x

ಕಾವೇರಿ ನೀರು ಬಿಡಬಾರದು; ಸರ್ಕಾರ ಹೋದರೂ ಪರವಾಗಿಲ್ಲ: ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ

ಒಂದು ವೇಳೆ ಸರ್ಕಾರ ನೀರು ಹರಿಸಲು ಮುಂದಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಮಂಡ್ಯ ಜಿಲ್ಲೆಯ ಶಾಸಕರು ರಾಜೀನಾಮೆ ನೀಡಿ ರೈತರ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ರೈತರು ಆಗ್ರಹಿಸಿದರು.


Click the Play button to hear this message in audio format

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರ ಆಕ್ರೋಶ ತೀವ್ರಗೊಂಡಿದೆ. ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದ್ದಾರೆ.

'ದಿ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ಮಂಡ್ಯ ಜಿಲ್ಲಾ ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ, ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

'ವಾಸ್ತವ ಸ್ಥಿತಿಯನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿಲ್ಲ'

ಕಾವೇರಿ ನೀರು ನಿಯಂತ್ರಣ ಸಮಿತಿಗೆ ರಾಜ್ಯದ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಅಧಿಕಾರಿಗಳು ಸಮರ್ಪಕವಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ನಂಜುಂಡೇಗೌಡ ಆರೋಪಿಸಿದರು. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿರುವಾಗ ಪ್ರತಿದಿನ 3,500 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸಿರುವುದು ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದರು.

ರಾಜ್ಯದ ಜಲಾಶಯಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಕೊರತೆಯಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನೀರನ್ನು ಹೊರ ರಾಜ್ಯಕ್ಕೆ ಹರಿಸುವುದು ಸಮಂಜಸವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

'ಸರ್ಕಾರ ಹೋದರೂ ನೀರು ಬಿಡಬಾರದು'

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ದೃಢ ನಿಲುವು ತಾಳಬೇಕು ಎಂದರು.

"ಸರ್ಕಾರ ಹೋದರೂ ಪರವಾಗಿಲ್ಲ. ಆದರೆ ತಮಿಳುನಾಡಿಗೆ ನೀರು ಬಿಡಬಾರದು. ಈಗಾಗಲೇ ರೈತರ ಪ್ರತಿಭಟನೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ" ಎಂದು ಎಚ್ಚರಿಸಿದರು.

'ಬೆಂಗಳೂರು ಜನರೂ ಧ್ವನಿ ಎತ್ತಬೇಕು'

ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯಕ್ಕೂ ಕೆಆರ್‌ಎಸ್ ಜಲಾಶಯವೇ ಪ್ರಮುಖ ಮೂಲವಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಬೆಂಗಳೂರು ನಿವಾಸಿಗಳೂ ಧ್ವನಿ ಎತ್ತಬೇಕಿದೆ ಎಂದು ನಂಜುಂಡೇಗೌಡ ಹೇಳಿದರು.

ಒಂದು ವೇಳೆ ಸರ್ಕಾರ ನೀರು ಹರಿಸಲು ಮುಂದಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಮಂಡ್ಯ ಜಿಲ್ಲೆಯ ಶಾಸಕರು ರಾಜೀನಾಮೆ ನೀಡಿ ರೈತರ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಆಗ್ರಹಿಸಿದರು.

'ಮೇಲ್ಮನವಿ ಸಲ್ಲಿಸಬೇಕು' : ನಿವೃತ್ತ ಐಎಎಸ್ ಅಧಿಕಾರಿ

ಈ ಕುರಿತು ಪ್ರತಿಕ್ರಿಯಿಸಿದ ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ, ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವು ರಾಜ್ಯಕ್ಕೆ ಆಘಾತ ಉಂಟುಮಾಡಿದೆ ಎಂದು ಹೇಳಿದರು.

ಆದಾಗ್ಯೂ, ಸರ್ಕಾರದ ಮೇಲೆ ನ್ಯಾಯಾಂಗ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಗಳಿರುವುದರಿಂದ ಆದೇಶವನ್ನು ನಿರ್ಲಕ್ಷಿಸುವುದು ಸುಲಭವಲ್ಲ ಎಂದ ಅವರು, ರಾಜ್ಯದ ಜಲಾಶಯಗಳಲ್ಲಿನ ನೀರಿನ ವಾಸ್ತವ ಸ್ಥಿತಿಯನ್ನು ವಿವರಿಸುವ ಸಮಗ್ರ ವರದಿಯೊಂದಿಗೆ ಮೇಲ್ಮನವಿ ಸಲ್ಲಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಧಿಕಾರಿಗಳು ಲಭ್ಯವಿರುವ ನೀರಿನ ಪ್ರಮಾಣ, ಕುಡಿಯುವ ನೀರಿನ ಅಗತ್ಯ ಹಾಗೂ ಕೃಷಿ ಪರಿಸ್ಥಿತಿಯನ್ನು ಆಧರಿಸಿ ಮೇಲ್ಮಟ್ಟದಲ್ಲಿ ಸಮರ್ಥವಾಗಿ ರಾಜ್ಯದ ವಾದ ಮಂಡಿಸಿದರೆ ಮಾತ್ರ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯ ಎಂದು ಅವರು ಹೇಳಿದರು.

Read More
Next Story