ಕಾವೇರಿ ವಿವಾದ; ಮಂಡ್ಯದಲ್ಲಿ ಜನನಾಯಗನ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ, ಮೈಸೂರಲ್ಲೂ ಭುಗಿಲೆದ್ದ ಆಕ್ರೋಶ
x

ಕಾವೇರಿ ವಿವಾದ; ಮಂಡ್ಯದಲ್ಲಿ ಜನನಾಯಗನ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ, ಮೈಸೂರಲ್ಲೂ ಭುಗಿಲೆದ್ದ ಆಕ್ರೋಶ

ಮಂಡ್ಯದಲ್ಲಿ ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಅಭಿನಯದ ಜನನಾಯಗನ್ ಸಿನಿಮಾ ಪ್ರದರ್ಶನ ವಿರೋಧಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರುಶ್ರೀ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಶಿಫಾರಸಿನ ಬೆನ್ನಲ್ಲೇ ಸಕ್ಕರೆ ನಾಡು ಮಂಡ್ಯ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾವೇರಿ ವಿವಾದದ ಕಿಚ್ಚು ತೀವ್ರಗೊಂಡಿದೆ. ಮಂಡ್ಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅಭಿನಯದ ಜನನಾಯಗನ್ ಸಿನಿಮಾ ಪ್ರದರ್ಶನ ವಿರೋಧಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತು ನಾಯಕರು ನಿರಂತರವಾಗಿ ಕರ್ನಾಟಕದ ರೈತರನ್ನು ವಂಚಿಸುತ್ತಿದ್ದಾರೆ. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದ್ದರೂ ತಮಿಳುನಾಡು ಮೂಲದ ನಟನ ಸಿನಿಮಾ ಪ್ರದರ್ಶಿಸುವುದು ಕನ್ನಡಿಗರಿಗೆ ಮಾಡುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಸಂಘಟನೆಗಳ ಮುಖಂಡರು ಜನನಾಯಗನ್‌ ಚಿತ್ರದ ಪೋಸ್ಟರ್ ಹರಿದುಹಾಕಿದರು. ಚಿತ್ರಮಂದಿರದ ಎದುರು ಜಮಾಯಿಸಿ ತಮಿಳುನಾಡು ಸರ್ಕಾರ ಹಾಗೂ ನಟ ವಿಜಯ್ ವಿರುದ್ಧ ತೀವ್ರ ಘೋಷಣೆ ಕೂಗಿದ್ದಾರೆ.

ಕೂಡಲೇ ಜನನಾಯಗನ್ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಚಿತ್ರಮಂದಿರದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮತ್ತು ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಚಿತ್ರಮಂದಿರದ ಆಡಳಿತ ಮಂಡಳಿಯು ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿತು. ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು, ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸುವುದಾಗಿ ಆಡಳಿತ ಮಂಡಳಿಯು ಭರವಸೆ ನೀಡಿತು.

ಈ ಮಧ್ಯೆ, ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿನಿತ್ಯ 3500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶ ಖಂಡಿಸಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಅಗ್ರಹಾರದ ವೃತ್ತದಲ್ಲಿ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ವತಿಯಿಂದ ಕಾರ್ಯಕರ್ತರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿದ್ದಾರೆ.

Read More
Next Story