
ರಾಜ್ಯದಲ್ಲಿ ಭೀಕರ ಬರಗಾಲದ ಎಚ್ಚರಿಕೆ; ರೈತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ
ಎಸ್ಐಆರ್ ಕಾರಣಕ್ಕೆ ಈ ಬಾರಿಯ ಮುಂಗಾರು ಅಧಿವೇಶನವನ್ನು ತಡವಾಗಿ ಕರೆಯಲಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಮತ್ತು ಅಣೆಕಟ್ಟುಗಳಲ್ಲಿನ ನೀರಿನ ಮಟ್ಟ ಕುಸಿತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಮತ್ತು ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಮುಂದಿನ ಕಾರ್ಯಯೋಜನೆಗಳು ಮತ್ತು ಸಂಪುಟದ ಪ್ರಮುಖ ನಿರ್ಣಯಗಳನ್ನು ಹಂಚಿಕೊಂಡರು.
ರಾಜ್ಯದ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ ಶೂನ್ಯಕ್ಕೆ ತಲುಪಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದರು. "ಕಳೆದ ವರ್ಷಕ್ಕೆ ಹೋಲಿಸಿದರೆ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಮತ್ತು ವಾಣಿವಿಲಾಸ ಸಾಗರ ಅಣೆಕಟ್ಟುಗಳಲ್ಲಿ ಒಳಹರಿವು ಬಹುತೇಕ ಸ್ಥಗಿತಗೊಂಡಿದೆ. ಕೆಆರ್‌ಎಸ್ ಅಣೆಕಟ್ಟಿನಲ್ಲಿ 100 ಅಡಿ ಇರಬೇಕಾದ ನೀರಿನ ಮಟ್ಟ 22 ಅಡಿಗೆ ಕುಸಿದಿದೆ. ಹೀಗಾಗಿ, ರೈತರು ಅಣೆಕಟ್ಟು ನೀರನ್ನು ನಂಬಿ ಮುಂಗಾರು ಬೆಳೆಗಳನ್ನು ಹಾಕುವ ಸಾಹಸಕ್ಕೆ ಕೈಹಾಕಬಾರದು. ಮಳೆ ಬಂದರೆ ಮಾತ್ರ ಸರ್ಕಾರ ನೀರು ಒದಗಿಸಲಿದೆ" ಎಂದು ಸ್ಪಷ್ಟಪಡಿಸಿದರು. ಬರ ಪರಿಸ್ಥಿತಿ ನಿರ್ವಹಣೆಗೆ ಸಚಿವರು ಮತ್ತು ಅಧಿಕಾರಿಗಳಿಗೆ ಜಿಲ್ಲಾವಾರು ಪ್ರವಾಸ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ವಿದ್ಯುತ್ ಸಂಪರ್ಕಕ್ಕೆ ಆ.15ರವರೆಗೆ ಗಡುವು
ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಲು ಆಗಸ್ಟ್ 15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಒಸಿ (OC) ಮತ್ತು ಸಿಸಿ (CC) ಸಂಬಂಧಿಸಿದಂತೆ ಸಾರ್ವಜನಿಕರ ಮನವಿಯ ಮೇರೆಗೆ ಈ ವಿನಾಯಿತಿ ನೀಡಲಾಗಿದ್ದು, ದಾಖಲೆ ಹಾಗೂ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.
ಮುಂಗಾರ ಅಧಿವೇಶನ ನಿಧಾನ
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕಾರಣದಿಂದಾಗಿ ಮುಂಗಾರು ಅಧಿವೇಶನವನ್ನು ತಡವಾಗಿ ಕರೆಯಲು ಸರ್ಕಾರ ತೀರ್ಮಾನಿಸಿದೆ. "ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ ಅಧಿವೇಶನದ ದಿನಾಂಕ ನಿಗದಿಪಡಿಸಲಾಗುವುದು. ಬಿಎಲ್ಒ (BLO) ಗಳೇ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಬೇಕು. ಕಲ್ಯಾಣ ಮಂಟಪಗಳಲ್ಲಿ ಅರ್ಜಿ ಹಂಚುವುದು ಕಾನೂನುಬಾಹಿರ, ಇದಕ್ಕೆ ಅವಕಾಶವಿಲ್ಲ" ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
'ಪ್ರಜಾಸೇವೆ' ಅಭಿಯಾನ: ಜನರ ಮನೆಬಾಗಿಲಿಗೆ ಸರ್ಕಾರ
ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು 'ಪ್ರಜಾಸೇವೆ' ಎಂಬ ಹೊಸ ಇಲಾಖೆಯನ್ನು ರೂಪಿಸಲಾಗುತ್ತಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ 'ಜನಸ್ಪಂದನ' ಕಾರ್ಯಕ್ರಮ ನಡೆಸಲಿದ್ದಾರೆ. ಇದರ ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು.
ಇತರ ಪ್ರಮುಖ ನಿರ್ಣಯಗಳು
ವಿದ್ಯುತ್ ಖಾಸಗೀಕರಣ ವಿರೋಧ: ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಸಹಮತವಿಲ್ಲ ಎಂದು ಎಸ್ಕಾಂಗಳಿಗೆ ಸೂಚನೆ.
ಗ್ರಾಮ್ ಜಿ ಯೋಜನೆ: ಕೇಂದ್ರದ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 3,806 ಕೋಟಿ ರೂಪಾಯಿ ಹೊರೆಯಾಗಲಿದ್ದು, ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗಿದೆ.
ಅಭಿವೃದ್ಧಿ ಯೋಜನೆಗಳು: ಬಾಗಲಕೋಟೆ ಬಿಳಗಿ ಏತ ನೀರಾವರಿ ಯೋಜನೆಗೆ 98.50 ಕೋಟಿ, ಕಲಬುರ್ಗಿ ಜವಳಿ ಪಾರ್ಕ್‌ಗೆ 320 ಕೋಟಿ, ಮತ್ತು ಅಂಧತ್ವ ನಿವಾರಣೆಗೆ 26 ಕೋಟಿ ಅನುದಾನ ಮಂಜೂರು.
ಪಾದಚಾರಿ ಮಾರ್ಗ: ಒತ್ತುವರಿ ತೆರವು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ವಾಹನ ವಿತರಣೆ ಕುರಿತಂತೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ.
ಸಾರಿಗೆ ದರ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅಧಿಕಾರಿಗಳಿಂದ ನಷ್ಟದ ವರದಿ ಪಡೆದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

