ಕಾವೇರಿ ಕಿಚ್ಚು: ಸಂಕಷ್ಟದಲ್ಲಿ ನೀರು ಬಳಕೆಗೆ ಬೇಕಿದೆ ವೈಜ್ಞಾನಿಕ ಸೂತ್ರ
ಕರ್ನಾಟಕಕ್ಕೆ ಕೇವಲ 'ನೈರುತ್ಯ ಮುಂಗಾರು' ಮಳೆಯಷ್ಟೇ ಆಧಾರ. ಆದರೆ ತಮಿಳುನಾಡಿಗೆ ಅಕ್ಟೋಬರ್ ನಂತರ 'ಈಶಾನ್ಯ ಮುಂಗಾರು' ಮಳೆಯಿಂದ ಭಾರೀ ಪ್ರಮಾಣದ ನೀರು ಸಿಗಲಿದೆ. ಆದ್ದರಿಂದ ಅವರು ಅಲ್ಲಿಯವರೆಗೆ ಕಾಯಬೇಕು ಎಂಬುದು ಕರ್ನಾಟಕದ ವಾದವಾಗಿದೆ.
ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನೀರು ಬಿಡುಗಡೆ ವಿವಾದ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ಕಾವೇರಿ ವಿಚಾರದಲ್ಲಿ ಕರ್ನಾಟಕವು ಮತ್ತೆ ದೊಡ್ಡ ಹಿನ್ನಡೆ ಹಾಗೂ ಅನ್ಯಾಯ ಎದುರಿಸುತ್ತಿದೆ. ನಿನ್ನೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿಯುವ ಮೂಲಕ ಕರ್ನಾಟಕದ ವಾದ ತಿರಸ್ಕರಿಸಿದೆ. ಆ ಮೂಲಕ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್‌ನಂತೆ ಒಟ್ಟು 16 ಟಿಎಂಸಿ ನೀರು ಹರಿಸಲು ಆದೇಶಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಾಸ್ತವಾಂಶ ಮರೆತು ಆದೇಶ ನೀಡಿತೇ ಅಥವಾ ಸುಪ್ರೀಂಕೋರ್ಟ್ನ 2018 ರ ತೀರ್ಪಿನ ಅನ್ವಯ ನೀಡಿತೇ ಎಂಬ ಚರ್ಚೆಗಳು ಆರಂಭವಾಗಿವೆ. ಹಾಗಾದರೆ, ಕಾವೇರಿ ಕೊಳ್ಳದ ಜಲಾಶಯಗಳ ವಾಸ್ತವಾಂಶ ಅಪಥ್ಯೆಯಾಯಿತೇ ಎಂಬ ಅನುಮಾನ ಮೂಡುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿಯಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರಾಜ್ಯದ ರೈತರ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಹೀಗಿರುವಾಗ ಪ್ರಾಧಿಕಾರದ ಈ ಆದೇಶ ರಾಜ್ಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಆ.13 ರಂದು ಕಾವೇರಿ ನೀರು ಬಿಡುಗಡೆ ಹಾಗೂ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ನೆಲ ಜಲ ವಿಚಾರದಲ್ಲಿ ಜನರ ಆಕ್ರೋಶವೂ ಜೋರಾಗುತ್ತಿದೆ. ಬದಲಾಗುತ್ತಿರುವ ಮಳೆ ಚಕ್ರ ಮತ್ತು ಹವಾಮಾನ ವೈಪರೀತ್ಯ, ಕಾವೇರಿ ಕಾನೂನು ಸಮರದಲ್ಲಿ ಕರ್ನಾಟಕಕ್ಕಿರುವ ದಾರಿಗಳು, ಸಂಕಷ್ಟದ ಸಮಯದಲ್ಲಿ ಕರ್ನಾಟಕ ಮಾಡಬೇಕಾದ ಜಲ ನಿರ್ವಹಣೆ ಹಾಗೂ ನೀರಾವರಿ ಬದಲಾವಣೆಗಳು ಈಗ ಚರ್ಚೆಯ ವಿಷಯಗಳಾಗಿವೆ.
