
10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಸರ್ವೇಯರ್‌ಗಳು 2 ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
10 ಲಕ್ಷ ರೂ. ಲಂಚಕ್ಕೆ ಬೇಡಿಕೆ; 2 ಲಕ್ಷ ರೂ. ಪಡೆವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್
ಚಿಕ್ಕಮಗಳೂರಿನಲ್ಲಿ ಕೃಷಿ ಜಮೀನಿನ ಸರ್ವೇ ಮಾಡಿಕೊಡಲು 10 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಸರ್ವೇಯರ್‌ಗಳು ರೈತರಿಂದ 2 ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೃಷಿ ಜಮೀನಿನ ಸರ್ವೇ ಮಾಡಿ, ಸ್ಕೆಚ್ ಸಿದ್ಧಪಡಿಸಿಕೊಡಲು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಭೂಮಾಪಕರು ರೈತರಿಂದ 2 ಲಕ್ಷ ರೂ. ಮುಂಗಡ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಭೂಮಾಪಕರಾದ (ಸರ್ವೇಯರ್) ದೊರೆರಾಜ್ ಮತ್ತು ರಂಗನಾಥ್ ಸಿಕ್ಕಿಬಿದ್ದವರು. ಇಂದಾವರ ಗ್ರಾಮದ ಧರಣೇಶ್ ಎಂಬುವರು ತಮ್ಮ ಕೃಷಿ ಜಮೀನಿನ ಸರ್ವೇ ಮಾಡಿಸಲು ಭೂಮಾಪನ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಈ ವೇಳೆ ಸರ್ವೇ ಮಾಡಿ ಸ್ಕೆಚ್ ತಯಾರಿಸಿಕೊಡಲು ಇಬ್ಬರು ಭೂಮಾಪಕರು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಖಾಸಗಿ ಕಚೇರಿಯಲ್ಲಿ ಹಣ ಪಡೆಯುವಾಗ ದಾಳಿ
ಒಪ್ಪಂದದಂತೆ 2 ಲಕ್ಷ ರೂಪಾಯಿ ಮುಂಗಡ ಹಣ ನೀಡಲು ಧರಣೇಶ್ ಮುಂದಾಗಿದ್ದರು. ಚಿಕ್ಕಮಗಳೂರಿನ ಖಾಸಗಿ ಕಚೇರಿಯಲ್ಲಿ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಸರ್ವೇಯರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಭೂಮಾಪಕರು ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ರೈತ ಧರಣೇಶ್ ಅವರು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ಅದರಂತೆ ಭೂಮಾಪಕರಿಗೆ ಹಣ ನೀಡುವಾಗ ಟ್ರ್ಯಾಪ್ ಮಾಡಿ, ವಶಕ್ಕೆ ಪಡೆಯಲಾಗಿದೆ.
ಡಿವೈಎಸ್‌ಪಿ ನೇತೃತ್ವದಲ್ಲಿ ಕಾರ್ಯಾಚರಣೆ
ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲಂಚದ ಹಣ ಸ್ವೀಕರಿಸಿದ ಆರೋಪದ ಮೇಲೆ ಇಬ್ಬರು ಭೂಮಾಪಕರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

