ಹಂಪಿಯ ಸ್ವಚ್ಛತೆಗೆ ಸರ್ಕಾರ ಸನ್ನದ್ಧ : “ಕ್ಲೀನ್ ಆಂಡ್‌ ಗ್ರೀನ್ ಹಂಪಿ” ಅಭಿಯಾನ
x

ಹಂಪಿಯ ಸ್ವಚ್ಛತೆಗೆ ಸರ್ಕಾರ ಸನ್ನದ್ಧ : “ಕ್ಲೀನ್ ಆಂಡ್‌ ಗ್ರೀನ್ ಹಂಪಿ” ಅಭಿಯಾನ

ಹಂಪಿಯನ್ನು ಕೇವಲ ಪ್ರವಾಸೋದ್ಯಮದ ಆಸ್ತಿಯಾಗಿ ನೋಡದೆ, ಸಾರ್ವಜನಿಕರು ಮತ್ತು ಪ್ರವಾಸಿಗರ ಸಹಭಾಗಿತ್ವದಲ್ಲಿ ‘ಜನಾಭಿಯಾನ’ವನ್ನಾಗಿ ಪರಿವರ್ತಿಸಬೇಕು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.


Click the Play button to hear this message in audio format

ವಿಶ್ವವಿಖ್ಯಾತ ಪಾರಂಪರಿಕ ತಾಣ ಹಂಪಿಯ ಘನತೆಯನ್ನು ಹೆಚ್ಚಿಸಲು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ, ರಾಜ್ಯ ಸರ್ಕಾರವು ಮಹತ್ವಾಕಾಂಕ್ಷೆಯ “ಕ್ಲೀನ್ ಆಂಡ್‌ ಗ್ರೀನ್ ಹಂಪಿ” ಅಭಿಯಾನವನ್ನು ಘೋಷಿಸಿದೆ. ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದ ಮೇರೆಗೆ, ಈ ಯೋಜನೆಯನ್ನು ಜಾರಿಗೆ ತರಲು ಪ್ರವಾಸೋದ್ಯಮ ಇಲಾಖೆಯು ಸಮಗ್ರ ಕಾರ್ಯಯೋಜನೆಯನ್ನು ಸಿದ್ಧಪಡಿಸಿದೆ.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಜಯನಗರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಹಂಪಿಯ ಪ್ರಸ್ತುತ ಪರಿಸ್ಥಿತಿ, ಸ್ವಚ್ಛತೆಯ ಸವಾಲುಗಳು ಮತ್ತು ಮೂಲಸೌಕರ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಮ್ ಪ್ರಸಾತ್ ಮನೋಹರ್, “ಹಂಪಿಯನ್ನು ಕೇವಲ ಪ್ರವಾಸೋದ್ಯಮ ಇಲಾಖೆಯ ಆಸ್ತಿಯಾಗಿ ನೋಡದೆ, ಅದನ್ನು ಸಾರ್ವಜನಿಕರು ಮತ್ತು ಪ್ರವಾಸಿಗರ ಸಹಭಾಗಿತ್ವದಲ್ಲಿ ‘ಜನಾಭಿಯಾನ’ವನ್ನಾಗಿ ಪರಿವರ್ತಿಸಬೇಕು” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಂಪಿಯ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸಮರ್ಥವಾದ ಏಜೆನ್ಸಿಯೊಂದನ್ನು ನೇಮಕ ಮಾಡಲು ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಈ ಸಂಸ್ಥೆಯು ಹಂಪಿಯ ಪ್ರಮುಖ ಸ್ಮಾರಕಗಳ ಸುತ್ತಮುತ್ತಲ ಪ್ರದೇಶಗಳ ಸ್ವಚ್ಛತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲಿದೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪಾರಂಪರಿಕ ಪರಿಸರವನ್ನು ಉಳಿಸಲು ಪ್ಲಾಸ್ಟಿಕ್ ಮುಕ್ತ ವಾತಾವರಣ ಅತ್ಯಗತ್ಯ ಎಂದು ಅಭಿಪ್ರಾಯಪಡಲಾಗಿದೆ. ವಿರೂಪಾಕ್ಷ ದೇವಸ್ಥಾನದ ಸಮೀಪವಿರುವ ಶೌಚಾಲಯ ಸಂಕೀರ್ಣದ ಸ್ವಚ್ಛತೆಯನ್ನು ಪ್ರತಿದಿನ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅಲ್ಲದೆ, ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ‘ಹಂಪಿ ನೂಕ್’ ಯೋಜನೆಯಡಿ ಹೊಸ ಶೌಚಾಲಯ ಸಂಕೀರ್ಣಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಸಚಿವರ ದೂರದೃಷ್ಟಿ: ಪಾರಂಪರ್ಯದ ಸಂರಕ್ಷಣೆ