ಮೊದಲಿಗೆ ನಾವು ಮಳೆಯ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕು. ಜಾಗತಿಕ ತಾಪಮಾನ ಏರಿಕೆ ಮತ್ತು ಎಲ್ ನಿನೋ ಪ್ರಭಾವದಿಂದಾಗಿ ದಕ್ಷಿಣ ಭಾರತದಲ್ಲಿ ಮುಂಗಾರು ಮಳೆಯ ಮಾದರಿಯೇ ಬದಲಾಗಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಈ ಬಾರಿ ವಾಡಿಕೆಗಿಂತ ಶೇ. 30 ರಿಂದ 40 ಪ್ರತಿಶತ ಕಡಿಮೆ ಮಳೆಯಾಗಿದೆ. ಈ ಹಿಂದೆ ಜೂನ್- ಜುಲೈ ತಿಂಗಳಿನಲ್ಲಿ ಸತತವಾಗಿ ಬೀಳುತ್ತಿದ್ದ ಮಳೆ, ಈಗ ಕೇವಲ ಕೆಲವೇ ದಿನಗಳಲ್ಲಿ ಅತಿಯಾಗಿ ಬಿದ್ದು, ಉಳಿದ ದಿನಗಳಲ್ಲಿ ಸಂಪೂರ್ಣ ಒಣ ಹವೆ ಮೂಡುತ್ತಿದೆ.
ರಾಜ್ಯದಲ್ಲಿ ವಾಡಿಕೆ ಮಳೆ ಪ್ರಮಾಣ ಲೆಕ್ಕಾಚಾರದ ಸೂತ್ರಗಳು ಹಳೆಯದಾಗಿವೆ. ಹವಾಮಾನ ವೈಪರೀತ್ಯದಿಂದಾಗಿ ವಾರ್ಷಿಕ ಆವರ್ತನ ಬದಲಾಗಿದ್ದು, ರಾಜ್ಯವು ಬರದ ಕಡೆಗೆ ಜಾರುತ್ತಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ದುರಂತವೆಂದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವಾಗಲಿ ಅಥವಾ ಸಮಿತಿಯಾಗಲಿ ಈ ಜಾಗತಿಕ ಮತ್ತು ಸ್ಥಳೀಯ ಹವಾಮಾನ ಬದಲಾವಣೆಯ ವಾಸ್ತವಿಕ ಚಿತ್ರಣವನ್ನು ಗಣನೆಗೆ ತೆಗೆದುಕೊಂಡಿಲ್ಲ. ಬದಲಿಗೆ, ಹಳೆಯ ಅಂಕಿ-ಅಂಶಗಳ ಆಧಾರದ ಮೇಲೆಯೇ ಆದೇಶಗಳನ್ನು ಹೊರಡಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾದರೆ, ಕಾವೇರಿ ನೀರು ಪ್ರಾಧಿಕಾರ, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡುವ ಆದೇಶಗಳನ್ನು ಪಾಲಿಸದೇ ಬೇರೆ ದಾರಿಯಿಲ್ಲವೇ, ಪ್ರಸ್ತುತ ಕರ್ನಾಟಕ ಸರ್ಕಾರದ ಮುಂದಿರುವ ಕಾನೂನು ಹೋರಾಟದ ದಾರಿಗಳೇನು ಎಂಬ ಪ್ರಶ್ನೆ ಮೂಡಲಿದೆ.
ಸಾಮಾನ್ಯ ವರ್ಷಗಳಲ್ಲಿ ನೀರು ಹಂಚಿಕೆ ಸುಲಭ. ಆದರೆ ಬರಗಾಲದ ವರ್ಷಗಳಲ್ಲಿ ಎದುರಾಗುವ ಸಂಕಷ್ಟವನ್ನು ಇರುವುದರಲ್ಲಿಯೇ ಸಮನಾಗಿ ಹಂಚಿಕೊಳ್ಳುವ ವೈಜ್ಞಾನಿಕ ಸೂತ್ರವನ್ನು ಇದುವರೆಗೂ ಸ್ಪಷ್ಟವಾಗಿ ನಿರೂಪಿಸಿಲ್ಲ. ಆದರೂ ತಮಿಳುನಾಡು ಸಂಕಷ್ಟ ಸೂತ್ರವನ್ನು ಪ್ರತಿ ಬಾರಿ ಮುನ್ನೆಲೆಗೆ ತಂದು ನೀರು ಪಡೆಯುತ್ತಿದೆ. ಇದೇ ವಿಚಾರ ಕರ್ನಾಟಕದ ಹಿನ್ನಡೆಗೆ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಂಕಷ್ಟ ಸೂತ್ರವನ್ನು ಸುಪ್ರೀಂಕೋರ್ಟ್ನಲ್ಲಿ ಬಲವಾಗಿ ಪ್ರಶ್ನಿಸಬೇಕಿದೆ.
