
ಬರಪೀಡಿತ ತಾಲೂಕು ಘೋಷಣೆಯಲ್ಲಿ ತಾರತಮ್ಯ: ಕಂದಕೂರ್‌ಗೆ ಛಲವಾದಿ ನಾರಾಯಣಸ್ವಾಮಿ ಬೆಂಬಲ
ಬರಪೀಡಿತ ಯಾದಗಿರಿ, ಗುರುಮಿಟ್ಕಲ್ ತಾಲೂಕುಗಳ ಘೋಷಣೆಗೆ ಒತ್ತಾಯಿಸಿ ಶಾಸಕ ಶರಣುಗೌಡ ಕಂದಕೂರ ನಡೆಸುತ್ತಿದ್ದ ಪ್ರತಿಭಟನೆಗೆ ಛಲವಾದಿ ನಾರಾಯಣಸ್ವಾಮಿ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದರು.
ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜಕೀಯ ದ್ವೇಷದಿಂದ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ.
ವಿಧಾನಸೌಧದ ಬಳಿ ಬರಪೀಡಿತ ಯಾದಗಿರಿ ಮತ್ತು ಗುರುಮಿಟ್ಕಲ್ ತಾಲೂಕುಗಳ ಘೋಷಣೆಗೆ ಒತ್ತಾಯಿಸಿ ಶಾಸಕ ಶರಣುಗೌಡ ಕಂದಕೂರ ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದರು.
ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಾಗಿ ಘೋಷಿಸಲಾದ ತಾಲೂಕುಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರಿರುವ ಕ್ಷೇತ್ರಗಳು ಕೇವಲ 17 ಮಾತ್ರ ಇವೆ. ಉಳಿದಂತೆ ಹೆಚ್ಚಿನ ಕ್ಷೇತ್ರಗಳು ಆಡಳಿತ ಪಕ್ಷದ ಶಾಸಕರಿಗೇ ಸೇರಿವೆ. ಇದು ಸರ್ಕಾರದ ತಾರತಮ್ಯ ನೀತಿಗೆ ಸಾಕ್ಷಿ ಎಂದು ದೂರಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ಗುರುಮಿಠಕಲ್ ಮತ್ತು ಯಾದಗಿರಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ, ಅಲ್ಲಿ ಶಾಸಕ ಶರಣುಗೌಡ ಕಂದಕೂರ ಅವರು ವಿರೋಧ ಪಕ್ಷದವರಾಗಿದ್ದಾರೆ ಎಂಬ ಕಾರಣಕ್ಕೆ ಆ ಕ್ಷೇತ್ರಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ. “ಶಾಸಕರ ಮೇಲೆ ಹಗೆತನವಿದ್ದರೆ ಅವರನ್ನು ಜೈಲಿಗೆ ಹಾಕಿ, ಆದರೆ ಕ್ಷೇತ್ರದ ಅಮಾಯಕ ಜನರ ಬದುಕಿನ ಜೊತೆ ಚೆಲ್ಲಾಟ ಆಡಬೇಡಿ ಎಂದು ಕಿಡಿಕಾರಿದರು.
ಸದನ ಮೊಟಕುಗೊಳಿಸಿದ್ದರ ವಿರುದ್ಧ ಕಿಡಿ
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ, ಭ್ರಷ್ಟ ಸಚಿವರನ್ನು ರಕ್ಷಿಸಿಕೊಳ್ಳಲು ಸರ್ಕಾರ ಅಧಿವೇಶನವನ್ನು ಅವಧಿಗೂ ಮುನ್ನವೇ ಮೊಟಕುಗೊಳಿಸಿತು ಎಂದು ಆರೋಪಿಸಿದರು. ಮಳೆಗಾಲದ ಅಧಿವೇಶನದಲ್ಲೇ ಬರ ಕುರಿತು ಚರ್ಚಿಸಲು ಅವಕಾಶ ಕೋರಿದ್ದರೂ ಸರ್ಕಾರ ಕಿವಿಗೊಡಲಿಲ್ಲ. ಈಗ ಅದೇ ವಿಷಯಕ್ಕಾಗಿ ವಿಶೇಷ ಅಧಿವೇಶನ ಕರೆದಿರುವುದು ನಾಟಕದ ಭಾಗ ಎಂದು ಟೀಕಿಸಿದರು. ಬಿಜೆಪಿಯು ಆರು ತಂಡಗಳನ್ನು ರಚಿಸಿ ಬರ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದರೂ, ಅದನ್ನು ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ. ನಂತರ ಬಿಜೆಪಿ ನಡೆಸಿದ ಪಾದಯಾತ್ರೆಯ ಬಿಸಿ ತಟ್ಟಿದ ಮೇಲೆ, ಈಗ ಸರ್ಕಾರ 200 ಕ್ಷೇತ್ರಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಇದು ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದರು.
