೊಡೀತೀಯಾ? ಧನುಷ್ ನಿನಗೆ ಏನೂ ಆಗಲ್ಲ" ಎಂದು ಹೃದಯತುಂಬಿ ಶುಭ ಹಾರೈಸಿದರು. ಮುಖ್ಯಮಂತ್ರಿಗಳ ಈ ಆತ್ಮೀಯ ಹಾಗೂ ಧೈರ್ಯದ ಮಾತುಗಳನ್ನು ಕೇಳಿ ಅಲ್ಲಿದ್ದವರ ಕಣ್ಣುಗಳಲ್ಲಿ ಅರಿವಿಲ್ಲದೆಯೇ ಕಣ್ಣೀರು ಜಾರಿತ್ತು.

'ನೀನು ಅರ್ಜುನ, ಶಾಲೆಗೆ ಹೋಗಿ ಚೆನ್ನಾಗಿ ಓದು'

ಇದೇ ವಾರ್ಡಿನ ಹಾಸಿಗೆಯಲ್ಲಿ ಮಲಗಿದ್ದ ಮತ್ತೊಂದು ಪುಟಾಣಿಯನ್ನು ಕಂಡು ಸಿಎಂ, "ಏನಪ್ಪಾ, ಯಾವೂರು?" ಎಂದು ವಿಚಾರಿಸಿದರು. ತಕ್ಷಣವೇ ಎದ್ದು ಕುಳಿತ ಆ ಮಗು "ಹೊಸೂರು" ಎಂದಿತು. "ನಿನ್ನ ಹೆಸರೇನು?" ಎಂದು ಕೇಳಿದಾಗ "ಪಾರ್ಥಸಾರಥಿ" ಎಂದು ಮಗು ಉತ್ತರಿಸಿತು. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆ ಬಾಲಕನ ತಲೆ ಸವರಿದ ಸಿಎಂ, "ಓಹೋ, ಪಾರ್ಥ ಅಂದರೆ ಏನು ಗೊತ್ತಾ? ಅರ್ಜುನ ಅಂತ. ಅಂದರೆ ನೀನು ಅರ್ಜುನ. ನಿನಗೆ ಏನೂ ಆಗೋಲ್ಲ. ಶಾಲೆಗೆ ಹೋಗಿ ಚೆನ್ನಾಗಿ ಓದು, ತಲೆ ಕೆಡಿಸಿಕೊಳ್ಳಬೇಡ" ಎಂದು ಆತ್ಮವಿಶ್ವಾಸ ತುಂಬಿದರು.

ಮುಂದೆ ಸಾಗಿ ಹುಮನಾಬಾದ್‌ನ ಬಾಲಕಿ ಪೂಜಾಳ ಬಳಿ ಬಂದ ಮುಖ್ಯಮಂತ್ರಿಗಳು, ನಗುಮೊಗದಿಂದ "ನಾನ್ಯಾರು ಗೊತ್ತಾ?" ಎಂದು ಕೇಳಿದರು. ಅದಕ್ಕೆ ಬಾಲಕಿ ತಕ್ಷಣವೇ, "ನನಗೆ ಗೊತ್ತು, ನೀವು ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ" ಎಂದು ಚುರುಕಾಗಿ ಉತ್ತರಿಸಿದಳು. ಆಕೆಯ ಮಾತಿಗೆ ಸಂತಸಗೊಂಡ ಸಿಎಂ, "ಪೂಜಾ, ಮುಂದೆ ನೀನು ಏನಾಗಬೇಕು ಅಂತಿದ್ದೀಯಾ?" ಎಂದು ಮಗುವಿನ ಕನಸನ್ನು ಕೆದಕಿದರು. "ಸಾರ್, ನಾನು ಟೀಚರ್ ಆಗಬೇಕು ಅಂದುಕೊಂಡಿದ್ದೇನೆ" ಎಂದ ಪೂಜಾಳಿಗೆ, "ಟೀಚರ್ ಆಗಿ ದೇಶಕ್ಕೆ ಸೇವೆ ಮಾಡು" ಎಂದು ಸಿಎಂ ಮನಸಾರೆ ಹರಸಿದರು.

