ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ: ದೆಹಲಿಯಲ್ಲಿ ಬೀದಿಗಿಳಿದ ಪ್ರತಿಭಟನಾಕಾರರು
x

ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ: ದೆಹಲಿಯಲ್ಲಿ ಬೀದಿಗಿಳಿದ ಪ್ರತಿಭಟನಾಕಾರರು

ಚುನಾವಣಾ ಪ್ರಕ್ರಿಯೆಯಲ್ಲಿನ ಅವ್ಯವಸ್ಥೆಯ ಆರೋಪ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ತೀವ್ರಗೊಂಡಿವೆ. ದೆಹಲಿ, ಮುಂಬೈನಲ್ಲಿ ಎಫ್‌ಐಆರ್ ದಾಖಲಿಲಾಗಿವೆ.


Click the Play button to hear this message in audio format

ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್‌) ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿನ ಅವ್ಯವಸ್ಥೆಯ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ದೆಹಲಿ ಮತ್ತು ಮುಂಬೈನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆಂದೋಲನವು ದಿನದಿಂದ ದಿನಕ್ಕೆ ರಾಜಕೀಯ ಮತ್ತು ಕಾನೂನು ಸಂಘರ್ಷವಾಗಿ ಬದಲಾಗುತ್ತಿದೆ.

ದೆಹಲಿಯ ಪಟೇಲ್ ಚೌಕ್‌ನಿಂದ ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಸುಮಾರು 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಬಂಧಿತರಲ್ಲಿ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ, ಹಿರಿಯ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದ್ದಾರೆ. ಇವರೊಂದಿಗೆ ಹಿರಿಯ ವಕೀಲರಾದ ಕಪಿಲ್ ಸಿಬಲ್, ನಿತ್ಯ ರಾಮಕೃಷ್ಣನ್ ಮತ್ತು ಪಲ್ಲವ್ ಸಿಸೋಡಿಯಾ ಅವರು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಂತರ್ ಮಂತರ್ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭಾರಿ ಭದ್ರತೆ ಒದಗಿಸಿದ್ದರು. ಎಐಎಸ್ಎ ಕಾರ್ಯಕರ್ತರು ನೇಹಾ ಬೋರಾ ಅವರನ್ನು ಪೊಲೀಸರು ದುರ್ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ, ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

ಮೂರು ಎಫ್‌ಐಆರ್‌ಗಳು

ದೆಹಲಿ ಪೊಲೀಸರು ಶುಕ್ರವಾರ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಂಸತ್ತು ಭವನ ಮತ್ತು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಗಳಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್ 223 ಅಡಿ ಸಾರ್ವಜನಿಕ ಸೇವಕರ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ನಿರ್ದಿಷ್ಟ ವ್ಯಕ್ತಿಗಳ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಹೆಸರಿಸದಿದ್ದರೂ, ಪ್ರತಿಭಟನೆಯ ಆಯೋಜಕರು ಮತ್ತು ಭಾಗವಹಿಸಿದ್ದ ಸಂಘಟನೆಗಳ ವಿವರಗಳನ್ನು ದಾಖಲಿಸಲಾಗಿದೆ. ಹೊಸ ದೆಹಲಿ ಜಿಲ್ಲೆಯಾದ್ಯಂತ ಜಾರಿಯಲ್ಲಿದ್ದ ಸೆಕ್ಷನ್ 163 ಅನ್ವಯ ಐದಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಿದ್ದರೂ, ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂಬುದು ಪೊಲೀಸರ ವಾದವಾಗಿದೆ.

