
"ಹೊಟ್ಟೆನೋವಿಗೆ ಔಷಧಿ ನೀಡಲು ಸಾಧ್ಯವಿಲ್ಲ" - ಎಚ್‌ಡಿಕೆಗೆ ಚಲುವರಾಯಸ್ವಾಮಿ ಟಾಂಗ್
"ಕುಮಾರಸ್ವಾಮಿಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಹಿಟ್ ಅಂಡ್ ರನ್ ರಾಜಕಾರಣವನ್ನು ಬಿಟ್ಟು ಮುಖಾಮುಖಿ ಚರ್ಚೆಗೆ ಬರಲಿ" ಎಂದು ಸಚಿವರು ಸವಾಲು ಹಾಕಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈಗ ರಾತ್ರಿ ನಿದ್ರೆ ಬರುತ್ತಿಲ್ಲ. ಒಂದು ಕಡೆ ಮಗ್ಗಲು ಬದಲಿಸಿದರೆ ಸಿಎಂ ಡಿ.ಕೆ. ಶಿವಕುಮಾರ್ ಕಾಣಿಸುತ್ತಾರೆ, ಇನ್ನೊಂದು ಕಡೆ ತಿರುಗಿದರೆ ನಾನು ಮತ್ತು ಶಾಸಕ ಬಾಲಕೃಷ್ಣ ಕಾಣುತ್ತೇವೆ. ನನ್ನ ರಾಜಕೀಯ ಬೆಳವಣಿಗೆಯನ್ನು ಕಂಡು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅವರ ಈ ಹೊಟ್ಟೆನೋವಿಗೆ ನಾನು ಔಷಧಿ ನೀಡಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ವಿಧಾನಸೌಧಕ್ಕೆ ಬರಲಿ ಅಥವಾ ಯಾವುದೇ ಟಿವಿ ಚಾನೆಲ್ ಮುಂದೆ ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಹಿಟ್ ಅಂಡ್ ರನ್ ರಾಜಕಾರಣವನ್ನು ಬಿಟ್ಟು ಮುಖಾಮುಖಿ ಚರ್ಚೆಗೆ ಬರಲಿ" ಎಂದು ಸವಾಲು ಹಾಕಿದರು. 2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಲವು ದಿನ ನಾಪತ್ತೆಯಾಗಿದ್ದ ಪ್ರಸಂಗವನ್ನು ನೆನಪಿಸಿದ ಚಲುವರಾಯಸ್ವಾಮಿ, "ಅವರನ್ನು ಬೆಳಿಗ್ಗೆ 5 ಗಂಟೆಗೆ ಹುಡುಕಿ ಕ್ಯಾಬಿನೆಟ್‌ಗೆ ಕರೆತರುವ ಟಾಸ್ಕ್ ಅನ್ನು ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ನನಗೆ ನೀಡಿದ್ದರು. ಆ ದಿನ ನಾನು ಅವರ ಮನೆ ಬಾಗಿಲು ಬಡಿದು ಎಬ್ಬಿಸಿದ್ದೆ. ನಾನು ಆ ವಿಷಯಗಳನ್ನು ಬಿಚ್ಚಿಟ್ಟರೆ ಅವರು ತಡೆದುಕೊಳ್ಳಲಾರರು" ಎಂದು ಎಚ್ಚರಿಸಿದರು.
"ಕೇಂದ್ರ ಮಂತ್ರಿಯಾಗಿ ನಿಮ್ಮ ಕೊಡುಗೆ ಏನು?"
ಕುಮಾರಸ್ವಾಮಿ ಅವರ ಕೇಂದ್ರ ಸಚಿವ ಸ್ಥಾನವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಸಚಿವರು, "ದೇಶದ ಅತೀ ದೊಡ್ಡ ಖಾತೆಗಳನ್ನು ಹೊಂದಿರುವ ನೀವು, ಕಳೆದ ಎರಡೂವರೆ ವರ್ಷದಿಂದ ಕೇಂದ್ರದಿಂದ ರಾಜ್ಯಕ್ಕೆ ತಂದಿರುವ ಅನುದಾನದ ಲೆಕ್ಕ ಕೊಡಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂಪಾಯಿ ನೀಡಲು ನಿಮ್ಮಿಂದ ಸಾಧ್ಯವಾಗಲಿಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಕೊಡಿಸುವಲ್ಲಿ ಯಶಸ್ವಿಯಾಗಲಿ" ಎಂದು ಆಗ್ರಹಿಸಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೊಡುಗೆಯಿಂದಾಗಿ ಇಂದು ಪ್ರಧಾನಿಗಳು ಆ ಸ್ಥಾನದಲ್ಲಿದ್ದಾರೆ, ಆದರೆ ರಾಜ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ನೀರಿನ ಹಿತದೃಷ್ಟಿಯಿಂದ ದೆಹಲಿ ಪ್ರವಾಸ
ನಾನು ರಾಜ್ಯದ ನೀರಾವರಿ ಸಮಸ್ಯೆಗಳನ್ನು ಚರ್ಚಿಸಲು ದೆಹಲಿಗೆ ಹೋಗಿದ್ದೆ. ಪ್ರಧಾನಿ ಅವರ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯದ ಹಕ್ಕನ್ನು ಪ್ರತಿಪಾದಿಸಿದ್ದೇನೆ. ಮೇಕೆದಾಟು ಯೋಜನೆ ಬಗ್ಗೆ ಸಿಡಬ್ಲ್ಯೂಸಿ ಜತೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಮಹದಾಯಿ ವಿಚಾರದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನಕ್ಕೆ ಮನವಿ ಮಾಡುತ್ತೇನೆ. ಕಾನೂನಿನ ಹೋರಾಟದ ಮೂಲಕ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣವನ್ನು 12 ಸಾವಿರ ಕ್ಯೂಸೆಕ್ಸ್‌ನಿಂದ 9 ಸಾವಿರ ಕ್ಯೂಸೆಕ್ಸ್‌ಗೆ ತಗ್ಗಿಸುವಲ್ಲಿ ಸಫಲರಾಗಿದ್ದೇವೆ ಎಂದರು.
ಕೆಪಿಎಸ್‌ಸಿ ಅಕ್ರಮದ ಬಗ್ಗೆ ತನಿಖೆಗೆ ಒಪ್ಪಿಗೆ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, "ಯಾವುದೇ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಲಿ, ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ. ಆದರೆ, ಈ ಹಿಂದೆ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಯಾರು? ಅಂದಿನ ನೇಮಕಗಳ ಹೊಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಹೊರಬೇಕು" ಎಂದು ಕಿಡಿಕಾರಿದರು. ಇದೇ ವೇಳೆ ರಾಜ್ಯದ ಅಣೆಕಟ್ಟುಗಳ ವೆಬ್‌ಸೈಟ್ ಹ್ಯಾಕ್ ಆಗಿರುವ ಬಗ್ಗೆ ಈಗಾಗಲೇ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