ಅಧಿಕಾರಿಗಳಿಗಿಂತ ಭ್ರಷ್ಟ ಸಚಿವರೇ ಹೆಚ್ಚು
ಬರ ಪರಿಶೀಲನೆಗೆ ತೆರಳಿದ್ದ ಸಚಿವರು, ಬರದ ಸಂಕಷ್ಟವನ್ನು ಅವಲೋಕಿಸುವ ಬದಲು ಜಿಲ್ಲೆಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದರು ಎಂದು ವ್ಯಂಗ್ಯವಾಡಿದರು. ಸಿಎಂ ಡಿ.ಕೆ.ಶಿವಕುಮಾರ್, ಹೆಲಿಕಾಪ್ಟರ್ ಏರಿ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಮಳೆಯೇ ಇಲ್ಲದೆ ರೈತರು ಸಂಕಷ್ಟದಲ್ಲಿರುವಾಗ ಜನಪರ ಕಾಳಜಿ ಇಲ್ಲದ ಸರ್ಕಾರ ಹೇಗೆ ಜನಪರವಾಗಲು ಸಾಧ್ಯ? ಎಂದು ಪ್ರಶ್ನಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಬೇಕಾದ ಹಣವನ್ನು ಸಕಾಲಕ್ಕೆ ನೀಡುತ್ತಿಲ್ಲ. ಮಹಿಳೆಯರನ್ನು ಈ ಸರ್ಕಾರ ಭಿಕ್ಷುಕರಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಛಲವಾದಿ, ಹೆಣ್ಣುಮಕ್ಕಳು ಕಾಂಗ್ರೆಸ್‌ನ ಗುಲಾಮರಲ್ಲ ಎಂದು ಎಚ್ಚರಿಸಿದರು. ಶಾಲಾ ಮಕ್ಕಳ ಶೂ, ಬ್ಯಾಗ್ ಖರೀದಿಯಲ್ಲೂ ಲೂಟಿ ನಡೆದಿದೆ, ಕ್ರೈಸ್ ಸಂಸ್ಥೆಯಲ್ಲಿಯೂ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದು ಆರೋಪಿಸಿದರು.
'ಕ್ಲೀನ್ ಚಿಟ್' ಕಾರ್ಖಾನೆಯ ವ್ಯಂಗ್ಯ
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರುಗಳಿಗೆ ಯಾವ ಕಾರ್ಖಾನೆಯಲ್ಲಿ ಕ್ಲೀನ್ ಚಿಟ್ ತಯಾರಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಆಡಳಿತ ಪಕ್ಷದೊಳಗೇ ಭಿನ್ನಮತ ಭುಗಿಲೆದ್ದಿದೆ ಎಂದರು. ಸಚಿವರ ವರ್ತನೆ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿರುವ ಸ್ವಪಕ್ಷದ ಶಾಸಕರು ಅಸಮಾಧಾನಗೊಂಡಿದ್ದಾರೆ. ಬಿಜೆಪಿಯ ಸ್ಪಿನ್ ಬೌಲಿಂಗ್‌ಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಹಲವು ವಿಕೆಟ್‌ಗಳು ಬೀಳಲಿವೆ, ಮೇನ್ ವಿಕೆಟ್ ಸಹ ಹೋಗಬಹುದು ಎಂದು ಮಾರ್ಮಿಕವಾಗಿ ನುಡಿದರು. ಬಿಜೆಪಿ ಸರ್ಕಾರವಿದ್ದಾಗ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು. ಆದರೆ ಈ ಸರ್ಕಾರ ಮೀಸಲಾತಿಯನ್ನು ವಾಪಸ್ ಪಡೆಯುವ ಮೂಲಕ ಅನ್ಯಾಯ ಮಾಡಿದೆ ಎಂದು ದೂರಿದ ಅವರು, ಸಿದ್ದರಾಮಯ್ಯ ಅವರು ಅಹಿಂದ ವರ್ಗದವರನ್ನು ಕೇವಲ ಅಧಿಕಾರಕ್ಕಾಗಿ ಬಳಸಿಕೊಂಡು ಈಗ ಅವರನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ ಎಂದು ಟೀಕಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅವರ ವಿಚಾರಗಳಿಗೆ ಅವಹೇಳನ ಮಾಡುತ್ತಿರುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