ಈ ಹಿಂದೆ ತಮಿಳುನಾಡು- ಕರ್ನಾಟಕ ಮಧ್ಯೆ ಕಾವೇರಿ ನೀರು ಬಿಡುಗಡೆ ವಿಚಾರ ತೀವ್ರ ವಿವಾದ ಪಡೆದುಕೊಂಡಾಗ ಸುಪ್ರೀಂಕೋರ್ಟ್ ತಜ್ಞರ ತಂಡವನ್ನು ಕಳುಹಿಸಿ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿತ್ತು. ಈಗಲೂ ಸಹ ಪ್ರಾಧಿಕಾರದ ಏಕಪಕ್ಷೀಯ ಆದೇಶಕ್ಕೆ ತಡೆ ನೀಡಿ, ತಜ್ಞರ ತಂಡವೊಂದನ್ನು ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಹಾಗೂ ಕೃಷಿ ಭೂಮಿಗೆ ಕಳುಹಿಸಿ ನೀರು ಸಂಗ್ರಹಣೆಯ ನಿಜವಾದ ಪರಿಸ್ಥಿತಿಯನ್ನು ವರದಿ ಪಡೆಯುವಂತೆ ಕೋರಬೇಕಾಗಿದೆ.
ರಾಷ್ಟ್ರೀಯ ಜಲ ನೀತಿಯ ಪ್ರಕಾರ ಕುಡಿಯುವ ನೀರಿಗೆ ಪ್ರಥಮ ಆದ್ಯತೆ. ಬೆಂಗಳೂರು, ಮೈಸೂರು, ರಾಮನಗರ ಮತ್ತು ಮಂಡ್ಯ ನಗರಗಳ ಕುಡಿಯುವ ನೀರಿನ ಅಗತ್ಯವನ್ನು ಮುಂಚೂಣಿಯಲ್ಲಿಟ್ಟು ವಾದ ಮಂಡಿಸುವುದು ಕರ್ನಾಟಕಕ್ಕಿರುವ ಪ್ರಬಲ ಕಾನೂನು ಅಸ್ತ್ರವಾಗಿದೆ. ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಸೂಕ್ಷ್ಮ ಸಂಗತಿಗಳನ್ನು ಇಲ್ಲಿ ಗಮನಿಸಬಹುದು.
2018 ಫೆ.16 ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ನೀಡಿದ ಚಾರಿತ್ರಿಕ ತೀರ್ಪಿನ ಅನ್ವಯವೇ ಇಂದು ತಮಿಳುನಾಡು ಹಾಗೂ ಕರ್ನಾಟಕ ನಡುವೆ ನೀರು ಹಂಚಿಕೆಯಾಗಿದೆ. ಅಂತರರಾಷ್ಟ್ರೀಯ ಅಥವಾ ಅಂತರರಾಜ್ಯ ನದಿಗಳು ರಾಷ್ಟ್ರೀಯ ಸ್ವತ್ತು. ಅದರ ಮೇಲೆ ಯಾವುದೇ ಒಂದು ರಾಜ್ಯಕ್ಕೆ ಸಂಪೂರ್ಣ ಹಕ್ಕಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ಕಾವೇರಿ ನ್ಯಾಯಾಧಿಕರಣವು ತಮಿಳುನಾಡಿಗೆ 192 ಟಿಎಂಸಿ ನೀರು ಬಿಡುವಂತೆ ಹೇಳಿತ್ತು. ಸುಪ್ರೀಂ ಕೋರ್ಟ್ ಇದನ್ನು 177.25 ಟಿಎಂಸಿಗಳಷ್ಟು ಕಡಿಮೆ ಮಾಡಿತ್ತು.
ಈ ತೀರ್ಪು ನೀಡಲು ಹಲವು ಅಂಶಗಳನ್ನು ಕೋರ್ಟ್ ಪರಿಗಣಿಸಿತ್ತು. ಅವುಗಳೆಂದರೆ, ಬೆಂಗಳೂರು ಜಾಗತಿಕ ನಗರವಾಗಿ ಬೆಳೆದಿದ್ದು, ಅದರ ಕುಡಿಯುವ ನೀರಿನ ಅಗತ್ಯಕ್ಕಾಗಿ 4.75 ಟಿಎಂಸಿ ನೀರನ್ನು ಕಾಯ್ದಿರಿಸಬೇಕು. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹೇಳಿ ತಮಿಳುನಾಡಿನ ಮೂಲ ಪಾಲನ್ನು ಕಡಿತ ಮಾಡಿತ್ತು.
