
ವಾಲ್ಮೀಕಿ ನಿಗಮದ ಹಗರಣ| ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ; ಅಕ್ರಮದ ಕಿಂಗ್‌ಪಿನ್ ಬಿ.ನಾಗೇಂದ್ರ
ಮಾಜಿ ಸಚಿವ ಬಿ. ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಜಂಟಿಯಾಗಿ ಈ ವ್ಯವಸ್ಥಿತ ಸಂಚು ರೂಪಿಸಿದ್ದರು ಎಂದು ಸಿಬಿಐ ಹೇಳಿದೆ.
ಕರ್ನಾಟಕ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಸೇರಿ 30 ಮಂದಿ ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆ ಸಿಬಿಐ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಿಗಮದ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವರ ಕುಟುಂಬಸ್ಥರು ಹಾಗೂ ಅವರ ಆಪ್ತರು ನೇರವಾಗಿ ಶಾಮೀಲಾಗಿರುವುದನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
3 ಪ್ರತ್ಯೇಕ ಚಾರ್ಜ್‌ಶೀಟ್; ಮಾಜಿ ಸಚಿವರೇ ಕಿಂಗ್‌ಪಿನ್
ವಾಲ್ಮೀಕಿ ಹಗರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿರುವ ಸಿಬಿಐ, ಒಟ್ಟು ಮೂರು ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ನಿಗಮದ ಹಣ ಲೂಟಿ ಮಾಡಲು ನಕಲಿ ದಾಖಲೆ ಸೃಷ್ಟಿಸಿ ಒಟ್ಟು 89.63 ಕೋಟಿ ರೂ. ಹಣ ದುರುಪಯೋಗವಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.
ಕೇವಲ ವಾಲ್ಮೀಕಿ ನಿಗಮ ಮಾತ್ರವಲ್ಲದೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲೂ ನಡೆದಿರುವ ಆರ್ಥಿಕ ದುರುಪಯೋಗದ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದ್ದು, ಮೂರರಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನೇ ಪ್ರಮುಖ ಸೂತ್ರಧಾರ ಎಂದು ಹೆಸರಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ. ರೋಡ್ ಶಾಖೆಯ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಹೈಕೋರ್ಟ್ ಉಸ್ತುವಾರಿಯಲ್ಲಿ ಈ ತನಿಖೆ ಆರಂಭವಾಗಿತ್ತು. ನಂತರ ಹೈಕೋರ್ಟ್ ಆದೇಶದ ಮೇರೆಗೆ ತನಿಖೆಯನ್ನು ಇಲಾಖೆಯ ಇತರೆ ಎರಡು ಘಟಕಗಳಿಗೂ ವಿಸ್ತರಿಸಲಾಗಿತ್ತು.
ಕೋಟ್ಯಂತರ ರೂಪಾಯಿ ಲೂಟಿ ನಡೆದಿದ್ದು ಹೇಗೆ?
ಮಾಜಿ ಸಚಿವ ಬಿ. ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಜಂಟಿಯಾಗಿ ಈ ವ್ಯವಸ್ಥಿತ ಸಂಚು ರೂಪಿಸಿದ್ದರು ಎಂದು ಸಿಬಿಐ ಹೇಳಿದೆ.
ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಎಂಬಾತ ಈ ಹಿಂದೆ ಛತ್ತೀಸಘಟದಲ್ಲಿ ಮಾಡಿದ ಹಗರಣದ ಮಾದರಿಯಲ್ಲೇ ಇಲ್ಲೂ ನಕಲಿ ದಾಖಲೆಗಳನ್ನು ಬಳಸಿ 18 ಬೋಗಸ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ನಿಗಮದ ಎಂಡಿ ಮತ್ತು ಅಕೌಂಟ್ಸ್ ಆಫೀಸರ್ ಅವರ ನಕಲಿ ರಬ್ಬರ್ ಸ್ಟಾಂಪ್ ಹಾಗೂ ಸಹಿಗಳನ್ನು ಸೃಷ್ಟಿಸಲಾಗಿತ್ತು.