ವಾರ್ಡಿನ ಮೂಲೆಯಲ್ಲಿದ್ದ ಸರೋಜಮ್ಮ ಅವರ ಬಳಿ ಬಂದ ಸಿಎಂ, "ಏನು ಮಗು ಹೆಸರು?" ಎಂದು ಕೇಳಿದರು. ಅಷ್ಟರಲ್ಲಿ ಹಾಸಿಗೆಯ ಮೇಲೆ ಕುಳಿತಿದ್ದ ಬಾಲಕಿ "ಗಂಗೋತ್ರಿ" ಎಂದಳು. ಆ ಹೆಸರನ್ನು ಕೇಳಿ ಸಂತೋಷಪಟ್ಟ ಮುಖ್ಯಮಂತ್ರಿಗಳು, "ಗಂಗೋತ್ರಿ ಪವಿತ್ರವಾದ ನದಿ. ನಮ್ಮ ಮನೆಗೂ ಇದೇ ಹೆಸರನ್ನು ಇಡಬೇಕು ಅಂದುಕೊಂಡಿದ್ದೇನೆ" ಎಂದು ಹೇಳಿ ಮಕ್ಕಳಿಗೆ ಚಾಕೊಲೇಟ್ ಹಾಗೂ ಡ್ರಾಯಿಂಗ್ ಪುಸ್ತಕಗಳನ್ನು ಹಂಚಿ ಸಂಭ್ರಮಿಸಿದರು.

ಅನಿತಾಳ ಮೌನ ಹೋರಾಟ ಮತ್ತು ಚಿನುಕುರಳಿ ಲೇಖನಾಳ ನಿರೀಕ್ಷೆ

ಎದುರಿಗಿದ್ದ ಹಾಸಿಗೆಯ ಬಳಿ ಬಂದಾಗ ಅಲ್ಲಿ ಎರಡು ವರ್ಷದ ಪುಟ್ಟ ಮಗು ಜಯಲಕ್ಷ್ಮಿ ಮತ್ತು ಆಕೆಯ ತಾಯಿ ಅನಿತಾ ಇದ್ದರು. "ಮಗುಗೆ 2 ವರ್ಷ ಸಾರ್, ಹೆಸರು ಜಯಲಕ್ಷ್ಮಿ ಅಂತ" ಎಂದು ಅನಿತಾ ಹೇಳುವಾಗ ಆಕೆಯ ಕಣ್ಣಲ್ಲಿ ಹಿಂಜರಿಕೆ ಇತ್ತು. "ಏನಾಗಿತ್ತು?" ಎಂದು ಸಿಎಂ ಕೇಳಿದಾಗ, "ಬ್ಲಡ್..." ಎಂದು ಮಾತು ಹೊರಬಂದರೂ, 'ಕ್ಯಾನ್ಸರ್' ಎಂಬ ಕಠಿಣ ಪದ ಆ ತಾಯಿಯ ಗಂಟಲಲ್ಲೇ ಸಿಲುಕಿ ನಿಂತಿತು. ಕಲಬುರಗಿಯಿಂದ ಬೆಂಗಳೂರಿಗೆ ಬಂದು, ಕೇವಲ ಸಂಬಂಧಿಕರಿಗೆ ಮಾತ್ರ ರೋಗದ ಹೆಸರನ್ನು ತಿಳಿಸಿ, ತಿಂಗಳುಗಟ್ಟಲೆ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ಅನಿತಾ ತನ್ನ ಮಗಳನ್ನು ಉಳಿಸಿಕೊಳ್ಳಲು ಪಟ್ಟ ಹೋರಾಟ ಅಷ್ಟಿಷ್ಟಲ್ಲ. ಇದೀಗ ಚಿಕಿತ್ಸೆಯ ಫಲವಾಗಿ ಮಗು ಚೇತರಿಸಿಕೊಳ್ಳುತ್ತಿದ್ದು, "ಈಗ ಪರವಾಗಿಲ್ಲ ಸಾರ್, ಮಗು ಸುಧಾರಿಸ್ತಿದೆ" ಎಂದು ತಾಯಿ ಅನಿತಾ ಸಿಎಂಗೆ ತಿಳಿಸಿದಾಗ ಅವರು ಸಮಾಧಾನದಿಂದ ಮುಂದೆ ಸಾಗಿದರು.

