
ದಲಿತರ ಹಕ್ಕುಗಳಿಗಾಗಿ ಬಿಜೆಪಿಯ ಸಮರ: ಸೆ.1ರಿಂದ ಕಮಲ ಪಡೆಯಿಂದ ಬೃಹತ್ ಪಾದಯಾತ್ರೆ
ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‌ಇಪಿ, ಟಿಎಸ್‌ಪಿ ಯೋಜನೆಯ 53 ಸಾವಿರ ಕೋಟಿ ರೂ. ಸರ್ಕಾರ ಬೇರೆ ಯೋಜನೆಗಳಿಗೆ ಅಕ್ರಮವಾಗಿ ತಿರುಗಿಸಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಧೋರಣೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಧಿಯ ದುರುಪಯೋಗವನ್ನು ಖಂಡಿಸಿ, ಸೆಪ್ಟೆಂಬರ್ 1ರಿಂದ ಬಿಜೆಪಿ ವತಿಯಿಂದ ಐತಿಹಾಸಿಕ ಪಾದಯಾತ್ರೆ ನಡೆಯಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದಲಿತರು ತೀವ್ರ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಈ ಪಾದಯಾತ್ರೆಯು ಕೇವಲ ಒಂದು ಕಾರಣಕ್ಕೆ ಸೀಮಿತವಾಗಿಲ್ಲ, ಬದಲಾಗಿ ದಲಿತರ ಅಸ್ಮಿತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ನಡೆಸುತ್ತಿರುವ ಧರ್ಮಯುದ್ಧ. ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಯ 53 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರ ಬೇರೆ ಯೋಜನೆಗಳಿಗೆ ಅಕ್ರಮವಾಗಿ ತಿರುಗಿಸಿದೆ. ಪರಿಶಿಷ್ಟ ಜನಾಂಗದವರ ಏಳಿಗೆಗಾಗಿ ಮೀಸಲಾದ ಹಣವನ್ನು ಆ ಜನಾಂಗದ ಅಭಿವೃದ್ಧಿಗೆ ಬಳಸುವ ಬದಲು, ಸರ್ಕಾರ ಬೇರೆ ಕಾರ್ಯಗಳಿಗೆ ದುರುಪಯೋಗಪಡಿಸಿಕೊಂಡಿದೆ. ಇದು ದಲಿತ ಸಮುದಾಯಕ್ಕೆ ಮಾಡಿರುವ ಅತಿದೊಡ್ಡ ದ್ರೋಹ. ಆ ಹಣ ಮತ್ತೆ ಆ ಸಮುದಾಯಕ್ಕೆ ತಲುಪಲೇಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಕಡಿತದ ವಿರುದ್ಧ ಅಸಮಾಧಾನ
ರಾಜ್ಯದಲ್ಲಿ ಎಸ್.ಸಿ, ಎಸ್.ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂಬುದು ಬಿಜೆಪಿಯ ಸ್ಪಷ್ಟ ಬೇಡಿಕೆಯಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶ್ರೀರಾಮುಲು ನೇತೃತ್ವದಲ್ಲಿ ಹೋರಾಟ ನಡೆಸಿ ಎಸ್.ಸಿ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಮತ್ತು ಎಸ್.ಟಿ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಈ ಮೀಸಲಾತಿ ಪ್ರಮಾಣವನ್ನು ತಗ್ಗಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ವರ್ಗಕ್ಕೆ ಶೇ. 7.5ರಷ್ಟು ಮೀಸಲಾತಿ ಇದೆ. ಕರ್ನಾಟಕದಲ್ಲಿ ಏಕೆ ಇಲ್ಲ? ಹೋರಾಟದ ಮೂಲಕ ನಾವು ಜಾರಿಗೆ ತಂದಿದ್ದ ಮೀಸಲಾತಿಯನ್ನು ಕಡಿಮೆ ಮಾಡುವ ನೈತಿಕ ಹಕ್ಕನ್ನು ನಿಮಗೆ ಯಾರು ಕೊಟ್ಟರು? ವಾಲ್ಮೀಕಿ ನಿಗಮದ ಹಗರಣದಲ್ಲಿ ಲೂಟಿಯಾಗಿರುವ 187 ಕೋಟಿ ರೂಪಾಯಿಗಳನ್ನು ಕೂಡಲೇ ವಾಪಸ್ ತರಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರ ಮೌನಕ್ಕೆ ಛೀಮಾರಿ
ದಲಿತರ ಮೇಲೆ ಅನ್ಯಾಯವಾಗುತ್ತಿರುವಾಗ ಕಾಂಗ್ರೆಸ್ ಪಕ್ಷದ ದಲಿತ ಶಾಸಕರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, "ಮೀಸಲಾತಿ ಕಡಿಮೆ ಮಾಡಿದಾಗ ಮತ್ತು ದಲಿತರ ಮೇಲೆ ದೌರ್ಜನ್ಯ ನಡೆದಾಗ ಈ 15 ಜನ ಕಾಂಗ್ರೆಸ್ ಶಾಸಕರು ಏನು ಮಾಡುತ್ತಿದ್ದರು? ಚುರುಮುರಿ ತಿನ್ನುತ್ತಿದ್ದರೇ?" ಎಂದು ವ್ಯಂಗ್ಯವಾಡಿದರು. ದಲಿತರ ಪರವಾಗಿ ಮಾತನಾಡಬೇಕಾದ ನಾಯಕರು ಅಧಿಕಾರದ ಆಸೆಗಾಗಿ ಮೌನವಾಗಿರುವುದು ಖಂಡನೀಯ ಎಂದರು.