ನಿಗಮದ ಖಾತೆಯಲ್ಲಿದ್ದ 187 ಕೋಟಿ ರೂ. ಪೈಕಿ 89.63 ಕೋಟಿ ರೂ. ಹಣವನ್ನು ಅಕ್ರಮವಾಗಿ ಈ ಬೋಗಸ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಕದ್ದ ಹಣವನ್ನು ಪತ್ತೆಹಚ್ಚದಂತೆ ಮಾಡಲು ಸುಮಾರು 600 ಬ್ಯಾಂಕ್ ಖಾತೆಗಳ ಮೂಲಕ ರವಾನಿಸಿ, ಕೊನೆಗೆ ನಗದು, ಚಿನ್ನ ಮತ್ತು ಐಷಾರಾಮಿ ಬೆನಾಮಿ ವಾಹನಗಳಾಗಿ ಪರಿವರ್ತಿಸಿಕೊಳ್ಳಲಾಗಿತ್ತು. ಇದಕ್ಕೆ ಬ್ಯಾಂಕ್ ಅಧಿಕಾರಿಗಳೂ ಸಾಥ್ ನೀಡಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಕುಟುಂಬಸ್ಥರ ಖಾತೆಗಳಿಗೂ ಕಮಿಷನ್ ಹಣ
ಮಾಜಿ ಸಚಿವ ನಾಗೇಂದ್ರ ಮತ್ತು ಅವರ ಆಪ್ತರು ವಿವಿಧ ಕಾಮಗಾರಿಗಳ ಟೆಂಡರ್ನಲ್ಲೂ ಭಾರಿ ಲಂಚ ಪಡೆದಿರುವುದು ಸಿಬಿಐ ತನಿಖೆಯಿಂದ ಬಯಲಾಗಿದೆ.
ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಹಾಗೂ ರೊಟ್ಟಿ ಮಾಡುವ ಯಂತ್ರಗಳ ಟೆಂಡರ್ ಪ್ರಕ್ರಿಯೆಯಲ್ಲಿ ನೆಕ್ಕಂಟಿ ನಾಗರಾಜ್ ಅವರ ಆಪ್ತನಿಗೆ ಸೇರಿದ ಸಂಸ್ಥೆಗೆ 13.95 ಕೋಟಿ ರೂ. ಟೆಂಡರ್ ನೀಡಲಾಗಿತ್ತು. ಇದರ ಪ್ರತಿಯಾಗಿ ಸಚಿವ ನಾಗೇಂದ್ರ ಅವರಿಗೆ 1.20 ಕೋಟಿ ರೂ. ಅಕ್ರಮ ಲಂಚದ ಹಣ ಸಂದಾಯವಾಗಿತ್ತು. ಈ ಹಣವನ್ನು ಸಚಿವರು ತಮ್ಮ ಸಹೋದರಿ, ಭಾವ, ಪಿಎ ಹಾಗೂ ಬಳ್ಳಾರಿಯ ಫಾರ್ಮ್‌ಹೌಸ್ ಮಾಲೀಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದು ಸಾಕ್ಷಿ ಸಮೇತ ಸಾಬೀತಾಗಿದೆ.
ಇದಲ್ಲದೆ, ಕೌಶಲಾಭಿವೃದ್ಧಿ ತರಬೇತಿಯ 4.90 ಕೋಟಿ ರೂ. ಕಾಮಗಾರಿಯಲ್ಲೂ ಯಾವುದೇ ಟೆಂಡರ್ ಇಲ್ಲದೆ ಉಪ ಗುತ್ತಿಗೆ ನೀಡಲಾಗಿತ್ತು. ಇದಕ್ಕಾಗಿ ನೆಕ್ಕಂಟಿ ನಾಗರಾಜ್ ಕುಟುಂಬಕ್ಕೆ 64 ಲಕ್ಷ ರೂ. ಹಾಗೂ ಇಲಾಖೆಯ ಸೆಕ್ಷನ್ ಆಫೀಸರ್ ಪ್ರಕಾಶ್ ಅವರಿಗೆ 15.50 ಲಕ್ಷ ಲಂಚ ನೀಡಿರುವುದನ್ನು ಡಿಜಿಟಲ್ ಹಾಗೂ ಬ್ಯಾಂಕ್ ದಾಖಲೆಗಳ ಸಮೇತ ಸಿಬಿಐ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಸದ್ಯ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆಯಿಂದ ಬಿ.ನಾಗೇಂದ್ರ ವಿರುದ್ಧದ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗಿದೆ.