ತಮಿಳುನಾಡಿನಲ್ಲಿ ಸುಮಾರು 20 ಟಿಎಂಸಿಯಷ್ಟು ಅಂತರ್ಜಲ ಲಭ್ಯತೆ ಇರುವುದನ್ನು ಪರಿಗಣಿಸಿದ ಕೋರ್ಟ್, ಅದರಲ್ಲಿ 10 ಟಿಎಂಸಿ ಅಂತರ್ಜಲವನ್ನು ತಮಿಳುನಾಡು ಬಳಸಿಕೊಳ್ಳಬಹುದು ಎಂದು ಲೆಕ್ಕಕ್ಕೆ ತೆಗೆದುಕೊಂಡಿತ್ತು. ನೀರು ಹಂಚಿಕೆ ಪ್ರಕ್ರಿಯೆಯು ಮುಂದಿನ 15 ವರ್ಷಗಳ ಕಾಲ ಅಂದರೆ 2033ರವರೆಗೆ ಯಾವುದೇ ಮಾರ್ಪಾಡು ಇಲ್ಲದೆ ಜಾರಿಯಲ್ಲಿರಬೇಕು ಎಂದು ಉಲ್ಲೇಖಿಸಿತ್ತು.
2018ರ ಸುಪ್ರೀಂಕೋರ್ಟ್ ತೀರ್ಪು ಜಾರಿಗೊಳಿಸಲು ಹಾಗೂ ನೀರು ಹಂಚಿಕೆಯನ್ನು ಮೇಲ್ವಿಚಾರಣೆ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಮತ್ತೊಂದು ಮಹತ್ವದ ಅಂಶವನ್ನು ದಾಖಲಿಸಿತ್ತು. ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ 177.25 TMC ನೀರನ್ನು ಹಂತ ಹಂತವಾಗಿ ಹರಿಸುವುದು ಕಡ್ಡಾಯ. ಆದರೆ, ಮಳೆ ಅಭಾವ ರದುರಾದಾಗ ಅಥವಾ ಬರಗಾಲದ ವರ್ಷಗಳಲ್ಲಿ ಕಾವೇರಿ ಜಲಾನಯನ ಪ್ರದೇಶಕ್ಕೆ ಹರಿದುಬಂದ ಒಟ್ಟು ನೀರಿನ ಆಧಾರದ ಮೇಲೆ ಎರಡೂ ರಾಜ್ಯಗಳು ಸಮನಾಗಿ ಸಂಕಷ್ಟ ಹಂಚಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಆದರೆ, ಈ ಸಂಕಷ್ಟ ಸೂತ್ರಕ್ಕೆ ಯಾವುದೇ ವೈಜ್ಞಾನಿಕ ಆಧಾರ, ಆದೇಶ ನೀಡಿರಲಿಲ್ಲ. ಇದನ್ನೇ ಈಗ ಕರ್ನಾಟಕ ಪ್ರತಿಪಾದಿಸಬೇಕಾಗಿದೆ.
ಮಳೆ ಅಭಾವದ ವರ್ಷಗಳಲ್ಲಿ ತಮಿಳುನಾಡು ನೀರು ಬಿಡುವಂತೆ ಸುಪ್ರೀಂಕೋರ್ಟ್‌ಗೆ ಪ್ರತಿ ಬಾರಿ ಅರ್ಜಿ ಸಲ್ಲಿಸಿದಾಗಲೂ "ನಾವು ತಜ್ಞರಲ್ಲ; ತಾಂತ್ರಿಕ ವಿಷಯಗಳನ್ನು ಕಾವೇರಿ ನೀರು ನಿರ್ವಹಾಣಾ ಪ್ರಾಧಿಕಾರ ಹಾಗೂ ಮತ್ತು ನಿಯಂತ್ರಣ ಸಮಿತಿಗಳು ನಿರ್ಧರಿಸುತ್ತವೆ" ಎಂದು ಹೇಳಿ, ನಿರ್ಧಾರಗಳಲ್ಲಿ ನೇರವಾಗಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿರುವ ಉದಾಹರಣೆಗಳಿವೆ. ಅದೇ ರೀತಿ ಕರ್ನಾಟಕಕ್ಕೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕುಡಿಯುವ ನೀರಿನ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು ಅನುಕೂಲಸಿಂಧುವಾಗಿದೆ.