ಹಿಂದಿನ ಸರ್ಕಾರದಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, "ನಿಮ್ಮ ಆಡಳಿತದಲ್ಲಿ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಸುಟ್ಟಾಗ ನೀವು ಅವರ ಪರವಾಗಿ ನಿಲ್ಲಲಿಲ್ಲ. ಬದಲಾಗಿ, ಬೆಂಕಿ ಹಾಕಿದ ಕಿಡಿಗೇಡಿಗಳ ಪರವಾಗಿ ನಿಂತಿದ್ದೀರಿ. ಇಷ್ಟೇ ಅಲ್ಲದೆ, ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೂಡ ನೀಡದೆ ಅನ್ಯಾಯ ಮಾಡಿದ್ದೀರಿ. ನೀವು ನಿಜಕ್ಕೂ ದಲಿತ ಪರವಾಗಿದ್ದರೆ ಅಖಂಡ ಅವರ ಮನೆಯನ್ನು ಸುಟ್ಟವರನ್ನು ಏಕೆ ಜೈಲಿಗೆ ಕಳುಹಿಸಲಿಲ್ಲ? ಎಂದು ಕಿಡಿಕಾರಿದರು.
10 ಪ್ರಮುಖ ಬೇಡಿಕೆಗಳ ಹೋರಾಟ
ಬಿಜೆಪಿಯು ಮುಂದಿಟ್ಟಿರುವ 10 ಪ್ರಮುಖ ಬೇಡಿಕೆಗಳ ಪೈಕಿ ಕೇವಲ ಒಂದಕ್ಕೆ ಮಾತ್ರ ಸರ್ಕಾರ ಸಣ್ಣ ಉತ್ತರ ನೀಡಿದೆ. ಉಳಿದ 9 ಪ್ರಮುಖ ಬೇಡಿಕೆಗಳು ಹಾಗೆಯೇ ಇವೆ. ಪರಿಶಿಷ್ಟರ ಆಯೋಗದ ಅಧ್ಯಕ್ಷರು, ಮೀಸಲಾತಿ ಹೆಚ್ಚಳ, ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ಉತ್ತರ ಸಿಗುವವರೆಗೂ ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಅವರು ಘೋಷಿಸಿದರು. ಸೆಪ್ಟೆಂಬರ್ 1ರಿಂದ ರಾಜ್ಯಾದ್ಯಂತ ನಡೆಯಲಿರುವ ಈ ಪಾದಯಾತ್ರೆಯು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡಲಿದೆ. "ದಲಿತರ ಪಾಲಿನ ಹಣವನ್ನು ಲೂಟಿ ಮಾಡುವವರಿಗೆ ಅಧಿಕಾರದಲ್ಲಿರುವ ನೈತಿಕ ಹಕ್ಕಿಲ್ಲ. ಇದು ಕೇವಲ ಬಿಜೆಪಿಯ ಹೋರಾಟವಲ್ಲ, ರಾಜ್ಯದ ಸಮಸ್ತ ದಲಿತ ಬಂಧುಗಳ ಹೋರಾಟ" ಎಂದು ಹೇಳಿದರು.

