
ಮುಂಡರಗಿ ತಾಲೂಕಿನಲ್ಲಿ ಬರ ಪರಿಸ್ಥಿತಿ ವೀಕ್ಷಣೆ: ರೈತರ ಅಳಲನ್ನು ಆಲಿಸಿದ ಸಿಎಂ
ಬೆಳೆಗಳು ಒಣಗಿ ಹೋಗಿ ರೈತರು ಆರ್ಥಿಕವಾಗಿ ನಲುಗಿದ್ದಾರೆ. ಹೀಗಾಗಿ ಬಾಕಿ ಇರುವ ಆರು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ರೈತರು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲು ಮತ್ತು ರೈತರ ಸಂಕಷ್ಟಗಳಿಗೆ ಧ್ವನಿಯಾಗಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮಕ್ಕೆ ಭೇಟಿ ನೀಡಿದರು. ಒಣಗಿದ ಹೊಲ-ಗದ್ದೆಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು, ರೈತರ ಅಳಲನ್ನು ಆಲಿಸಿ, ಸರ್ಕಾರವು ರೈತರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಮುಂಡರಗಿಯ ಕದಾಂಪೂರ ಗ್ರಾಮದಲ್ಲಿ ಸೂರ್ಯಕಾಂತಿ ಮತ್ತು ಜೋಳದ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣವಾಗಿ ಬಾಡಿಹೋಗಿವೆ. ಮುಖ್ಯಮಂತ್ರಿಗಳು ರೈತರ ಜಮೀನಿಗೆ ನೇರವಾಗಿ ಇಳಿದು, ಬೆಳೆಗಳ ನಾಶವನ್ನು ಪರಿಶೀಲಿಸಿದರು. ಈ ವೇಳೆ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಹಿರಿಯ ಸಚಿವ ಎಚ್.ಕೆ. ಪಾಟೀಲ್, ಶಾಸಕರಾದ ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಮೀನಿನಲ್ಲಿದ್ದ ಸ್ಥಳೀಯ ರೈತರು ತಮ್ಮ ನೋವನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಈ ಬಾರಿ ಮಳೆ ಇಲ್ಲದೆ ಗದಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರದಿಂದ ತತ್ತರಿಸಿವೆ. ಬೆಳೆಗಳೆಲ್ಲಾ ಒಣಗಿ ಹೋಗಿದ್ದು, ರೈತರು ಆರ್ಥಿಕವಾಗಿ ನಲುಗಿದ್ದಾರೆ. ಆದ್ದರಿಂದ ಬಾಕಿ ಉಳಿದಿರುವ ಆರು ತಾಲ್ಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳ ಭರವಸೆ
ರೈತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬರ ಪರಿಸ್ಥಿತಿಯ ಗಂಭೀರತೆಯನ್ನು ಸರ್ಕಾರ ಅರಿತಿದೆ. ಗದಗ ಜಿಲ್ಲೆಯ ಸಮಗ್ರ ಅಧ್ಯಯನಕ್ಕೆ ಈಗಾಗಲೇ ಆದೇಶಿಸಲಾಗಿದೆ. ನಾನು ಮತ್ತಷ್ಟು ಪ್ರದೇಶಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಯನ್ನು ಕಣ್ಣಾರೆ ಕಾಣುತ್ತೇನೆ. ನಂತರ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಚರ್ಚಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬರಪೀಡಿತ ತಾಲ್ಲೂಕುಗಳ ಘೋಷಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಕೇಂದ್ರ ಸರ್ಕಾರದ ನಿಯಮಗಳ ಅಡಿಯಲ್ಲಿ ವರದಿ ಸಲ್ಲಿಸುವುದು ಅನಿವಾರ್ಯವಾಗಿದ್ದು, ಯಾವುದೇ ತಾಂತ್ರಿಕ ಲೋಪವಿಲ್ಲದಂತೆ ವರದಿ ಸಿದ್ಧಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪಕ್ಷಾತೀತವಾದ ಹೋರಾಟದ ಅಗತ್ಯ
ಈ ಸಂದರ್ಭದಲ್ಲಿ ಶಾಸಕರು ಮತ್ತು ಮಾಜಿ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಜಿಲ್ಲೆಯ ಬರಗಾಲದ ಕುರಿತು ಚರ್ಚೆ ನಡೆಸಿದರು. ಬರ ನಿರ್ವಹಣೆಯಲ್ಲಿ ಯಾವುದೇ ರಾಜಕೀಯ ಭೇದಭಾವವಿಲ್ಲದೆ, ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಒಗ್ಗೂಡಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಅನಿವಾರ್ಯತೆಯನ್ನು ಸಿಎಂ ಪ್ರತಿಪಾದಿಸಿದರು.
ಗ್ರಾಮದ ರೈತರೊಂದಿಗೆ ಮಾತನಾಡಿದ ಸಿಎಂ, ಬರಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. "ಬೆಳೆ ಹಾನಿಯ ಪ್ರಮಾಣವನ್ನು ನಿಖರವಾಗಿ ದಾಖಲಿಸಿಕೊಳ್ಳಿ. ವಿಮೆ ಸೌಲಭ್ಯವು ಪ್ರತಿಯೊಬ್ಬ ರೈತರಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗದಗ ಜಿಲ್ಲೆಯಲ್ಲಿ ಪ್ರವಾಸ ಮುಗಿಸಿದ ನಂತರ, ಬೆಂಗಳೂರಿಗೆ ತೆರಳಿ ಕಂದಾಯ ಮತ್ತು ಕೃಷಿ ಇಲಾಖೆಯ ಉನ್ನತ ಮಟ್ಟದ ಸಭೆಯನ್ನು ಕರೆದು, ಬರ ಪರಿಸ್ಥಿತಿಯ ಪೂರ್ಣ ವರದಿಯನ್ನು ಪರಿಶೀಲನೆ ನಡೆಸಿಲಾಗುವುದು. ರಾಜ್ಯದ ರೈತರಿಗೆ ನೆರವಾಗಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸುವುದರ ಜೊತೆಗೆ ಕೇಂದ್ರದ ಎನ್‌ಡಿಆರ್‌ಎಫ್ ಅನುದಾನವನ್ನು ಪಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅಶ್ವಾಸನೆ ನೀಡಿದರು.

