x

ಕರ್ನಾಟಕಕ್ಕೆ ಸಿಜೆಪಿ ಎಂಟ್ರಿ, ವಂದೇ ಮಾತರಂ ಬಗ್ಗೆ ರಾಜ್ಯ ಸರ್ಕಾರದ ಮಹತ್ವದ ಆದೇಶ; ಬಳ್ಳಾರಿ ಚಲೋಗೆ ತೆರೆ

ಕರ್ನಾಟಕದ ಸರ್ಕಾರಿ ಶಾಲೆಗಳ ಪರಿಶೀಲನೆಗೆ ಸಿಜೆಪಿ ನಿಯೋಗ ಭೇಟಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣಗಳಿಗೆ ರಾಜ್ಯ ಸರ್ಕಾರದ ಸೂಚನೆ, ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಗೆ ತೆರೆ. ರಾಜ್ಯದ ಪ್ರಮುಖ ಸುದ್ದಿಗಳ ವಿಶ್ಲೇಷಣೆ ಇಲ್ಲಿದೆ.


ಕರ್ನಾಟಕದಲ್ಲಿ ಇಂದು ಮೂರು ಪ್ರಮುಖ ಬೆಳವಣಿಗೆಗಳು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿವೆ. ನೀಟ್‌ ಪರೀಕ್ಷೆ ಅಕ್ರಮದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದ ಕಾಕ್ರೋಚ್‌ ಜನತಾ ಪಾರ್ಟಿ ಇದೀಗ ಕರ್ನಾಟಕದ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಪರಿಶೀಲನೆಗೆ ಮುಂದಾಗಿದೆ.

ಯಶವಂತಪುರ, ವರ್ತೂರು ಸೇರಿದಂತೆ ಬೆಂಗಳೂರಿನ ಕೆಲವು ಸರ್ಕಾರಿ ಶಾಲೆಗಳಿಗೆ ಸಿಜೆಪಿ ನಿಯೋಗ ಭೇಟಿ ನೀಡಿ, ಶಾಲೆಗಳ ಕಟ್ಟಡ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸುತ್ತಿದೆ. ‘School Thik Karo’ ಅಭಿಯಾನದ ಭಾಗವಾಗಿ ಕೆಲವು ಶಾಲೆಗಳಲ್ಲಿ ರಿಪೇರಿ ಕಾರ್ಯಗಳನ್ನೂ ಕೈಗೆತ್ತಿಕೊಂಡಿದೆ ಎನ್ನಲಾಗಿದೆ.

ಈ ಹಿಂದೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಶಾಲೆಗಳಿಗೆ ಮಾತ್ರ ಭೇಟಿ ನೀಡುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇದೀಗ ಬಿಜೆಪಿ ಆಡಳಿತದಲ್ಲಿಲ್ಲದ ಕರ್ನಾಟಕಕ್ಕೆ ಸಿಜೆಪಿ ನಿಯೋಗದ ಭೇಟಿ ಕುತೂಹಲ ಮೂಡಿಸಿದೆ.

ಇನ್ನು ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವ ವಿಚಾರದಲ್ಲೂ ಕರ್ನಾಟಕ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆದೇಶದಂತೆ, ಸಾಮಾನ್ಯ ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸೂಚಿಸಲಾಗಿದೆ.

ಆದರೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಆರು ಚರಣಗಳನ್ನು ಹಾಡಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಆರು ಚರಣಗಳ ಗಾಯನಕ್ಕೆ ಒತ್ತು ನೀಡುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ವಂದೇ ಮಾತರಂ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪ ನಡೆದಿದ್ದ ಹಿನ್ನೆಲೆಯಲ್ಲಿ, ಈ ಹೊಸ ಆದೇಶದ ಬಗ್ಗೆ ಬಿಜೆಪಿ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬ ಕುತೂಹಲವೂ ಮೂಡಿದೆ.

ಮತ್ತೊಂದೆಡೆ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ವಿರೋಧಿಸಿ ಬಿಜೆಪಿ ನಡೆಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆಗೂ ಇಂದು ತೆರೆ ಬಿದ್ದಿದೆ. ಸೆಪ್ಟೆಂಬರ್‌ 1ರಂದು ರಾಯಚೂರು ಜಿಲ್ಲೆಯ ಲಿಂಗಸೂಗೂರಿನಿಂದ ಆರಂಭಗೊಂಡಿದ್ದ ಪಾದಯಾತ್ರೆ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ವಿವಿಧ ಗ್ರಾಮಗಳು ಮತ್ತು ಪಟ್ಟಣಗಳ ಮೂಲಕ ಸಾಗಿಬಂದು ಬಳ್ಳಾರಿ ತಲುಪಿದೆ. ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಮಾರೋಪ ಸಮಾವೇಶದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

Read More
Next Story