ಪಕ್ಕದ ಹಾಸಿಗೆಯಲ್ಲಿದ್ದ ರಾಯಚೂರಿನ ಪುಟಾಣಿ ಹುಡುಗಿ ಲೇಖನಾ, "ನನ್ನ ಹೆಸರು ಲೇಖನಾ. ನಂದು ರಾಯಚೂರು, ಡಿಸೆಂಬರ್ ಬಂದರೆ 10 ವರ್ಷ" ಎಂದು ಚಿನುಕುರಳಿಯಂತೆ ಲವಲವಿಕೆಯಿಂದ ಮಾತನಾಡಿದಳು. ಅಜ್ಜಿ ಆಂಜನಮ್ಮ ಅವರ ಆರೈಕೆಯಲ್ಲಿ ಬದುಕಿನ ಹೋರಾಟ ಮುಂದುವರಿಸಿರುವ ಈ ಬಾಲಕಿ, ಬೆಳಿಗ್ಗೆಯಿಂದಲೇ ಆಸ್ಪತ್ರೆಗೆ 'ದೊಡ್ಡ ಡಾಕ್ಟರ್ ಬರ್ತಾರೆ' ಎಂದು ಕೈಯಲ್ಲಿ ರೋಜಾ ಹೂ ಹಿಡಿದು ಕಾಯುತ್ತಾ ನಿಂತಿದ್ದ ದೃಶ್ಯ ಮನಕಲಕುವಂತಿತ್ತು.

ಜನರಲ್ ವಾರ್ಡ್ ಭೇಟಿ ಮತ್ತು ತಾಯಂದಿರ ಯೋಗಕ್ಷೇಮ ವಿಚಾರಣೆ

ಕಪೂರ್ ವಿಭಾಗದ ಕೆಳಗಿನ ಎರಡೂ ವಾರ್ಡ್‌ಗಳ ಮಕ್ಕಳಿಗೆ ಕೈಕುಲುಕಿ ಧೈರ್ಯ ತುಂಬಿದ ಸಿಎಂ, ಬಳಿಕ ಮೊದಲನೇ ಕಟ್ಟಡದ ಜನರಲ್ ವಾರ್ಡ್‌ಗೆ ತೆರಳಿದರು. ಬಿಜಾಪುರ, ಶಹಾಪುರ, ಹುಮನಾಬಾದ್ ಸೇರಿದಂತೆ ನಾಡಿನ ನಾನಾ ಭಾಗಗಳಿಂದ ಬಂದು ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ಪಕ್ಕ ಕುಳಿತು, "ಸರಿಯಾಗಿ ನೋಡ್ಕೊತಾ ಇದ್ದಾರಾ? ಊಟ ಕೊಡ್ತಾ ಇದ್ದಾರಾ?" ಎಂದು ಕಾಳಜಿಯಿಂದ ವಿಚಾರಿಸಿದರು. ರಕ್ತದ ಕ್ಯಾನ್ಸರ್‌ನಿಂದ ನರಳುತ್ತಿದ್ದ ಶಹಾಪುರದ ಭವ್ಯಳ ತಲೆ ಸವರಿ, "ಸರಿಹೋಗುತ್ತದೆ, ಭಯ ಬೇಡ" ಎಂದು ಸಮಾಧಾನ ಹೇಳಿದರು. ಇದೇ ವೇಳೆ ಆಕೆಯ ತಾಯಿ ಸಂಗೀತಾ ಅವರಿಗೆ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಸೌಲಭ್ಯಗಳು ಸಿಗುತ್ತಿವೆಯೇ ಎಂದು ವಿಚಾರಿಸಿದರು. ಅಲ್ಲದೆ, ಕನಕಪುರದ ಋತ್ವಿಕ್ ಅವರ ತಾಯಿಯ ಬಿಪಿಎಲ್ ಕಾರ್ಡ್ ಅಚಾನಕ್ ಆಗಿ ಎಪಿಎಲ್ ಕಾರ್ಡ್ ಆಗಿ ಬದಲಾಗಿದ್ದ ವಿಷಯ ತಿಳಿದ ಸಿಎಂ, ತಕ್ಷಣವೇ ಅದನ್ನು ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಿಕೊಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಯ ಆವರಣದಲ್ಲಿ ರೋಗಿಗಳನ್ನು ನೋಡಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಾಯಂದಿರ ಪಕ್ಕ ಕುಳಿತು ಯೋಗಕ್ಷೇಮ ವಿಚಾರಿಸಿದ ಮುಖ್ಯಮಂತ್ರಿಗಳು, "ಎಲ್ಲಾ ಸೌಲಭ್ಯ ಕೊಡ್ತಾ ಇದ್ದಾರಾ? ಹಣ ಏನಾದರೂ ಕೇಳ್ತಾರಾ?" ಎಂದು ಪ್ರಶ್ನಿಸಿದರು. ಅಲ್ಲದೆ, "ನಿಮ್ಮ ನಿಮ್ಮ ಜಿಲ್ಲೆಗಳಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ" ಎಂದು ಭರವಸೆ ನೀಡುವ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿದರು.

