x

ಮೋಡ ಬಿತ್ತನೆ ಹಣ ವ್ಯರ್ಥ! ಮಳೆಯಾಗುವ ಬಗ್ಗೆ ವೈಜ್ಞಾನಿಕ ಆಧಾರ ಕೊಡಿ...

ಮೋಡ ಬಿತ್ತನೆಯಿಂದ ಮಳೆಯಾದ ಬಗ್ಗೆ ವೈಜ್ಞಾನಿಕ ಆಧಾರವಿಲ್ಲ, ಕೋಟಿಗಟ್ಟಲೆ ಹಣ ಪೋಲಾಗುತ್ತಿದೆ ಎಂದು ವಿಷಯ ತಜ್ಞ ಪ್ರೊ. ಗುರುರಾಜ್ ಎಸ್.‌ದಾವಣಗೆರೆ ಆರೋಪಿಸಿದ್ದಾರೆ.


ಬರದ ಹಿನ್ನಲೆ ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಚಾಲನೆ ನೀಡಿದೆ. ಮೋಡ ಬಿತ್ತನೆ ಬಗ್ಗೆ ಕೆಲವು ಅನುಮಾನಗಳಿದ್ದು, ಪರಿಸರವಾದಿ ಹಾಗೂ ಪ್ರೊ.ಗುರುರಾಜ್ ಎಸ್.‌ದಾವಣಗೆರೆ ಅವರು ದ 'ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ಮೋಡ ಬಿತ್ತನೆ ಬಗ್ಗೆ ಮಾತನಾಡಿದ್ದಾರೆ.

ಮೋಡಗಳ ಮೇಲೆ ರಾಸಾಯನಿಕ ಸಿಂಪಡಿಸುವುದೇ ಮೋಡ ಬಿತ್ತನೆ ಕಾರ್ಯಕ್ರಮ. ಇದು ಮೋಡಗಳನ್ನು ಸೀಳುವುದು ಎನ್ನಬಹುದು ಎಂದು ಹೇಳಿದ್ದಾರೆ. ಆದರೆ, ಮೋಡ ಬಿತ್ತನೆಯಿಂದ ಮಳೆ ಆಗಿದೆ ಎನ್ನಲು ಯಾವುದೇ ವೈಜ್ಞಾನಿಕ ದಾಖಲೆಯಿಲ್ಲ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 3 ಬಾರಿ ಮೋಡಬಿತ್ತನೆಯಾಗಿದ್ದು ಇದಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಮೋಡ ಬಿತ್ತನೆಯಿಂದ ಮಳೆಯಾಗಿದೆ, ನಮಗೆ ಅನುಕೂಲವಾಗಿದೆ ಎಂಬ ನಿದರ್ಶನ ಅಥವಾ ದಾಖಲೆಗಳಿಲ್ಲ ಎಂದು ದೂರಿದ್ದಾರೆ.

ಮೋಡ ಬಿತ್ತನೆ ವಿಫಲ ಪ್ರಯತ್ನ ಎಂದು ಹೇಳಬಹುದು. ಮೋಡ ಬಿತ್ತನೆಯಿಂದ ಮಳೆ ಬಂದಿದೆ ಅಥವಾ ಯಶಸ್ಸು ಆಗಿದೆ ಎಂದು ಹೇಳುವವರು ವೈಜ್ಞಾನಿಕ ದಾಖಲೆ ನೀಡಬೇಕು. ಮೋಡ ಬಿತ್ತನೆಯಿಂದ ಎಲ್ಲಿ ಮಳೆಯಾಗಿದೆ ಎಷ್ಟು ಪ್ರಮಾಣ ಮಳೆಯಾಗಿದೆ ಎಂಬ ದಾಖಲೆ ನೀಡಬೆಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಮೋಡ ಬಿತ್ತನೆಯಿಂದ ಮಳೆಯಾಗಿದೆ ಎಂದು ಸರ್ಕಾರ ಹೇಳುತ್ತದೆ. ಯಾವ ರೈತರು ನಮಗೆ ಮಳೆಯಾಗಿ ಬೆಳೆ ಬಂದಿದೆ ಎಂದು ಹೇಳಿಲ್ಲ. ಎಷ್ಟು ಮಳೆಯಾಗಿದೆ ಅಂತ ಲೆಕ್ಕ ಇಟ್ಟಿದ್ದಾರಾ, ಹೇಗೆ ಲೆಕ್ಕ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕರ ದುಡ್ಡು ವ್ಯರ್ಥಮಾಡಬಾರದು ಎಂದು ಅವರು ತಿಳಿಸಿದರು. ಇದೇ ವೇಳೆ ಪ್ರಕೃತಿ ಜತೆ ನಾವು ಆಟವಾಡಬಾರದು ಪ್ರಕೃತಿ ವಿರುದ್ಧವಾಗಿ ನಾವು ಹೋಗಬಾರದು.‌ ಮೋಡ ಬಿತ್ತನೆಯಲ್ಲಿ ಸಿಂಪಡಿಸುವ ರಾಸಾಯನಿಕ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Read More
Next Story