ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ತಿರುಗೇಟು
x

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ತಿರುಗೇಟು

ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು, ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಅವರಿಗೆ ತಲೆ ಕೆಟ್ಟಿರಬೇಕು ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣ ಕಾವೇರಿರುವ ಬೆನ್ನಲ್ಲೇ, ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಕುಮಾರಸ್ವಾಮಿ ಯಾರು? ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ಒಪ್ಪದಿರಲು ಅವರು ಯಾರು? ಇವರ ಅಧಿಕಾರಕ್ಕೂ ಮತ್ತು ರಾಜ್ಯದ ಆಂತರಿಕ ರಾಜಕೀಯಕ್ಕೂ ಏನು ಸಂಬಂಧ?" ಎಂದು ಕಿಡಿಕಾರಿದರು.

"ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ, ತಮ್ಮ ಜವಾಬ್ದಾರಿಯನ್ನು ಅವರು ನಿರ್ವಹಿಸಲಿ. ಅದನ್ನು ಬಿಟ್ಟು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರೆ ಅವರಿಗೆ ತಲೆ ಕೆಟ್ಟಿರಬೇಕು" ಎಂದು ಖಾರವಾಗಿ ನುಡಿದರು. ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ನಡೆಸಲಾಗಿದೆ ಎಂಬ ವಿಡಿಯೋ ಹರಿದಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಜೆಡಿಎಸ್‌ನವರೇ ಸೃಷ್ಟಿಸಿದ ನಾಟಕ ಎಂದು ಆರೋಪಿಸಿದರು. "ಅವರ ಸೋಷಿಯಲ್ ಮೀಡಿಯಾ ಪೇಜ್‌ನಿಂದಲೇ ವಿಡಿಯೋ ಹರಡಿದೆ, ಆರೋಪಿಗಳನ್ನು ಬಂಧಿಸಿದ್ದು ಕಾನೂನು ಪ್ರಕಾರವೇ ಸರಿ. ಇದರಲ್ಲಿ ತಪ್ಪೇನಿದೆ?" ಎಂದು ಸಮರ್ಥಿಸಿಕೊಂಡರು.

"ಮಗು ಚಿವುಟಿ, ತೊಟ್ಟಿಲು ತೂಗುವ ನಾಟಕ"

ಸಿದ್ದರಾಮಯ್ಯ ಅವರ ಬಗ್ಗೆ ಕುಮಾರಸ್ವಾಮಿ ತೋರುತ್ತಿರುವ ಅನುಕಂಪದ ಬಗ್ಗೆ ವ್ಯಂಗ್ಯವಾಡಿದ ಸಚಿವರು, "ಇಲ್ಲಿಯವರೆಗೂ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಅಕ್ಕರೆ ಇಲ್ಲದವರು ಈಗ ಇದ್ದಕ್ಕಿದ್ದಂತೆ ಪ್ರೀತಿ ತೋರುತ್ತಿದ್ದಾರೆ. ಮಗು ಚಿವುಟಿ ತೊಟ್ಟಿಲು ತೂಗುವ ನಾಟಕವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ನೂರಾರು ಮಹಿಳೆಯರು ಸಂತ್ರಸ್ತರಾಗಿದ್ದರೂ ಅದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದವರಿಗೆ ಈಗ ಸಿದ್ದರಾಮಯ್ಯ ಅವರ ಮೇಲೆ ಕಾಳಜಿ ಹುಟ್ಟಿದ್ದು ಹೇಗೆ?" ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿ, ಈ ಸ್ಟಿಂಗ್ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಒಪ್ಪಿಸುವಂತೆ ಅವರು ಸವಾಲು ಹಾಕಿದರು.

