x

ಪೈರಿಂಗ್ ತಪ್ಪು ಎನ್ನುವುದಾದರೆ, ಅರಣ್ಯ ಸಿಬ್ಬಂದಿ ಜೀವಕ್ಕೆ ಅಪಾಯವಾದರೆ ಏನು ಹೇಳುತ್ತಿದ್ದರು: ಜೋಸೆಫ್ ಹೂವರ್

ಆತ್ಮರಕ್ಷಣೆ ಹೆಸರಿನಲ್ಲಿ ಗುಂಡು ಹಾರಿಸುವ ಅಧಿಕಾರ ಸಿಬ್ಬಂದಿಗೆ ಇದೆಯೇ? ಈ ಎಲ್ಲ ಪ್ರಶ್ನೆಗಳ ಕುರಿತು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಅವರು ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಅರಣ್ಯ ಇಲಾಖೆ ಸಿಬ್ಬಂದಿಯ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿರುವ ಅವರು, ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಯ ಅನಿವಾರ್ಯತೆ ಹಾಗೂ ಕಾನೂನು ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾವೇರಿ ವನ್ಯಜೀವಿಧಾಮದ ಅರಣ್ಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ವನ್ಯಪ್ರಾಣಿಯೊಂದನ್ನು ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದಾಗ, ಅರಣ್ಯ ಸಿಬ್ಬಂದಿ ಶರಣಾಗುವಂತೆ ಸೂಚಿಸಿದರೂ ಕೇಳದೆ ಸಿಬ್ಬಂದಿ ಮೇಲೆಯೇ ಗುಂಡು ಹಾರಿಸಿದ ಪರಿಣಾಮ ಅನಿವಾರ್ಯವಾಗಿ ಪ್ರತಿದಾಳಿ ನಡೆಸಬೇಕಾಯಿತು ಎಂಬ ಅರಣ್ಯ ಇಲಾಖೆಯ ಹೇಳಿಕೆಯನ್ನು ಅವರು ಬೆಂಬಲಿಸಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದು ವಿಷಾದನೀಯವಾದರೂ, ವಾಸ್ತವ ನೆಲೆಗಟ್ಟಿನಲ್ಲಿ ಘಟನೆಯನ್ನು ವಿಶ್ಲೇಷಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ರೈತರು ರಾತ್ರಿ ವೇಳೆ ಕಾಡಿಗೆ ಹೋಗುವುದಿಲ್ಲ

ಮೃತಪಟ್ಟವರು ಕಳ್ಳಬೇಟೆಗಾರರಲ್ಲ, ಅವರು ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತರು ಎಂಬ ಸ್ಥಳೀಯರ ಆರೋಪವನ್ನು ಜೋಸೆಫ್ ಹೂವರ್ ತಾರ್ಕಿಕವಾಗಿ ಪ್ರಶ್ನಿಸಿದ್ದಾರೆ. ರೈತರಾಗಲಿ ಅಥವಾ ದನಗಾಹಿಗಳಾಗಲಿ ರಾತ್ರಿ ಹೊತ್ತಿನಲ್ಲಿ ದನ ಮೇಯಿಸಲು ದಟ್ಟ ಅರಣ್ಯದೊಳಗೆ ಹೋಗುವುದಿಲ್ಲ. ಜತೆಗೆ, ರೈತರು ತಮ್ಮ ಬಳಿ ನಾಡಬಂದೂಕುಗಳನ್ನು (ಕಂಟ್ರಿಮೇಡ್) ಇಟ್ಟುಕೊಂಡು ತಿರುಗಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿ ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರಗಳೊಂದಿಗೆ ರಾತ್ರಿ ವೇಳೆ ಕಾಡಿನಲ್ಲಿ ಓಡಾಡುವುದೇ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜೀವದ ಹಂಗು ತೊರೆದು ಸಿಬ್ಬಂದಿ ಕಾರ್ಯನಿರ್ವಹಣೆ