ಮಳೆ ಇಲ್ಲದಿದ್ದಾಗ ಸಂಪೂರ್ಣ ನೀರು ಹರಿಸಲು ಸಾಧ್ಯವಿಲ್ಲ, ಆದರೆ ಲಭ್ಯವಿರುವ ನೀರನ್ನು ಪ್ರಮಾಣಕ್ಕನುಗುಣವಾಗಿ ಹಂಚಿಕೊಳ್ಳಬೇಕು ಎಂಬುದು ನ್ಯಾಯಾಲಯ ಹಲವು ಬಾರಿ ಅಭಿಪ್ರಾಯ ಪಟ್ಟಿದೆ. ಹಾಗಾಗಿ, ಕರ್ನಾಟಕ ಸರ್ಕಾರ ಕಾವೇರಿ ಕೊಳ್ಳದ ಪರಿಸ್ಥಿತಿ, ಮುಂದಿನ ಜೂನ್ ವರೆಗೆ ಕುಡಿಯುವ ನೀರಿಮ ಅಗತ್ಯತೆ, ಜಲಾಶಯಗಳ ನೀರಿನ ಸಂಗ್ರಹದ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಈಗಾಗಲೇ ಸುಪ್ರಿಂಕೋರ್ಟ್ ಗೆ ಕರ್ನಾಟಕ ಅರ್ಜಿ ಸಲ್ಲಿಸಿದ್ದು, ನಾಳೆ ನಡೆಯುವ ವಿಚಾರಣೆ ಮೇಲೆ ಕನ್ನಡಿಗರ ಅಸ್ಮಿತೆಯಾದ ಕಾವೇರಿ ನೀರು ಬಿಡುಗಡೆಯ ಭವಿಷ್ಯ ನಿಂತಿದೆ.
ಕಾವೇರಿ ನೀರು ಎರಡೂ ರಾಜ್ಯಗಳು ಎಷ್ಟು ಅಗತ್ಯ ಎಂಬುದನ್ನು ನೋಡುವುದಾದರೆ, ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶದಲ್ಲಿ ರೈತರು ಬೆಳೆದಿರುವ ಪ್ರಮುಖ 'ಕುರುವೈ' ಭತ್ತದ ಬೆಳೆಯನ್ನು ಉಳಿಸಿಕೊಳ್ಳಲು ನೀರಿನ ತುರ್ತು ಅಗತ್ಯವಿದೆ ಎಂಬುದು ಅಲ್ಲಿನ ಸರ್ಕಾರದ ವಾದ.
ಈ ವರ್ಷ ಕಾವೇರಿ ನದಿಯಿಂದ ತಮಿಳುನಾಡಿಗೆ ತಲುಪಿದ ನೀರಿನ ಪ್ರಮಾಣವು ಕಳೆದ 50 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ ಎಂದು ತಮಿಳುನಾಡು ಹೇಳುತ್ತಿದೆ. ಇನ್ನು ಕರ್ನಾಟಕವು ಕೂಡ ತನ್ನದೇ ವಾದ ಮುಂದಿರಿಸಿದೆ. ಕರ್ನಾಟಕದಲ್ಲಿ ಮುಂಗಾರು ಮಳೆ ತಡವಾಗಿ ಆರಂಭವಾಗಿದ್ದರಿಂದ, ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಪ್ರಮುಖ ನಗರಗಳ ಕುಡಿಯುವ ನೀರಿನ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ.
