ಆರದ ಕಾವೇರಿ ಕಿಚ್ಚು: ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ CWRC ಶಿಫಾರಸು
x

ಆರದ ಕಾವೇರಿ ಕಿಚ್ಚು: ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ CWRC ಶಿಫಾರಸು

ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಪ್ರಮುಖ ಜಲಾಶಯಗಳಲ್ಲಿ ಒಳಹರಿವು 77,048 ಕ್ಯೂಸೆಕ್‌ನಿಂದ 9,282 ಕ್ಯೂಸೆಕ್‌ಗೆ ಕುಸಿದಿದೆ ಎಂದು ಕರ್ನಾಟಕವು ಕಾವೇರಿ ನೀರು ನಿಯಂತ್ರಣ ಸಮಿತಿಗೆ ವಿವರಿಸಿತು.


ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಭಾರೀ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ 9 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಶಿಫಾರಸು ಮಾಡಿದೆ.

ನವದೆಹಲಿಯಲ್ಲಿ ನಡೆದ ಸಮಿತಿಯ 141ನೇ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಆಗಸ್ಟ್ 25ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಿಗೆ ಬರುವಂತೆ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 9 ಸಾವಿರ ಕ್ಯೂಸೆಕ್ ಹರಿವು ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಒಟ್ಟು 11.66 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲೇಬೇಕು ಎಂದು ನಿರ್ದೇಶಿಸಿದೆ.

ರಾಜ್ಯದ ಕಟ್ಟುನಿಟ್ಟಿನ ವಾದ

ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಪ್ರಮುಖ ಜಲಾಶಯಗಳಲ್ಲಿ ಒಳಹರಿವು 77,048 ಕ್ಯೂಸೆಕ್‌ನಿಂದ 9,282 ಕ್ಯೂಸೆಕ್‌ಗೆ ಕುಸಿದಿದೆ ಎಂದು ಕರ್ನಾಟಕವು ಕಾವೇರಿ ನೀರು ನಿಯಂತ್ರಣ ಸಮಿತಿಗೆ ವಿವರಿಸಿತು.

ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಪ್ರಸ್ತುತ ಒಳಹರಿವಿನಲ್ಲಿ ಶೇ. 49.18 ರಷ್ಟು ಇಳಿಕೆ ದಾಖಲಾಗಿದೆ. ಜುಲೈ 29ರಿಂದ ಆಗಸ್ಟ್ 23ರ ನಡುವೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 32,493 ಕ್ಯೂಸೆಕ್ ಸೇರಿ ಒಟ್ಟು 2,16,993 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ನಿರಂತರ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಪ್ರಾಯೋಗಿಕವಾಗಿ ಅಸಾಧ್ಯ ಎಂದು ರಾಜ್ಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

ತಮಿಳುನಾಡಿನ ಪಟ್ಟು

ಬಾಕಿ ಉಳಿದಿರುವ 17.49 ಟಿಎಂಸಿ ಹಾಗೂ ಸಂಕಷ್ಟದ ಸಮಯ ಸೇರಿದಂತೆ 15 ದಿನಗಳಲ್ಲಿ ಒಟ್ಟು 28.386 ಟಿಎಂಸಿ ನೀರನ್ನು ಬಿಳಿಗುಂಡ್ಲುವಿಗೆ ತಲುಪುವಂತೆ ಕೆಆರ್ಎಸ್ ಹಾಗೂ ಕಬಿನಿಯಿಂದ ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ತಮಿಳುನಾಡು ಪಟ್ಟು ಹಿಡಿದಿತ್ತು.

ಸಮಿತಿಯ ಅಂತಿಮ ನಿರ್ಧಾರ

ಉಭಯ ರಾಜ್ಯಗಳ ವಾದ ಆಲಿಸಿದ ಸಮಿತಿಯು, ಜಲಾಶಯಗಳ ನೀರು ಸಂಗ್ರಹ, ಮೇಲ್ಭಾಗದ ಒಳಹರಿವು ಮುನ್ಸೂಚನೆ ಪರಿಶೀಲಿಸಿ ನಿತ್ಯ 9 ಸಾವಿರ ಕ್ಯೂಸೆಕ್ ಹರಿಸಲು ಶಿಫಾರಸು ಮಾಡಿತು. ಕಾವೇರಿ ನೀರು ನಿಯಂತ್ರಣ ಸಮಿತಿಯು ಆರಂಭದಲ್ಲಿ 3 ಸಾವಿರ ಕ್ಯೂಸೆಕ್, ಆ ನಂತರ 12 ಸಾವಿರ ಕ್ಯೂಸೆಕ್ ಹರಿಸುವಂತೆ ಆದೇಶ ನೀಡಿತ್ತು. ಇದೀಗ 9 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚಿಸಿರುವುದು ರಾಜ್ಯಕ್ಕೆ ದೊಡ್ಡ ಸವಾಲಾಗಿದೆ.

ನಾಳೆ (ಆ.25) ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ತೀವ್ರ ಕುತೂಹಲ ಮೂಡಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ನಿರ್ದೇಶಿಸಿದೆ. ಆ.25 ರಿಂದ 15 ದಿನ ಒಟ್ಟು 11.66 ಟಿಎಂಸಿ ನೀರು ಹರಿಸಬೇಕು. ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಅದು ದಾಖಲಾಗಬೇಕು ಎಂದು ಸೂಚಿಸಿದೆ.

Read More
Next Story