x

ಬರ ಪರಿಸ್ಥಿತಿಗೆ ಮೋಡ ಬಿತ್ತನೆ ಪರಿಹಾರವೋ, ತೆರಿಗೆ ಹಣದ ಲೂಟಿಯೋ?

ಒಂದೆಡೆ ಮಳೆ ಅಭಾವ, ಮತ್ತೊಂದೆಡೆ ಕಾವೇರಿ ನೀರಿನ ಹಂಚಿಕೆಯ ಬಿಕ್ಕಟ್ಟು. ಇದರಿಂದ ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಕ್ಕೆ ಮದ್ದು ಹುಡುಕುವ ಪ್ರಯತ್ನ ಈಗ ಆರಂಭವಾಗಿದೆ. ಬರ ಪರಿಸ್ಥಿತಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಚಾಲನೆ ನೀಡಿದೆ.


ಒಂದೆಡೆ ಮುಂಗಾರು ಮಳೆಯ ಅಭಾವ, ಮತ್ತೊಂದೆಡೆ ಕಾವೇರಿ ನೀರು ಹಂಚಿಕೆಯ ಬಿಕ್ಕಟ್ಟು. ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮತ್ತೆ ‘ಮೋಡ ಬಿತ್ತನೆ’ಗೆ ಮೊರೆಹೋಗಿದೆ. ಆಕಾಶದತ್ತ ದೃಷ್ಟಿ ನೆಟ್ಟು ಕುಳಿತಿರುವ ಲಕ್ಷಾಂತರ ರೈತರಿಗೆ ಇದು ಆಸರೆಯಾಗಲಿದೆಯೇ ಅಥವಾ ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಪೋಲು ಮಾಡುವ ತಂತ್ರವೇ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.

ಮೋಡ ಬಿತ್ತನೆ ಎಂಬುದು ಶೂನ್ಯದಿಂದ ಮಳೆಯನ್ನು ಸೃಷ್ಟಿಸುವ ಮಾಂತ್ರಿಕ ವಿದ್ಯೆಯಲ್ಲ. ವಾತಾವರಣದಲ್ಲಿ ಈಗಾಗಲೇ ಲಭ್ಯವಿರುವ ತೇವಾಂಶಭರಿತ ‘ಕ್ಯುಮುಲಸ್’ ಮೋಡಗಳಿಗೆ ವಿಮಾನ ಅಥವಾ ರೇಡಾರ್ ಮೂಲಕ ಸಿಲ್ವರ್ ಅಯೋಡೈಡ್, ಪೊಟ್ಯಾಸಿಯಮ್ ಅಯೋಡೈಡ್ ಅಥವಾ ಸೋಡಿಯಂ ಕ್ಲೋರೈಡ್ ಕಣಗಳನ್ನು ಸಿಂಪಡಿಸಲಾಗುತ್ತದೆ. ಈ ಕಣಗಳು ನೀರಾವಿಯನ್ನು ಬೇಗನೆ ಹನಿಗಳಾಗಿ ಪರಿವರ್ತಿಸಿ ಕೃತಕ ಮಳೆ ಸುರಿಸಲು ನೆರವಾಗುತ್ತವೆ.

ರಾಜ್ಯದಲ್ಲಿ ಇದುವರೆಗೆ ಮೂರು ಬಾರಿ ಮೋಡ ಬಿತ್ತನೆ ನಡೆಡಿದ್ದು, ಈಗ ನಡೆಯುತ್ತಿರುವುದು ನಾಲ್ಕನೇ ಯತ್ನ. 2003 ರಲ್ಲಿ ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ ಅಮೆರಿಕದ ತಜ್ಞರ ನೆರವಿನಿಂದ ವಿಶೇಷ ರೇಡಾರ್ ಹೊಂದಿದ ವಿಮಾನ ಬಳಸಿ ಮೋಡ ಬಿತ್ತನೆ ಮಾಡಲಾಗಿತ್ತು. ಇದರಿಂದ ಶೇ. 15 ರಿಂದ 20 ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು.

2017ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ. ಪಾಟೀಲ್ ನೇತೃತ್ವದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ 'ಡಾಪ್ಲರ್ ರೇಡಾರ್' ತಂತ್ರಜ್ಞಾನ ಬಳಸಿ ನಡೆಸಿದ ಬಿತ್ತನೆಯಿಂದ ಶೇ. 27.9 ರಿಂದ 29 ರಷ್ಟು ಹೆಚ್ಚುವರಿ ಮಳೆಯಾಗಿ, ಜಲಾಶಯಗಳಿಗೆ ಅಂದಾಜು 2.1 ರಿಂದ 7.5 ಟಿಎಂಸಿ ನೀರು ಹರಿದುಬಂದಿತ್ತು. 2019 ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಯೋಜನೆಯಲ್ಲಿ ತೇವಾಂಶದ ಕೊರತೆಯಿಂದಾಗಿ ಕೇವಲ ಶೇ. 10 ರಿಂದ 18 ರಷ್ಟು ಮಾತ್ರ ಮಳೆಯಾಗಿತ್ತು.

ಬಿಜೆಪಿ-ಕಾಂಗ್ರೆಸ್ ಕುಟುಂಬಕ್ಕೆ ಟೆಂಡರ್

ಮೋಡ ಬಿತ್ತನೆ ಗುತ್ತಿಗೆ ಪಡೆದಿರುವ ‘ಕ್ಯಾಥಿ ಕ್ಲೈಮೇಟ್ ಮಾಡಿಫಿಕೇಷನ್ ಕನ್ಸಲ್ಟೆಂಟ್ಸ್ ಎಲ್ಎಲ್ಪಿ ಸಂಸ್ಥೆಯ ಪಾಲುದಾರರಾಗಿ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಅವರ ಪುತ್ರ ಕೃಷಿ ಪ್ರಕಾಶ್ ಕೋಳಿವಾಡ ಹಾಗೂ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರ ಪುತ್ರ ಅರುಣ್ ಕಾರಜೋಳ ಇರುವುದರಿಂದ ಮೋಡ ಬಿತ್ತನೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಈ ಸಂಸ್ಥೆಯು ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲೂ ಇಂತಹ ಕಾರ್ಯಗಳನ್ನು ಕೈಗೊಂಡಿದೆ.

ಮೋಡ ಬಿತ್ತನೆಗೆ ವೆಚ್ಚ ಮಾಡುವ ಹಣವನ್ನು ಕೆರೆಗಳ ಹೂಳು ತೆಗೆಯುವುದು, ಮಳೆನೀರು ಕೊಯ್ಲು ಹಾಗೂ ಅಂತರ್ಜಲ ಮರುಪೂರಣದಂತಹ ದೀರ್ಘಕಾಲಿಕ ನೀರಾವರಿ ಯೋಜನೆಗಳಿಗೆ ಬಳಸಿದರೆ ಹೆಚ್ಚು ಪ್ರಯೋಜನಕಾರಿ ಎಂಬುದು ತಜ್ಞರ ಅಭಿಪ್ರಾಯ.

Read More
Next Story