ಕರ್ನಾಟಕಕ್ಕೆ ಕೇವಲ 'ನೈರುತ್ಯ ಮುಂಗಾರು' ಮಳೆಯಷ್ಟೇ ಆಧಾರ. ಆದರೆ ತಮಿಳುನಾಡಿಗೆ ಅಕ್ಟೋಬರ್ ನಂತರ 'ಈಶಾನ್ಯ ಮುಂಗಾರು' ಮಳೆಯಿಂದ ಭಾರೀ ಪ್ರಮಾಣದ ನೀರು ಸಿಗಲಿದೆ. ಆದ್ದರಿಂದ ಅವರು ಅಲ್ಲಿಯವರೆಗೆ ಕಾಯಬೇಕು ಎಂಬುದು ಕರ್ನಾಟಕದ ವಾದವಾಗಿದೆ. ಕಾವೇರಿ ಪ್ರಾಧಿಕಾರವು 12,000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿದ್ದರೂ, ಕರ್ನಾಟಕ ಸರ್ಕಾರವು ರಾಜ್ಯದ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟವನ್ನು ಮರುಪರಿಶೀಲಿಸಿ, ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದೆ.
ಒಂದು ವೇಳೆ ತಮಿಳುನಾಡಿಗೆ ನೀರು ಹರಿಸಲೇಬೇಕೆಂಬ ಆದೇಶ ಪುನರಾವರ್ತನೆಯಾದರೆ, ಕಾನೂನು ಹೋರಾಟದ ಜೊತೆಗೆ, ದೀರ್ಘಕಾಲೀನ ನೀರಾವರಿ ಮತ್ತು ಕೃಷಿ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರುವುದು ಅನಿವಾರ್ಯ ಎಂಬುದು ಜಲ ಹಾಗೂ ನೀರಾವರಿ ತಜ್ಞರು ಸಲಹೆ. ಬರ ಹಾಗೂ ಮಳೆ ಕೊರತೆಯ ವರ್ಷಗಳಲ್ಲಿ ಹೆಚ್ಚು ನೀರು ಬೇಡುವ ಕಬ್ಬು ಮತ್ತು ಭತ್ತದಂತಹ ಬೆಳೆಗಳ ಬದಲಿಗೆ ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ಹಾಗೂ ಸೂಕ್ತ ನಷ್ಟ ಪರಿಹಾರ ನೀಡಬೇಕು.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಹನಿ ನೀರಾವರಿ ಮತ್ತು ಸಿಂಪರಕ ನೀರಾವರಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ, ಶೇ.40 ರಷ್ಟು ನೀರನ್ನು ಪೋಲಾಗುವುದರಿಂದ ಉಳಿಸಬೇಕಾಗಿದೆ. ಮೇಕೆದಾಟು ಯೋಜನೆಯು ತಮಿಳುನಾಡಿಗೆ ತೊಂದರೆ ಮಾಡುವ ಯೋಜನೆಯಲ್ಲ, ಬದಲಿಗೆ ಸಂಕಷ್ಟದ ವರ್ಷಗಳಲ್ಲಿ ನೀರನ್ನು ಸಂಗ್ರಹಿಸಿ ಎರಡೂ ರಾಜ್ಯಗಳಿಗೆ ಬಳಸಿಕೊಳ್ಳುವ ಸಮತೋಲನ ಯೋಜನೆಯಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯ. ಅದೇ ರೀತಿ, ಪ್ರತಿ ಜಿಲಾ ಮಟ್ಟದಲ್ಲಿ ನೀರು ಲಭ್ಯತೆಗೆ ತಕ್ಕಂತೆ ಕೃಷಿ ಯೋಜನೆ ರೂಪಿಸುವ ವಾಟರ್ ಬಜೆಟಿಂಗ್ ಜಾರಿಯಾಗಬೇಕು.
ಕಾವೇರಿ ಕೇವಲ ನದಿಯಲ್ಲ, ಅದು ಕನ್ನಡಿಗರ ಜೀವನದಿ ಮತ್ತು ಕಾವೇರಿ ಹಿತರಕ್ಷಣೆ ನಮ್ಮೆಲ್ಲರ ಹೊಣೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಬಲವಾದ ಅಂಕಿ ಅಂಶಗಳು ಹಾಗೂ ವಾಸ್ತವ ಸ್ಥಿತಿಯನ್ನು ಮಂಡಿಸಿ ಕನ್ನಡಿಗರ ಹಕ್ಕನ್ನು ಎತ್ತಿಹಿಡಿಯಬೇಕಾಗಿದೆ. ಪ್ರಾಧಿಕಾರವು ಕೇವಲ ತಮಿಳುನಾಡಿನ ವಾದ ಆಲಿಸದೇ, ಕರ್ನಾಟಕದ ಜಲಾಶಯಗಳ ವಾಸ್ತವ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ ನ್ಯಾಯ ಒದಗಿಸಬೇಕಿದೆ.