ದಸರಾ ಅಖಾಡದಲ್ಲಿ ಹೆಣ್ಣುಮಕ್ಕಳ ದರ್ಬಾರ್

ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆಯೂ ಮೈಸೂರಿನ ದಸರಾ ಕುಸ್ತಿ ಪಂದ್ಯಾವಳಿಯ ಅಖಾಡದಲ್ಲಿ ಉತ್ಸಾಹದ ವಾತಾವರಣ ಕಂಡುಬಂತು. ವಸ್ತು ಪ್ರದರ್ಶನದ ಮೈದಾನದ ಆವರಣದಲ್ಲಿ ಸಚಿವ ಚಲುವರಾಯಸ್ವಾಮಿ ಅವರು ದಸರಾ ಕುಸ್ತಿ ಪಂದ್ಯಾವಳಿಗೆ ರಂಗುರಂಗಿನ ಚಾಲನೆ ನೀಡಿದರು. ಕುಸ್ತಿಪಟುಗಳ ಕೈಕುಲುಕಿ ಅವರನ್ನು ಹುರಿದುಂಬಿಸಿದ ಸಚಿವರು, 17 ವರ್ಷದೊಳಗಿನ ಬಾಲಕಿಯರ 61 ಕೆಜಿ ವಿಭಾಗದಲ್ಲಿ ನಡೆದ ರೀತು ಮತ್ತು ನಂದಿನಿ ಅವರ ಕಾದಾಟವನ್ನು ತೀವ್ರ ಆಸಕ್ತಿಯಿಂದ ವೀಕ್ಷಿಸಿದರು. ಹೆಣ್ಣುಮಕ್ಕಳು ಅಖಾಡದಲ್ಲಿ ತೋರಿದ ಚುರುಕುತನ ಮತ್ತು ಶಕ್ತಿ ಪ್ರದರ್ಶನವನ್ನು ಕಂಡು ಮಂತ್ರಮುಗ್ಧರಾದ ಸಚಿವರು, ಕ್ರೀಡಾಪಟುಗಳ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕುಸ್ತಿಪಟುಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, "ಮಣ್ಣಿನ ಕುಸ್ತಿ ನಮ್ಮ ಮೈಸೂರಿನ ಹೆಮ್ಮೆಯ ಸಂಸ್ಕೃತಿ. ಒಂದು ಕಾಲದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಗರಡಿ ಮನೆಗಳಲ್ಲಿ ಇಂದು ಹೆಣ್ಣುಮಕ್ಕಳು ಪ್ರವೇಶಿಸಿರುವುದು ಸಮಾಜದ ದೊಡ್ಡ ಬದಲಾವಣೆ. ಹೆಣ್ಣುಮಕ್ಕಳು ಯಾವುದೇ ಕ್ಷೇತ್ರದಲ್ಲೂ ಪುರುಷರಿಗಿಂತ ಕಡಿಮೆಯಿಲ್ಲ ಎಂಬುದನ್ನು ಈ ಇಬ್ಬರು ಪೈಲ್ವಾನರು ಸಾಬೀತುಪಡಿಸಿದ್ದಾರೆ" ಎಂದರು. ದಸರಾ ಕ್ರೀಡಾಕೂಟವು ಕೇವಲ ಒಂದು ಉತ್ಸವವಾಗಿ ಉಳಿಯಬಾರದು. ಇದು ಯುವ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಭದ್ರ ಬುನಾದಿಯಾಗಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದ ಬಡ ಪ್ರತಿಭಾವಂತ ಪೈಲ್ವಾನರಿಗೆ ಪೌಷ್ಟಿಕ ಆಹಾರದ ವ್ಯವಸ್ಥೆ ಮತ್ತು ಅತ್ಯಾಧುನಿಕ ಮ್ಯಾಟ್ ಕುಸ್ತಿ ತರಬೇತಿ ನೀಡಲು ರಾಜ್ಯ ಸರ್ಕಾರ ವಿಶೇಷ ಯೋಜನೆ ರೂಪಿಸಲಿದೆ ಎಂದು ಭರವಸೆ ನೀಡಿದರು. ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿ, ಕ್ರೀಡಾಸ್ಫೂರ್ತಿಯಿಂದ ಆಟವಾಡಲು ಅವರು ಕ್ರೀಡಾಪಟುಗಳಿಗೆ ಕರೆ ನೀಡಿದರು.

Read More
Next Story