
ಕಾವೇರಿ ತಾಪ; ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಆದೇಶ
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು 55 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದೆ. ಕಳೆದ ಒಂದು ತಿಂಗಳಲ್ಲಿ ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣವು ಶೇ 87ರಷ್ಟು ಭಾರಿ ಕುಸಿತ ಕಂಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಾಗೂ ತೀವ್ರ ಬರ ಪರಿಸ್ಥಿತಿಯ ನಡುವೆಯೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 4 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಮಂಡಳಿ ಗುರುವಾರ ಮಹತ್ವದ ಆದೇಶ ನೀಡಿದೆ.
ನವದೆಹಲಿಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನೆರೆ ರಾಜ್ಯ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿಸುವಂತೆ ಸೂಚಿಸಿದೆ.
ಈ ಹಿಂದೆ ಕೂಡ ಸೆ.8ರಂದು ನಡೆದ ಸಭೆಯಲ್ಲಿ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿತ್ತು. ಆದರೆ, ರಾಜ್ಯದಲ್ಲಿ ಮಳೆಯಾಗದೆ ತೀವ್ರ ಬರ ಪರಿಸ್ಥಿತಿ ತಲೆದೋರಿರುವುದನ್ನು ಪರಿಗಣಿಸದೆ ಇಂತಹ ಆದೇಶಗಳನ್ನು ಹೊರಡಿಸುತ್ತಿರುವುದಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಬೆಳವಣಿಗೆಯ ಕುರಿತು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ, ಮಂಡಳಿಯ ಗಮನಕ್ಕೆ ಪ್ರಮುಖ ವಾಸ್ತವ ಅಂಶಗಳನ್ನು ತಂದಿದ್ದರು.
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು 55 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದೆ. ಕಳೆದ ಒಂದು ತಿಂಗಳಲ್ಲಿ ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣವು ಶೇ 87ರಷ್ಟು ಭಾರಿ ಕುಸಿತ ಕಂಡಿದೆ.
ಸದ್ಯ ಜಲಾಶಯಗಳಿಗೆ ಕೇವಲ 3 ಸಾವಿರ ಕ್ಯೂಸೆಕ್ಗಳಷ್ಟು ಮಾತ್ರ ಒಳಹರಿವು ಇದೆ ಎಂದು ವಿವರಿಸಿ, ರಾಜ್ಯದಲ್ಲಿ ನೀರು ಬಿಡಲು ಸಾಧ್ಯವಿರದ ಪರಿಸ್ಥಿತಿ ಇರುವುದನ್ನು ಅಂಕಿಅಂಶ ಸಹಿತ ಮನವರಿಕೆ ಮಾಡಿಕೊಡಲಾಗಿತ್ತು. ರಾಜ್ಯದಲ್ಲಿ ಕುಡಿಯುವ ನೀರಿನ ಸರಬರಾಜಿಗೂ ಕಷ್ಟವಾಗುತ್ತಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಮಂಡಳಿಯು ಈಗ ಮತ್ತೆ 4 ಸಾವಿರ ಕ್ಯೂಸೆಕ್ ನೀರು ಹರಿಸಲು ಶಿಫಾರಸು ಮಾಡಿರುವುದು ರಾಜ್ಯದ ರೈತರ ಮೇಲೆ ಬರೆ ಎಳೆದಂತಾಗಿದೆ.

