
ಚಾಮರಾಜನಗರ ಆಕ್ಸಿಜನ್ ದುರಂತ; ಸಂತ್ರಸ್ತ ಕುಟುಂಬಗಳ 25 ಮಂದಿಗೆ ನೇಮಕಾತಿ ಪತ್ರ ನೀಡಿದ ಸಿಎಂ
ಆಮ್ಲಜನಕ ಪೂರೈಕೆಯಲ್ಲಾದ ವ್ಯತ್ಯಯದಿಂದ ಚಿಕಿತ್ಸೆ ಪಡೆಯುತ್ತಿದ್ದ 34 ಮಂದಿ ರೋಗಿಗಳು ಉಸಿರುಗಟ್ಟಿ ಧಾರುಣವಾಗಿ ಮೃತಪಟ್ಟಿದ್ದರು. ಅಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು.
ಕೋವಿಡ್ ಅವಧಿಯಲ್ಲಿ ಆಮ್ಲಜನಕದ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊನೆಗೂ ಉದ್ಯೋಗ ನೀಡುವ ಮೂಲಕ ಆಸರೆಯಾಗಿದೆ.
ಮೃತರ ಕುಟುಂಬದ ಸದಸ್ಯರಿಗೆ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಏ.21) ಅಧಿಕೃತವಾಗಿ ಸಂತ್ರಸ್ತ ಕುಟುಂಬಗಳಲ್ಲಿ ತಲಾ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಗುಂಡ್ಲುಪೇಟೆಯ ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನಾ ಆಸ್ಪತ್ರೆಯಲ್ಲಿ (ಸಿಮ್ಸ್) ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ಸಂತ್ರಸ್ತ ಕುಟುಂಬದ ಸದಸ್ಯರನ್ನು ನೇಮಕ ಮಾಡಲಾಗಿದೆ.
ಆಮ್ಲಜನಕ ದುರಂತ ಏನು?
2021ರ ಮೇ 2ರಂದು ಮಧ್ಯರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕದ ತೀವ್ರ ಅಭಾವ ಉಂಟಾಗಿತ್ತು. ಆಮ್ಲಜನಕ ಪೂರೈಕೆಯಲ್ಲಾದ ವ್ಯತ್ಯಯದಿಂದ ಚಿಕಿತ್ಸೆ ಪಡೆಯುತ್ತಿದ್ದ 34 ಮಂದಿ ರೋಗಿಗಳು ಉಸಿರುಗಟ್ಟಿ ಧಾರುಣವಾಗಿ ಮೃತಪಟ್ಟಿದ್ದರು. ಅಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಇದು ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಭರವಸೆ ನೀಡಿದ್ದ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯು ಚಾಮರಾಜನಗರದ ಮೂಲಕ ಹಾದುಹೋದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಕರೆದುಕೊಂಡು ಹೋಗಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿಸಿ, ಸಾಂತ್ವನ ಹೇಳಿಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ರಾಹುಲ್ ಗಾಂಧಿ ಅವರು ಅಂದು ಬಹಿರಂಗವಾಗಿಯೇ ವಾಗ್ದಾನ ನೀಡಿದ್ದರು.
ಸತತ ಹೋರಾಟಕ್ಕೆ ಸಂದ ಜಯ
ಅಧಿಕಾರಕ್ಕೆ ಬಂದ ನಂತರವೂ ಸಂತ್ರಸ್ತರು ತಮ್ಮ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಸರಣಿ ಪ್ರತಿಭಟನೆಗಳು ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿದ ಫಲವಾಗಿ, ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ಕುಟುಂಬಗಳಿಗೆ ಉದ್ಯೋಗ ನೀಡಲು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮೋದನೆ ನೀಡಲಾಗಿತ್ತು.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಈ ದುರಂತವು ಎಂದಿಗೂ ಮರೆಯಲಾಗದ ನೋವು. ರಾಹುಲ್ ಗಾಂಧಿಯವರು ನೀಡಿದ್ದ ಮಾತಿನಂತೆ ನಮ್ಮ ಸರ್ಕಾರ ನೊಂದ ಕುಟುಂಬಗಳ ಕೈ ಹಿಡಿದಿದೆ. ಉದ್ಯೋಗ ನೀಡುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆಮ್ಲಜನಕ ದುರಂತ: ಅಧಿಕಾರಿಗಳೊಂದಿಗೆ ಚರ್ಚೆ
ಆಮ್ಲಜನಕ ದುರಂತದಲ್ಲಿ ತಪ್ಪಿತಸ್ಥರ ಬಗ್ಗೆ ಕ್ರಮ ಕೈಗೊಳ್ಳದ ಕುರಿತು ಗುಂಡ್ಲಿಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

