ಜನಸಾಮಾನ್ಯರ ಜೇಬಿಗೆ ಕತ್ತರಿ: ಯುಪಿಐ ಶುಲ್ಕದ ವಿರುದ್ಧ ಡಿ.ಕೆ. ಶಿವಕುಮಾರ್ ಕಿಡಿ
x

"ಜನಸಾಮಾನ್ಯರ ಜೇಬಿಗೆ ಕತ್ತರಿ": ಯುಪಿಐ ಶುಲ್ಕದ ವಿರುದ್ಧ ಡಿ.ಕೆ. ಶಿವಕುಮಾರ್ ಕಿಡಿ

ಕೇಂದ್ರವು ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಕೈಗೊಂಡಿರುವ ನಿರ್ಧಾರವನ್ನು 'ಪರೋಕ್ಷ ತೆರಿಗೆ ಲೂಟಿ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರವು ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಕೈಗೊಂಡಿರುವ ನಿರ್ಧಾರವನ್ನು 'ಪರೋಕ್ಷ ತೆರಿಗೆ ಲೂಟಿ' ಎಂದು ಟೀಕಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ನಿರ್ಧಾರ ಖಂಡನೀಯ. ಕೇಂದ್ರ ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಶಿಕ್ಷಕರಿಗೆ 'Tr.', ಎಂಜಿನಿಯರ್‌ಗಳಿಗೆ 'Er.' ಎಂದು ಬಿರುದು ನೀಡುವಂತೆ, ಈ ಹೊಸ ಶುಲ್ಕದ ವ್ಯವಸ್ಥೆಯನ್ನು ನೋಡಿದರೆ ಕೇಂದ್ರ ಸರ್ಕಾರದ ಎಲ್ಲಾ ಸಚಿವರಿಗೂ 'ಪಿಕ್‌ಪಾಕೆಟ್'ನಲ್ಲಿ ಪಿಎಚ್‌ಡಿ (PhD) ಪದವಿ ನೀಡಬೇಕಾಗಿದೆ ಎಂದು ವ್ಯಂಗ್ಯವಾಡಿದರು. ಈ ಶುಲ್ಕದ ಹೊರೆಯನ್ನು ವರ್ತಕರು ಅಂತಿಮವಾಗಿ ಗ್ರಾಹಕರ ಮೇಲೆಯೇ ವರ್ಗಾಯಿಸುತ್ತಾರೆ. ಇದು ನೇರವಾಗಿ ಜನಸಾಮಾನ್ಯರ ಮೇಲಿನ ದಾಳಿ. 'ಕ್ಯಾಶ್‌ಲೆಸ್ ಇಂಡಿಯಾ' (ನಗದು ರಹಿತ ಭಾರತ) ಎಂದು ಘೋಷಿಸಿ, ನೋಟು ಅಮಾನ್ಯೀಕರಣ ಮಾಡಿದಾಗ ನಗದು ರಹಿತ ವ್ಯವಸ್ಥೆಗೆ ಉತ್ತೇಜನ ನೀಡಲಾಗಿತ್ತು. ಈಗ ಮತ್ತೆ ಹಳೆಯ ಪದ್ಧತಿಯತ್ತ ಜನರನ್ನು ದೂಡಲಾಗುತ್ತಿದೆ. ಎನ್‌ಪಿಸಿಐ ಈಗಾಗಲೇ ಸಾವಿರಾರು ಕೋಟಿ ಲಾಭ ಗಳಿಸುತ್ತಿರುವಾಗ, ಮತ್ತೆ ಶುಲ್ಕ ಏಕೆ? ಎಂದು ಅವರು ಪ್ರಶ್ನಿಸಿದರು. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಅಗತ್ಯ ಬಿದ್ದರೆ ಇದರ ವಿರುದ್ಧ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದರು.

ಬೃಹತ್ ಕೈಗಾರಿಕೆ ಮತ್ತು ಕುಮಾರಸ್ವಾಮಿ ಜೊತೆ ಮಾತುಕತೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತೇನೆ. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಯಾವ ಪ್ರದೇಶದಲ್ಲಿ ಬೇಕಾದರೂ ಒದಗಿಸಲು ಸರ್ಕಾರ ಸಿದ್ಧವಿದೆ" ಎಂದು ಸ್ಪಷ್ಟಪಡಿಸಿದರು. ವಿಧಾನಮಂಡಲ ಅಧಿವೇಶನವನ್ನು ನಡೆಸಲು ವಿರೋಧ ಪಕ್ಷದವರು ಅವಕಾಶ ನೀಡುತ್ತಿಲ್ಲ. ಬಿಜೆಪಿಯವರಿಗೆ ರೈತರು ಮತ್ತು ಬಡವರ ಹಿತಕ್ಕಿಂತ ರಾಜಕೀಯವೇ ಮುಖ್ಯವಾಗಿದೆ ಎಂದರು. "ಅವರ ಪಕ್ಷದ ಶಾಸಕರೇ ನಮ್ಮ ಬಳಿ ಬಂದು ತಮ್ಮ ಗೋಳು ತೋಡಿಕೊಂಡಿದ್ದಾರೆ. ನಾವು ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ, ಬರಗಾಲ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ವಿರೋಧ ಪಕ್ಷದವರು ಚರ್ಚೆಗೆ ಅವಕಾಶ ನೀಡುತ್ತಾರೆಯೇ ಎಂಬುದು ಪ್ರಶ್ನೆಯಲ್ಲ, ನಾವಂತೂ ಚರ್ಚೆಗೆ ಸಿದ್ಧರಿದ್ದೇವೆ" ಎಂದರು.

