ದೆಹಲಿಗೆ ತೆರಳಿದ ಸಿಎಂ ಡಿಕೆಶಿ ; ಸಚಿವ ಸಂಪುಟ ಗೊಂದಲ ಕುರಿತು ಚರ್ಚೆ ಸಾಧ್ಯತೆ
x

ದೆಹಲಿಗೆ ತೆರಳಿದ ಸಿಎಂ ಡಿಕೆಶಿ ; ಸಚಿವ ಸಂಪುಟ ಗೊಂದಲ ಕುರಿತು ಚರ್ಚೆ ಸಾಧ್ಯತೆ

ಒಂದು ವೇಳೆ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾದರೆ ಅವರ ಸ್ಥಾನಕ್ಕೆ ವಾಲ್ಮೀಕಿ ಸಮುದಾಯದ ಶಾಸಕಿ ಇ. ಅನ್ನಪೂರ್ಣ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.


Click the Play button to hear this message in audio format

ನಿಗಮ-ಮಂಡಳಿ ನೇಮಕ ಮತ್ತು ಸಂಪುಟ ವಿಸ್ತರಣೆ ಗೊಂದಲ ಸೇರಿದಂತೆ ಇತರೆ ವಿಷಯಗಳ ಕುರಿತು ಹೈಕಮಾಂಡ್‌ ಜತೆಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಲಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಿ, ಗೊಂದಲಗಳನ್ನು ಬಗೆಹರಿಸುವುದು ಮುಖ್ಯಮಂತ್ರಿಗಳ ಮುಖ್ಯ ಉದ್ದೇಶವಾಗಿದೆ. ಇದೇ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ಭೇಟಿಗೂ ಪ್ರಯತ್ನಿಸಲಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ, ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ ಬೆನ್ನಲ್ಲೇ ನಾಗೇಂದ್ರ ಅವರು ಕೂಡ ದೆಹಲಿಗೆ ಪ್ರಯಾಣಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸಂಪುಟದಲ್ಲಿ ಸಮುದಾಯ, ಮಹಿಳಾ ಪ್ರಾತಿನಿಧ್ಯದ ಲೆಕ್ಕಾಚಾರ

ಸಂಪುಟ ಬದಲಾವಣೆಯಲ್ಲಿ ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ. ಪ್ರಮುಖವಾಗಿ ಕುರುಬ ಸಮುದಾಯ ಮತ್ತು ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಲು ಹೈಕಮಾಂಡ್ ಒಲವು ತೋರುತ್ತಿದೆ ಎಂದು ಮೂಲಗಳು ಹೇಳುತ್ತವೆ. ಒಂದು ವೇಳೆ ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾದರೆ ಅವರ ಸ್ಥಾನಕ್ಕೆ ಕುರುಬ ಸಮುದಾಯದ ಬಸವರಾಜ ಶಿವಣ್ಣನವರ್ ಅವರ ಹೆಸರನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ಅಲ್ಲದೇ, ನಾಗೇಂದ್ರ ಅವರ ವಾಲ್ಮೀಕಿ ಸಮುದಾಯದ ಕೋಟಾವನ್ನೇ ಉಳಿಸಿಕೊಳ್ಳುವುದಾದರೆ, ಶಾಸಕಿ ಇ. ಅನ್ನಪೂರ್ಣ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಇದು ಮಹಿಳಾ ಪ್ರಾತಿನಿಧ್ಯದ ಬೇಡಿಕೆಯನ್ನು ಪೂರೈಸಿದಂತಾಗುತ್ತದೆ. ಆದರೆ, ರಾಜ್ಯ ನಾಯಕತ್ವವು ಲಕ್ಷ್ಮೀ ಹೆಬ್ಬಾಳ್ಕರ್ ಅವರಂತಹ ಪ್ರಭಾವಿ ಮಹಿಳಾ ನಾಯಕಿಯನ್ನು ಉಳಿಸಿಕೊಳ್ಳುತ್ತಾ ಅಥವಾ ಸಂಪುಟದಲ್ಲಿ ಮತ್ತೊಬ್ಬ ಮಹಿಳೆಗೆ ಅವಕಾಶ ನೀಡುತ್ತಾ ಎಂಬುದು ಸದ್ಯದ ಗೊಂದಲ ಆಗಿದೆ.

ಕೃಷ್ಣಪ್ಪ- ಪ್ರಿಯಕೃಷ್ಣರ ಪಟ್ಟು

ಬೆಂಗಳೂರಿನಲ್ಲಿ ಪ್ರಬಲ ಹಿಡಿತ ಹೊಂದಿರುವ ಎಂ. ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಸಚಿವ ಸ್ಥಾನಕ್ಕಾಗಿ ಹಠ ಹಿಡಿದಿದ್ದಾರೆ. ಇವರ ಬೇಡಿಕೆಯನ್ನು ಈಡೇರಿಸಲು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಸಂಪುಟದಿಂದ ಕೈಬಿಡುವ ಅಥವಾ ರಾಜೀನಾಮೆ ಪಡೆಯುವ ಮಾತುಕತೆಗಳು ನಡೆದಿದ್ದವು. ಈ ಕೆಲಸವನ್ನು ಪೂರ್ಣಗೊಳಿಸುವಂತೆ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರಿಗೆ ವರಿಷ್ಠರು ಜವಾಬ್ದಾರಿ ನೀಡಿದ್ದರು ಎನ್ನಲಾಗಿದೆ. ಆದರೆ, ಬಾಲಕೃಷ್ಣ ಅವರು ಸುಲಭವಾಗಿ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ. ಈ ವಿಷಯವಾಗಿ ಶಾಸಕರ ಸಭೆಗೂ ಕೃಷ್ಣಪ್ಪ ಕುಟುಂಬ ಗೈರಾಗಿರುವುದು ಪಕ್ಷದ ಆಂತರಿಕ ಅಸಮಾಧಾನವನ್ನು ಹೊರಹಾಕಿದೆ.

ಸಚಿವ ನಾಗೇಂದ್ರ ಅವರ ಭವಿಷ್ಯ ಮತ್ತು ಕೃಷ್ಣಪ್ಪ ಅವರ ಒತ್ತಡದ ನಡುವೆ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯದಲ್ಲಿನ ಆಂತರಿಕ ಭಿನ್ನಮತವನ್ನು ಶಮನಗೊಳಿಸಲು ಹೈಕಮಾಂಡ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ದೆಹಲಿಯಲ್ಲಿ ನಡೆಯಲಿರುವ ಈ ಸಭೆಗಳು ಕೇವಲ ನೇಮಕಾತಿಗೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಸರ್ಕಾರದ ಸ್ಥಿರತೆ ಮತ್ತು ಕಾರ್ಯವೈಖರಿಯ ಮೇಲೆ ಪ್ರಭಾವ ಬೀರಲಿವೆ.

ರಾಜಕೀಯದ ಈ ದಾಳಗಳ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಸಮನ್ವಯವು ಈಗ ಪರೀಕ್ಷೆಗೊಳಗಾಗಿದೆ. ದೆಹಲಿ ಭೇಟಿಯ ನಂತರ ಹೊರಬೀಳುವ ನಿರ್ಧಾರಗಳು ಸರ್ಕಾರದಲ್ಲಿನ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂತಸ ತರುತ್ತದೋ ಅಥವಾ ಅಸಮಾಧಾನದ ಕಟ್ಟೆಯನ್ನು ಒಡೆಯುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

Read More
Next Story