
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: ಸೆ.28 ರಿಂದ ದೈಹಿಕ ಪರೀಕ್ಷೆಗಳು ಆರಂಭ
ನೇಮಕಾತಿಗಾಗಿ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಮೂಲ ವೃಂದ ವಿಭಾಗದಲ್ಲಿ 3,395 ಹುದ್ದೆಗಳಿದ್ದು, ಕಲ್ಯಾಣ ಕರ್ನಾಟಕ ವೃಂದ ವಿಭಾಗದಲ್ಲಿ 596 ಹುದ್ದೆಗಳಿವೆ.
ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ರಾಜ್ಯದಲ್ಲಿನ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಮತ್ತು ವ್ಯವಸ್ಥಿತವಾಗಿ ನಡೆಸಲು ಸಜ್ಜಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಖಾಲಿ ಇರುವ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ದೈಹಿಕ ಪರೀಕ್ಷೆಗಳ (ದೈಹಿಕ ಮಾನದಂಡ ಪರೀಕ್ಷೆ, ಸಹನಶಕ್ತಿ ಪರೀಕ್ಷೆ) ದಿನಾಂಕ ಮತ್ತು ಸ್ಥಳವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಸೆ.28 ರಿಂದ ದೈಹಿಕ ಪರೀಕ್ಷೆಗಳು ಆರಂಭಗೊಳ್ಳಲಿದೆ.
ಈ ಬೃಹತ್ ನೇಮಕಾತಿ ಅಭಿಯಾನದಲ್ಲಿ ಒಟ್ಟು 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ನೇಮಕಾತಿಯನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ. ಉಳಿಕೆ ಮೂಲ ವೃಂದ ವಿಭಾಗದಲ್ಲಿ ಒಟ್ಟು 3,395 ಹುದ್ದೆಗಳಿದ್ದು, ಇವುಗಳಿಗಾಗಿ 16,454 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಲ್ಯಾಣ ಕರ್ನಾಟಕ ವೃಂದ ವಿಭಾಗದಲ್ಲಿ 596 ಹುದ್ದೆಗಳಿದ್ದು, 2,942 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.
ವಲಯವಾರು ದೈಹಿಕ ಪರೀಕ್ಷೆಯ ವೇಳಾಪಟ್ಟಿ
ದೈಹಿಕ ಪರೀಕ್ಷೆಯು ಸೆ.28ರಿಂದ ಆರಂಭವಾಗಲಿದ್ದು, ರಾಜ್ಯದ ವಿವಿಧ ವಲಯಗಳಲ್ಲಿ ನಡೆಯಲಿದೆ. ಅತಿ ಹೆಚ್ಚು ಅಭ್ಯರ್ಥಿಗಳು ಮತ್ತು ಹುದ್ದೆಗಳನ್ನು ಹೊಂದಿರುವ ಬೆಂಗಳೂರು ನಗರ ಘಟಕದ (2,015 ಹುದ್ದೆಗಳು, 9,887 ಅಭ್ಯರ್ಥಿಗಳು) ಪರೀಕ್ಷೆಗಳು ಸೆ.28 ರಿಂದ ಅ.5 ರವರೆಗೆ ನಡೆಯಲಿವೆ. ಚಾಮರಾಜಪೇಟೆ ಸಿರ್ಸಿ ಸರ್ಕಲ್, ಆಡುಗೋಡಿ ಮತ್ತು ಆರ್.ಕೆ. ಹೆಗಡೆ ನಗರದ ಮೈದಾನಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ನಿಗದಿಪಡಿಸಲಾಗಿದೆ. ಕೇಂದ್ರ ವಲಯವಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆ ಮತ್ತು ರೈಲ್ವೆ ಘಟಕದ ಅಭ್ಯರ್ಥಿಗಳಿಗೆ ಸೆ.28 ರಿಂದ ಅ.3 ರವರೆಗೆ ಬೆಂಗಳೂರಿನ ಮಡಿವಾಳದ 3ನೇ ಬೆಟಾಲಿಯನ್ ಕೆಎಸ್ಆರ್ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ದಕ್ಷಿಣ ವಲಯವಾದ ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ವ್ಯಾಪ್ತಿಯ ಅಭ್ಯರ್ಥಿಗಳು ಸೆ.28 ರಿಂದ ಅ.5 ರವರೆಗೆ ಮೈಸೂರಿನ ಸಿಟಿ ಆರ್ಮ್ಸ್ ರಿಸರ್ವ್ (ಸಿಎಆರ್) ಮೈದಾನದಲ್ಲಿ ಪರೀಕ್ಷೆಗೆ ಹಾಜರಾಗಬೇಕು. ಪೂರ್ವ ವಲಯವಾದ ಶಿವಮೊಗ್ಗ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗದ ಅಭ್ಯರ್ಥಿಗಳ ಪರೀಕ್ಷೆಯು ಸೆ.29 ರಿಂದ ಅ.6 ರವರೆಗೆ ಶಿವಮೊಗ್ಗದ ನವಿಲೆ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ನಿಗದಿಯಾಗಿದೆ. ಪಶ್ಚಿಮ ವಲಯವಾದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಮತ್ತು ಚಿಕ್ಕಮಗಳೂರಿನ ಅಭ್ಯರ್ಥಿಗಳಿಗೆ ಸೆ.28 ರಿಂದ ಅ.3 ರವರೆಗೆ ಮಂಗಳೂರಿನ ಲಾಲ್ಬಾಗ್ ಮೈದಾನದಲ್ಲಿ ಪರೀಕ್ಷೆಗಳು ನಡೆಯಲಿವೆ. ಉತ್ತರ ವಲಯವಾದ ಗದಗ ಮತ್ತು ಹುಬ್ಬಳ್ಳಿ-ಧಾರವಾಡದ ಅಭ್ಯರ್ಥಿಗಳಿಗೆ ಸೆ.29 ಮತ್ತು 30 ರಂದು ಬೆಳಗಾವಿಯ ಮಚ್ಚೆಯ 2ನೇ ಬೆಟಾಲಿಯನ್ ಮೈದಾನದಲ್ಲಿ ಪರೀಕ್ಷೆ ಜರುಗಲಿದೆ. ಬಳ್ಳಾರಿ ವಲಯಕ್ಕೆ ಸಂಬಂಧಪಟ್ಟಂತೆ ಅ.5 ಮತ್ತು 6 ರಂದು ಕೊಪ್ಪಳದ ಮುನಿರಾಬಾದ್ನಲ್ಲಿ ಪರೀಕ್ಷೆ ನಡೆಯಲಿದೆ.
ಕಲ್ಯಾಣ ಕರ್ನಾಟಕ ವೃಂದದ ವಿವರಗಳು
ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಿವಿಧ ದಿನಾಂಕಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಅ.8 ರಂದು ಬೆಂಗಳೂರಿನ ಚಾಮರಾಜಪೇಟೆ ಮತ್ತು ಆಡುಗೋಡಿ ಮೈದಾನಗಳಲ್ಲಿ ನಡೆಯಲಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರದ ಅಭ್ಯರ್ಥಿಗಳಿಗೆ ಅ.12 ರಿಂದ 15 ರವರೆಗೆ ಕೊಪ್ಪಳದ ಮುನಿರಾಬಾದ್ನಲ್ಲಿ ಪರೀಕ್ಷೆ ಜರುಗಲಿದೆ. ಕಲಬುರಗಿ ಮತ್ತು ಬೀದರ್ನ ಅಭ್ಯರ್ಥಿಗಳು ಅ.12 ರಿಂದ 14 ರವರೆಗೆ ಕಲಬುರಗಿಯ 6ನೇ ಬೆಟಾಲಿಯನ್ ಕೆಎಸ್ಆರ್ಪಿ ಮೈದಾನದಲ್ಲಿ ಪರೀಕ್ಷೆಗೆ ಹಾಜರಾಗಬೇಕು.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
ಪೊಲೀಸ್ ನೇಮಕಾತಿ ವಿಭಾಗವು ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ. ಎಲ್ಲಾ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಿಂದ ತಮ್ಮ ಕರೆ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಕರೆ ಪತ್ರವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ. ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕದಂದು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದಲ್ಲಿಯೇ ವರದಿ ಮಾಡಬೇಕು. ತಡವಾಗಿ ಬರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ದೈಹಿಕ ಪರೀಕ್ಷೆಗಳು ಕಠಿಣವಾಗಿರುವುದರಿಂದ, ಅಭ್ಯರ್ಥಿಗಳು ಆರೋಗ್ಯದ ಕಡೆ ಗಮನಹರಿಸಿ, ಪರೀಕ್ಷೆಗೆ ಪೂರ್ಣ ಸಿದ್ಧತೆಯೊಂದಿಗೆ ಹಾಜರಾಗುವುದು ಸೂಕ್ತ. ಕರೆ ಪತ್ರದೊಂದಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಮೂಲ ಗುರುತಿನ ಚೀಟಿ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತ್ಯಾದಿ)ಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಧೋರಣೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲಾಖೆಯು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