ಸಚಿವ ಕೆ.ಜೆ. ಜಾರ್ಜ್ ಅವರು ಈ ಅಭಿಯಾನದ ಕುರಿತು ವಿಶೇಷ ಆಸಕ್ತಿ ವಹಿಸಿದ್ದಾರೆ. ಹಂಪಿ ಎಂದರೆ ಕೇವಲ ಕಲ್ಲುಗಳ ಸೌಂದರ್ಯವಲ್ಲ, ಅದು ಕನ್ನಡಿಗರ ಅಸ್ಮಿತೆ. “ಹಂಪಿಯ ಪಾರಂಪರಿಕ ಮಹತ್ವವನ್ನು ಕಾಪಾಡಿಕೊಂಡು, ಸ್ವಚ್ಛ, ಹಸಿರು ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ತಾಣವನ್ನಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಆದ್ಯತೆ” ಎಂದು ತಿಳಿಸಿದ್ದಾರೆ. ಮುಂದಿನ ಪೀಳಿಗೆಗೂ ಈ ಐತಿಹಾಸಿಕ ತಾಣದ ವೈಭವ ಹಾಗೆಯೇ ಉಳಿಯಬೇಕಾದರೆ, ಈಗಿನಿಂದಲೇ ಕಠಿಣ ಕ್ರಮಗಳು ಅಗತ್ಯವೆಂದು ಅವರು ಪ್ರತಿಪಾದಿಸಿದ್ದಾರೆ. ಈ ಅಭಿಯಾನದಲ್ಲಿ ಸರ್ಕಾರಿ ಇಲಾಖೆಗಳು ಮಾತ್ರವಲ್ಲದೆ, ಹಂಪಿಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರೂ ಸಹಭಾಗಿಗಳಾಗಬೇಕು ಎಂಬುದು ಇಲಾಖೆಯ ಅಪೇಕ್ಷೆಯಾಗಿದೆ. ಪ್ರವಾಸಿಗರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಬೋರ್ಡ್‌ಗಳನ್ನು ಅಳವಡಿಸುವುದು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರನ್ನು ಅಭಿಯಾನದ ಭಾಗವಾಗಿಸಲಾಗುವುದು ಎಂದು ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದ್ದಾರೆ.

ಹಂಪಿಯಂತಹ ವಿಶಾಲವಾದ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ದೊಡ್ಡ ಸವಾಲು. ಆದರೆ, ಟೆಂಡರ್ ಮೂಲಕ ವೃತ್ತಿಪರ ಸಂಸ್ಥೆಗಳನ್ನು ನೇಮಿಸುವುದು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸುವ ಸರ್ಕಾರದ ತೀರ್ಮಾನವು ಸಕಾರಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡಲಿದೆ. ಹಂಪಿಯ ಸೌಂದರ್ಯವನ್ನು ಕಸದ ರಾಶಿಯಿಂದ ಮುಕ್ತಗೊಳಿಸಿ, ಪ್ರವಾಸಿಗರು ಮತ್ತೊಮ್ಮೆ ಭೇಟಿ ನೀಡಲು ಇಚ್ಛಿಸುವಂತಹ ಸ್ವಚ್ಛ ತಾಣವಾಗಿ ರೂಪಿಸುವ ಗುರಿಯನ್ನು ಈ “ಕ್ಲೀನ್ ಆಂಡ್‌ ಗ್ರೀನ್ ಹಂಪಿ” ಹೊಂದಿದೆ.

Read More
Next Story