
‘ನಮ್ಮ ಮೆಟ್ರೋ’ ಸೇವೆ ವ್ಯತ್ಯಯ; ಸಮಗ್ರ ತನಿಖೆಗೆ ಆದೇಶ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು 2024 ಜನವರಿಯಿಂದ ಸುಮಾರು 20 ತಾಂತ್ರಿಕ ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ನೀಡಿದ್ದ ದೂರಿನ ಹಿನ್ನೆಲೆ ಕೇಂದ್ರ ಸರ್ಕಾರ ಈ ಮಹತ್ವದ ಆದೇಶ ನೀಡಿದೆ.
ಸಿಲಿಕಾನ್ ಸಿಟಿಯ ಜೀವನಾಡಿ ಎಂದೇ ಹೆಸರಾಗಿರುವ ʼನಮ್ಮ ಮೆಟ್ರೋ’ ರೈಲು ಸೇವೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ದೋಷ ಹಾಗೂ ವ್ಯತ್ಯಯಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಕಳೆದ 3 ವರ್ಷಗಳಲ್ಲಿ ಸಂಭವಿಸಿರುವ ಎಲ್ಲಾ ಸರಣಿ ವೈಫಲ್ಯಗಳ ಕುರಿತು ಸಮಗ್ರ ತನಿಖೆ ನಡೆಸಿ, ಕೈಗೊಂಡಿರುವ ಪರಿಹಾರ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಕ್ಷಣವೇ ವರದಿ ಸಲ್ಲಿಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು 2024 ಜನವರಿಯಿಂದ ಸುಮಾರು 20 ತಾಂತ್ರಿಕ ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ನೀಡಿದ್ದ ದೂರಿನ ಹಿನ್ನೆಲೆ ಕೇಂದ್ರ ಸರ್ಕಾರ ಈ ಮಹತ್ವದ ಆದೇಶ ನೀಡಿದೆ.
ಜೂ. 23ರ ನೇರಳೆ ಮಾರ್ಗದ ಸಮಸ್ಯೆ ಉಲ್ಲೇಖ
ಜೂ.23 ರಂದು ʼನಮ್ಮ ಮೆಟ್ರೋʼದ ನೇರಳೆ ಮಾರ್ಗದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಈ ಗಂಭೀರ ಸೇವಾ ವ್ಯತ್ಯಯದ ಕುರಿತು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಜೂ.25 ರಂದು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಅಧಿಕೃತ ಪತ್ರ ಬರೆದು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದರು.
ಸಂಸದರ ದೂರಿಗೆ ಉತ್ತರಿಸಿರುವ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಾದ ಜನಕ್ ಕುಮಾರ್ ಗರ್ಗ್ ಅವರು, ಜೂ.23ರ ಘಟನೆ ಮಾತ್ರವಲ್ಲದೇ ಕಳೆದ ಮೂರು ವರ್ಷಗಳಲ್ಲಿ ʼನಮ್ಮ ಮೆಟ್ರೋʼ ಕಾರ್ಯಾಚರಣೆಯಲ್ಲಿ ಉಂಟಾಗಿರುವ ಎಲ್ಲಾ ಸರಣಿ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಮಗ್ರ ಆಡಿಟಿಂಗ್‌ಗೆ ಆದೇಶ
ಕೇವಲ ತನಿಖೆ ಮಾತ್ರವಲ್ಲದೇ ಬೆಂಗಳೂರು ಮೆಟ್ರೋ ರೈಲು ವ್ಯವಸ್ಥೆಯ ಒಟ್ಟಾರೆ ಕಾರ್ಯಾಚರಣೆ ಮತ್ತು ನಿರ್ವಹಣಾ ದಕ್ಷತೆಯ ಬಗ್ಗೆ ಸಂಪೂರ್ಣ ಆಡಿಟಿಂಗ್ ನಡೆಸಲು ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರು ತಮಗೆ ಬರೆದಿರುವ ಅಧಿಕೃತ ಆದೇಶದ ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಈ ಪತ್ರವನ್ನು ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
"2024ರಿಂದೀಚೆಗೆ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 20 ಬಾರಿ ಸೇವಾ ವ್ಯತ್ಯಯಗಳು ವರದಿಯಾಗಿವೆ. ಇದು ಕೇವಲ ಸಣ್ಣ ತಾಂತ್ರಿಕ ದೋಷವಲ್ಲ, ಬದಲಿಗೆ ವ್ಯವಸ್ಥಿತ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದೆ. ಇಂತಹ ಲೋಪಗಳನ್ನು ತಕ್ಷಣವೇ ಸರಿಪಡಿಸುವ ಕ್ರಮಗಳು ಅಗತ್ಯವಾಗಿವೆ. ವ್ಯವಸ್ಥಿತ ವೈಫಲ್ಯಗಳನ್ನು ಸರಿಪಡಿಸಲು ಮತ್ತು ದಿನನಿತ್ಯ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ವಿಶ್ವಾಸವನ್ನು ಪುನಃಸ್ಥಾಪಿಸಲು ನಾನು ಒತ್ತಾಯಿಸುತ್ತೇನೆ." ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಯೇ ಆದ್ಯತೆಯಾಗಲಿ
ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯು ಬಿಎಂಆರ್‌ಸಿಎಲ್ ನ ಅತ್ಯುನ್ನತ ಆದ್ಯತೆಯಾಗಿರಬೇಕು. ನಮ್ಮ ಮೆಟ್ರೋದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಜವಾಬ್ದಾರರಾಗಿರುವ ಪ್ರಾಧಿಕಾರವಾಗಿ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ತಡೆರಹಿತ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಸಂಪೂರ್ಣ ಜವಾಬ್ದಾರಿ ಹೊಂದಿದೆ. ಹೀಗಾಗಿ ರಾಜ್ಯ ಸರ್ಕಾರವು ಇದನ್ನು ತುರ್ತುಸ್ಥಿತಿಯೊಂದಿಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