200 ಹೆಚ್ಚುವರಿ ಹಾಸಿಗೆ, 3 ಎಕರೆ ಜಾಗ ಮತ್ತು ರೋಬೋಟಿಕ್ ಯಂತ್ರದ ಘೋಷಣೆ

ಮಕ್ಕಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಕಿದ್ವಾಯಿ ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳಲಿರುವ ಮಹತ್ವದ ಕ್ರಮಗಳನ್ನು ಪ್ರಕಟಿಸಿದರು. "ಪುಟ್ಟ ಕಂದಮ್ಮಗಳು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವ ದೃಶ್ಯ ಎಂಥವರ ಮನವನ್ನೂ ಕಲಕುತ್ತದೆ. ಮಕ್ಕಳ ನೋವು ಒಂದೆಡೆಯಾದರೆ, ಹಗಲಿರುಳು ಆಸ್ಪತ್ರೆಯಲ್ಲೇ ಕಳೆಯುವ ತಂದೆ-ತಾಯಿಯ ಸಂಕಟ ಮತ್ತೊಂದೆಡೆ. ಇಂತಹ ಕುಟುಂಬಗಳಿಗೆ ಚಿಕಿತ್ಸೆಯ ಜತೆಗೆ ಆಸರೆ ಮತ್ತು ಧೈರ್ಯ ನೀಡುವುದು ಸರ್ಕಾರದ ಜವಾಬ್ದಾರಿ" ಎಂದು ಹೇಳಿದರು. ಈ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ಹೊಸದಾಗಿ 200 ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಹಾಗೂ ಈ ಸಂಬಂಧ ಈಗಾಗಲೇ ಮಾರ್ಗದರ್ಶನ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೆ, ಆಸ್ಪತ್ರೆಗೆ ಬರುವ ಮಕ್ಕಳೊಂದಿಗೆ ತಾಯಂದಿರು ಹಾಗೂ ಕುಟುಂಬದ ಸದಸ್ಯರು ಉಳಿದುಕೊಳ್ಳಲು ಅನುಕೂಲವಾಗುವಂತೆ 3 ಎಕರೆ ಜಾಗ ನೀಡುವಂತೆ ಮನವಿ ಮಾಡಲಾಗಿದ್ದು, ಈ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Read More
Next Story