ಈ ಘಟನೆಯ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಅವರೊಂದಿಗೆ ತಾವು ನಡೆಸಿದ ಮಾತುಕತೆಯನ್ನು ಉಲ್ಲೇಖಿಸಿದ ಹೂವರ್, ಕಾಡಿನೊಳಗೆ ಬೇಟೆಗಾರರು ನುಗ್ಗಿರುವ ಖಚಿತ ಮಾಹಿತಿ ಆಧರಿಸಿಯೇ ಸಿಬ್ಬಂದಿ ಕಾರ್ಯಾಚರಣೆಗೆ ತೆರಳಿದ್ದರು ಎಂದಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾಗ ಶಂಕಿತರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ತಮ್ಮ ಪ್ರಾಣ ರಕ್ಷಣೆಗಾಗಿ ಮತ್ತು ಕರ್ತವ್ಯದ ಭಾಗವಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿ ಸದಾ ತಮ್ಮ ಜೀವವನ್ನು ಪಣಕ್ಕಿಟ್ಟು, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ದುಷ್ಕರ್ಮಿಗಳು ಗುಂಡು ಹಾರಿಸುವಾಗ ಸಿಬ್ಬಂದಿ ಪ್ರಾಣರಕ್ಷಣೆ ಮಾಡಿಕೊಳ್ಳದೆ ಸುಮ್ಮನಿರಲು ಸಾಧ್ಯವೇ ಎಂದು ಅವರು ಮರುಪ್ರಶ್ನೆ ಹಾಕಿದ್ದಾರೆ.

ಕಠಿಣ ಕಾನೂನುಗಳ ಅನುಷ್ಠಾನಕ್ಕೆ ಒತ್ತು

ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಸಂಬಂಧಿಸಿದಂತೆ ಅಸ್ಸಾಂ ರಾಜ್ಯದಲ್ಲಿರುವ ಕಠಿಣ ಕಾನೂನು ವ್ಯವಸ್ಥೆಯನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ. ಅಸ್ಸಾಂನಲ್ಲಿ ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ನೇರವಾಗಿ ಗುಂಡು ಹಾರಿಸುವ ಕಠಿಣ ಕಾನೂನು ಜಾರಿಯಲ್ಲಿದೆ. ವಿಶ್ವದ ಅನೇಕ ದೇಶಗಳಲ್ಲೂ ಅರಣ್ಯ ರಕ್ಷಣೆಗೆ ಇಂಥದ್ದೇ ಕಠಿಣ ಕಾನೂನುಗಳಿವೆ. ಪ್ರಸ್ತುತ ಎನ್‌ಕೌಂಟರ್ ಪ್ರಕರಣದ ಕುರಿತು ಸರ್ಕಾರ ತನಿಖೆಗೆ ಆದೇಶಿಸಿರುವುದು ಸಹಜ ಪ್ರಕ್ರಿಯೆಯಾಗಿದೆ. ಆದರೆ, ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದು ತಪ್ಪು ಎಂದು ಹೇಳಿಕೆ ನೀಡುವ ರಾಜಕಾರಣಿಗಳು, ಒಂದು ವೇಳೆ ದುಷ್ಕರ್ಮಿಗಳ ಗುಂಡಿಗೆ ಅರಣ್ಯ ಸಿಬ್ಬಂದಿಯೇ ಬಲಿಯಾಗಿದ್ದರೆ ಏನು ಹೇಳುತ್ತಿದ್ದರು ಎಂದು ಹೂವರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಅಕ್ರಮ ಬಂದೂಕುಗಳ ವಶಕ್ಕೆ ಆಗ್ರಹ

ಇದೇ ವೇಳೆ ಅರಣ್ಯದಂಚಿನ ಗ್ರಾಮಗಳಲ್ಲಿನ ಅಕ್ರಮ ಶಸ್ತ್ರಾಸ್ತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಅರಣ್ಯ ಪ್ರದೇಶದ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಕೆಲವರು ಕಾನೂನುಬಾಹಿರವಾಗಿ ನಾಡಬಂದೂಕುಗಳನ್ನು ಇಟ್ಟುಕೊಂಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೊದಲು ಇಂತಹ ಅಕ್ರಮ ಬಂದೂಕುಗಳನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶ ಮಾಡಬಾರದು, ಇದು ವನ್ಯಜೀವಿಗಳಿಗೂ ಮತ್ತು ಮನುಷ್ಯರಿಗೂ ಅಪಾಯಕಾರಿ ಎಂದು ಅವರು ಕಳಕಳಿಯ ಮನವಿ ಮಾಡಿದ್ದಾರೆ.

Read More
Next Story