ಸಾಲಮನ್ನಾ ಕುರಿತು ವಿಪಕ್ಷಗಳಿಗೆ ಸವಾಲು

ರೈತರ ಸಾಲ ಮನ್ನಾ ಕುರಿತ ಪ್ರಶ್ನೆಗೆ, "ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ವಿಜಯೇಂದ್ರ ಅವರನ್ನು ಕರೆದುಕೊಂಡು ದೆಹಲಿಗೆ ಹೋಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡೋಣ. ಕೇಂದ್ರ ಸರ್ಕಾರವು ದೊಡ್ಡ ಕೈಗಾರಿಕೋದ್ಯಮಿಗಳ ಸಾಲವನ್ನು ಒಂದೇ ಏಟಿಗೆ ಮನ್ನಾ ಮಾಡುತ್ತದೆ. ಅದೇ ರೀತಿ ನಮ್ಮ ರೈತರ ಸಾಲವನ್ನೂ ಮನ್ನಾ ಮಾಡುವಂತೆ ಮನವಿ ಮಾಡೋಣ. ಅವರು ವಿಧಾನಮಂಡಲದಲ್ಲಿ ಈ ಬಗ್ಗೆ ಸಲಹೆ ನೀಡಲಿ" ಎಂದು ಸವಾಲು ಹಾಕಿದರು. ಬರ ಘೋಷಣೆಯಾಗದ ತಾಲೂಕುಗಳ ಸಮೀಕ್ಷೆ ನಡೆಯುತ್ತಿದ್ದು, ಶೀಘ್ರವೇ ಪರಿಹಾರ ಘೋಷಿಸುವುದಾಗಿ ಭರವಸೆ ನೀಡಿದರು. ತುಂಗಭದ್ರಾ ನದಿಯ ನೀರಿನ ಹಂಚಿಕೆಯ ಕುರಿತಾಗಿ ಡಿ.ಕೆ. ಶಿವಕುಮಾರ್ ಐತಿಹಾಸಿಕ ಮಾಹಿತಿ ಹಂಚಿಕೊಂಡರು. "ತುಂಗಭದ್ರಾ ಯೋಜನೆಯಲ್ಲಿ ಸುಮಾರು 33 ಟಿಎಂಸಿ ನೀರು ಪೋಲಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ. ಈ ನೀರನ್ನು ಉಳಿಸುವ ನಿಟ್ಟಿನಲ್ಲಿ ನಾನು, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಒಮ್ಮತಕ್ಕೆ ಬಂದಿದ್ದೇನೆ. ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿ ಜೋಡಣೆ ವಿಷಯದಲ್ಲಿ ಮೂರು ರಾಜ್ಯಗಳ ಒಮ್ಮತವನ್ನು ಕೇಂದ್ರಕ್ಕೆ ತಿಳಿಸಲಾಗಿದೆ. ಈ ನಿರ್ಣಯ ಕಲ್ಯಾಣ ಕರ್ನಾಟಕದ ಪಾಲಿಗೆ ವರದಾನವಾಗಲಿದೆ. ಗಡಿಭಾಗದ ರೈತರ ಹಿತದೃಷ್ಟಿಯಿಂದ ಇದು ಅತ್ಯಂತ ಮಹತ್ವದ ತೀರ್ಮಾನ" ಎಂದರು. ನವಲೆ ಸಮತೋಲಿತ ಜಲಾಶಯವನ್ನು ಕರ್ನಾಟಕದಲ್ಲಿಯೇ ನಿರ್ಮಿಸುವ ಮೂಲಕ ಮೂರು ರಾಜ್ಯಗಳಿಗೂ ಲಾಭ ಮಾಡಿಕೊಡುವ ಯೋಜನೆ ಇದೆ ಎಂದರು.

ಅಪೌಷ್ಟಿಕತೆ ನಿವಾರಣೆಗೆ ಪಣ

ಕಲ್ಯಾಣ ಕರ್ನಾಟಕದ ಜನರ ಆರೋಗ್ಯ ಮತ್ತು ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. "ಕರ್ನಾಟಕ ಪ್ರೋಟೀನ್ ಮಿಷನ್ ಜಾರಿಗೆ ತರುತ್ತಿದ್ದೇವೆ. ಅಜೀಂ ಪ್ರೇಮ್‌ಜಿ ಅವರ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಮತ್ತು ಗರ್ಭಿಣಿಯರಿಗೆ ನೆರವು ನೀಡುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಕಲ್ಯಾಣ ಕರ್ನಾಟಕ ಆರ್ಥಿಕ ಮಿಷನ್ ರೂಪಿಸುವಾಗ ಗೋವಿಂದರಾವ್ ಸಮಿತಿಯ ವರದಿಯನ್ನು ಆಧರಿಸಲಾಗಿದೆ" ಎಂದು ತಿಳಿಸಿದರು. ಮಹಾರಾಷ್ಟ್ರದಿಂದ ಭೀಮಾ ನದಿಗೆ ಬರುತ್ತಿರುವ ನೀರಿನ ಹಂಚಿಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಕೇಳಿದಾಗ, "ಗಡಿ ಜಿಲ್ಲೆಗಳ ಶಾಸಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರೊಂದಿಗೆ ಸ್ವತಃ ನಾನೇ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಕರಾವಳಿ ಮತ್ತು ಮಲೆನಾಡು ಭಾಗದ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿಯನ್ನು ಚರ್ಚಿಸಲಾಗುತ್ತಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಇದು ಪ್ರಾದೇಶಿಕ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ ಎಂದು ಅವರು ಹೇಳಿದರು.

Read More
Next Story