ಶನಿವಾರ ಇಂಡಿಯಾ ಗೇಟ್ ಬಳಿ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಿತು. ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. "ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸುವುದು ಅದರ ಜವಾಬ್ದಾರಿ. ಆದರೆ, ಮತದಾರರ ಪಟ್ಟಿಯ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳು ಏಳುತ್ತಿವೆ" ಎಂದು ಎನ್‌ಎಸ್‌ಯುಐನ ರವಿ ಹನುಮಾನ್ ಪಾಂಡೆ ತಿಳಿಸಿದರು. ಆಯೋಗವು ತಕ್ಷಣವೇ ಸ್ಪಷ್ಟೀಕರಣ ನೀಡಬೇಕು ಮತ್ತು ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಮುಂಬೈನಲ್ಲೂ ಎಫ್‌ಐಆರ್ ದಾಖಲು

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶುಕ್ರವಾರ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಕ್ರಮ ಸಭೆ ಮತ್ತು ಸಾರ್ವಜನಿಕ ಆದೇಶ ಉಲ್ಲಂಘನೆಯ ಆರೋಪದ ಮೇಲೆ 400-500 ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರತಿಭಟನೆಯು ದೇಶಾದ್ಯಂತ ಸಂಚಲನ ಮೂಡಿಸಿದ್ದು, ಸಿಜೆಪಿ ಮುಖ್ಯಸ್ಥರು ರಾಷ್ಟ್ರವ್ಯಾಪಿ ಆಂದೋಲನದ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲ ಗೊಂದಲಗಳಿಗೆ ಕಾರಣವೇನೆಂದರೆ, ಕಳೆದ 10 ತಿಂಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರಗಳ ಬಗ್ಗೆ ಇತರ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಗಳು ಬಂದಿವೆ. ತಮ್ಮ ತಿಳುವಳಿಕೆ ಅಥವಾ ಶಿಫಾರಸು ಇಲ್ಲದೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದು ಅವರ ಮುಖ್ಯ ಆರೋಪವಾಗಿತ್ತು. ಈ ವರದಿಗಳ ಬೆನ್ನಲ್ಲೇ, ವಿರೋಧ ಪಕ್ಷಗಳು ಚುನಾವಣಾ ಆಯೋಗದ ಸ್ವಾಯತ್ತತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಮತ್ತು ಆಯುಕ್ತರ ಪದಚ್ಯುತಿಗೆ ಬೆಂಬಲ ನೀಡುವುದಾಗಿ ಘೋಷಿಸಿವೆ.

ಚುನಾವಣಾ ಆಯೋಗದ ಪ್ರತಿಕ್ರಿಯೆ

ತೀವ್ರ ಟೀಕೆಗಳ ನಡುವೆ, ಚುನಾವಣಾ ಆಯೋಗವು ಸ್ಪಷ್ಟನೆಯನ್ನು ನೀಡಿದೆ. ಯಾವುದೇ ಸಂಸ್ಥೆಯಲ್ಲಿ ಅಭಿಪ್ರಾಯ ಭೇದಗಳು ಸಾಮಾನ್ಯ. ನಮ್ಮ ಎಲ್ಲ ಆದೇಶಗಳು ಸಂಪೂರ್ಣ ಕಾನೂನು ಬದ್ಧವಾಗಿವೆ ಮತ್ತು ನಿಗದಿತ ಸಾಂವಿಧಾನಿಕ ಕಾರ್ಯವಿಧಾನಗಳನ್ನು ಪಾಲಿಸಿಯೇ ಹೊರಡಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಚುನಾವಣಾ ಆಯೋಗದ ಮೇಲಿನ ಈ ಪ್ರತಿಭಟನೆಗಳು ಕೇವಲ ಬೀದಿ ಹೋರಾಟಗಳಿಗೆ ಸೀಮಿತವಾಗದೆ, ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಚುನಾವಣಾ ಪ್ರಕ್ರಿಯೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವ ಕುರಿತಾದ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ರಸ್ತೆಗಿಳಿದಿರುವುದು, ಸಂಸ್ಥೆಯ ಪಾರದರ್ಶಕತೆಯ ಬಗ್ಗೆ ಸಾರ್ವಜನಿಕರಿಗೆ ಇರುವ ಆತಂಕವನ್ನು ಎತ್ತಿ ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಈ ವಿಷಯವು ದೊಡ್ಡ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.

Read More
Next Story