x

ಕಾವೇರಿ ಸಂಕಷ್ಟ - ಸುಪ್ರೀಂ ನಿರ್ಧಾರವೇ ಆಸರೆ; ಇಂದಿರಾ ಕ್ಯಾಂಟೀನ್‌ ಅಡುಗೆ ಮನೇಲಿ ಇಲಿಗಳ ಕಾರುಬಾರು!

ಕಾವೇರಿ ವಿಚಾರದಲ್ಲಿ CWRC ಶಿಫಾರಸನ್ನು CWMA ಎತ್ತಿ ಹಿಡಿದಿದೆ; ಇಂದಿರಾ ಕ್ಯಾಂಟೀನ್‌ನಲ್ಲಿ ಇಲಿಗಳು- ಆಹಾರಕ್ಕಿಲ್ಲ ಸ್ವಚ್ಛತೆ; ಸರ್ಕಾರಿ ನೌಕರರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ


Click the Play button to hear this message in audio format

ಕಾವೇರಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿ ಹಿಡಿದಿದ್ದು, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸಲೇಬೇಕೆಂದು ಕರ್ನಾಟಕಕ್ಕೆ ಕಠಿಣ ಆದೇಶ ನೀಡಿದೆ.

ದೆಹಲಿಯಲ್ಲಿ ನಡೆದ CWMA ಸಭೆಯಲ್ಲಿ ಕರ್ನಾಟಕದ ಪರವಾಗಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭಾಗವಹಿಸಿತ್ತು. ಸಭೆಯಲ್ಲಿ ರಾಜ್ಯದ ಜಲಾಶಯಗಳಲ್ಲಿನ ನೀರಿನ ಕೊರತೆ, ಮಳೆಗಾಲದ ಮಂದಗತಿ ಮತ್ತು ರೈತರ ಸಂಕಷ್ಟಗಳನ್ನು ವಿವರಿಸಿ, ನೀರು ಬಿಡುಗಡೆ ಮಾಡಲು ಅಸಾಧ್ಯವಾದ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲಾಯಿತು. ಆದರೂ, ಪ್ರಾಧಿಕಾರವು CWRCಯ ಆದೇಶವನ್ನೇ ಪುರಸ್ಕರಿಸಿ, ತಮಿಳುನಾಡಿನ ಬೇಡಿಕೆಗೆ ಮನ್ನಣೆ ನೀಡಿದೆ.

ಈ ನಡುವೆ, ಕಾವೇರಿ ವಿವಾದ ಇದೀಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ನೀರು ನಿಯಂತ್ರಣ ಸಮಿತಿಯ ಶಿಫಾರಸುಗಳನ್ನು ಪ್ರಶ್ನಿಸಿ ಮತ್ತು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ವಿವರಿಸಿ ಕರ್ನಾಟಕ ಸರ್ಕಾರ ಕಾನೂನು ಹೋರಾಟ ನಡೆಸುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿರುವ ಮುಂದಿನ ವಿಚಾರಣೆ ಅತ್ಯಂತ ನಿರ್ಣಾಯಕವಾಗಿದೆ. ರಾಜ್ಯದ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಈ ಪರಿಸ್ಥಿತಿಯಲ್ಲಿ ನೀರು ಹರಿಸಿದರೆ ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ. ಮುಂಗಾರು ಮಳೆಯನ್ನೇ ನಂಬಿ ಬೆಳೆ ಬೆಳೆದಿರುವ ಲಕ್ಷಾಂತರ ರೈತರು ಸಂಕಷ್ಟದಲ್ಲಿದ್ದಾರೆ. ನೀರು ಬಿಡುಗಡೆ ಮಾಡಿದರೆ ಬೆಳೆಗಳು ಒಣಗುವ ಭೀತಿ ಇದೆ. ತಮಿಳುನಾಡು ಪದೇ ಪದೆ ನೀರು ಕೇಳುತ್ತಿರುವುದನ್ನು ನಿಯಂತ್ರಿಸಬೇಕು ಮತ್ತು ಜಲಾಶಯಗಳ ವಾಸ್ತವ ಸಂಗ್ರಹವನ್ನು ಪರಿಗಣಿಸಿ ನ್ಯಾಯಯುತ ಹಂಚಿಕೆ ಮಾಡಬೇಕು ಎಂಬುದು ರಾಜ್ಯದ ಆಗ್ರಹವಾಗಿದೆ. ಸುಪ್ರೀಂಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ರಾಜ್ಯದ ಭವಿಷ್ಯವನ್ನು ನಿರ್ಧರಿಸಲಿದೆ. ಒಂದು ವೇಳೆ ನ್ಯಾಯಾಲಯವೂ ನೀರು ಬಿಡುಗಡೆಗೆ ಆದೇಶಿಸಿದರೆ, ರಾಜ್ಯ ಸರ್ಕಾರವು ಕುಡಿಯುವ ನೀರು ಮತ್ತು ಕೃಷಿ ನೀರಾವರಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗುತ್ತದೆ.

ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿ: ಬಡವರ ಅನ್ನಕ್ಕೆ ಕುತ್ತು

ಐಷಾರಾಮಿ ಹೋಟೆಲ್‌ಗಳ ನಂತರ, ಇದೀಗ ಸರದಿ ಬಂದಿರುವುದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಇಂದಿರಾ ಕ್ಯಾಂಟೀನ್'ಗಳಿಗೆ. ಬಡವರು, ಕಾರ್ಮಿಕರು ಮತ್ತು ಕಡಿಮೆ ಆದಾಯದ ವರ್ಗದವರು ನಂಬಿರುವ ಈ ಕ್ಯಾಂಟೀನ್‌ಗಳ ಅಡುಗೆಮನೆಯ ಪರಿಸ್ಥಿತಿ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಆಹಾರ ಸುರಕ್ಷತಾ ಅಧಿಕಾರಿಗಳು ಗೊಟ್ಟಿಗೆರೆ ಮತ್ತು ಲಿಂಗರಾಜಪುರ ಸೇರಿದಂತೆ ಇತರೆಡೆಗಳಲ್ಲಿನ ಕ್ಯಾಂಟೀನ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಲ್ಲಿನ ಅಡುಗೆಮನೆಗಳಲ್ಲಿ ಸ್ವಚ್ಛತೆಯೇ ಇಲ್ಲದಿರುವುದು ಕಂಡುಬಂದಿದೆ. ಅತೀ ದೊಡ್ಡ ಆಘಾತವೆಂದರೆ, ಅಡುಗೆಮನೆಯಲ್ಲಿ ಇಲಿ ಮತ್ತು ಹೆಗ್ಗಣಗಳ ಓಡಾಟ ಕಂಡುಬಂದಿರುವುದು.

ಅಸ್ವಚ್ಛತೆಯ ಕಾರಣದಿಂದ ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್ ಅನ್ನು ಅಧಿಕಾರಿಗಳು ತಕ್ಷಣವೇ ಸೀಜ್ ಮಾಡಿದ್ದಾರೆ. ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲು ಆಹಾರ ಸುರಕ್ಷತಾ ಇಲಾಖೆ ನಿರ್ಧರಿಸಿದೆ.

ಈ ಇಡೀ ಪ್ರಕರಣವನ್ನು ವಿಶ್ಲೇಷಿಸಿದಾಗ, ಆಹಾರ ಸುರಕ್ಷತೆಯ ವಿಷಯದಲ್ಲಿ ಎರಡು ಪ್ರಮುಖ ಸವಾಲುಗಳು ಎದುರಾಗಿವೆ. ಮೇಲ್ವಿಚಾರಣೆಯ ಕೊರತೆ ಮತ್ತು ಮೂಲಸೌಕರ್ಯದ ಕೊರತೆ.. ಸರ್ಕಾರಿ ಯೋಜನೆಯೇ ಇರಲಿ ಅಥವಾ ಖಾಸಗಿ ಉದ್ಯಮವೇ ಇರಲಿ, ಅಲ್ಲಿನ ನೈರ್ಮಲ್ಯದ ಉಸ್ತುವಾರಿ ವಹಿಸಬೇಕಾದ ಅಧಿಕಾರಿಗಳು ಸಕಾಲದಲ್ಲಿ ತಪಾಸಣೆ ನಡೆಸುತ್ತಿಲ್ಲ ಎಂಬುದು ಈ ದಾಳಿಗಳಿಂದ ಸಾಬೀತಾಗಿದೆ. ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆ ಪಡೆದವರು ಲಾಭದ ಆಸೆಯಲ್ಲಿ ನೈರ್ಮಲ್ಯವನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ ಎನ್ನಲಾಗಿದೆ.

'ಟೀಮ್ ಕರ್ನಾಟಕ' ಪರಿಕಲ್ಪನೆ

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಂದು ನಡೆದ ರಾಜ್ಯ ಸರ್ಕಾರಿ ನೌಕರರೊಂದಿಗಿನ ಸಂವಾದ ಕಾರ್ಯಕ್ರಮವು ರಾಜ್ಯದ ಆಡಳಿತ ಯಂತ್ರದ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆಯನ್ನು ತರುವ ಸೂಚನೆಗಳನ್ನು ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುಮಾರು 5.50 ಲಕ್ಷ ಸರ್ಕಾರಿ ನೌಕರರನ್ನು ಉದ್ದೇಶಿಸಿ ನೀಡಿದ ಕರೆ, ಕೇವಲ ಸಾಂಪ್ರದಾಯಿಕ ಭಾಷಣವಾಗಿ ಉಳಿಯದೆ, 'ಟೀಮ್ ಕರ್ನಾಟಕ' ಎಂಬ ಸಾಮೂಹಿಕ ಜವಾಬ್ದಾರಿಯ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದೆ.

ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರೊಂದಿಗೆ ನಡೆಸಿದ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್‌ಖರ್ಗೆ, ಸಚಿವರಾದ ಸಂತೋಷ್‌ಲಾಡ್‌, ಲಕ್ಷ್ಮಣ್‌ಸವದಿ ಸೇರಿದಂತೆ ಇತರರು ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕುಣಿಗಲ್‌ತಹಸೀಲ್ದಾರ್‌ಕಚೇರಿಯಿಂದ ಪಾಲ್ಗೊಂಡಿದ್ದರು. ಸಿಎಂ ಶಿವಕುಮಾರ್ ಅವರು ಸರ್ಕಾರಿ ನೌಕರರನ್ನು ತಮ್ಮ ತಂಡದ ಅವಿಭಾಜ್ಯ ಅಂಗವೆಂದು ಕರೆದಿರುವುದು ಆಡಳಿತದಲ್ಲಿನ ಅಧಿಕಾರಶಾಹಿಯ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ. "ನಾನು ಸೇರಿದಂತೆ ಮಂತ್ರಿಮಂಡಲ ಮತ್ತು ಅಧಿಕಾರಿಗಳು ಎಲ್ಲರೂ ಸೇರಿ ಒಂದು ತಂಡ" ಎಂದಿದ್ದಾರೆ.

ಕೆಂಗಲ್ ಹನುಮಂತಯ್ಯನವರ ಕಾಲದ ಆಡಳಿತಾತ್ಮಕ ದೂರದೃಷ್ಟಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರ ಸೇವಾ ಮನೋಭಾವವನ್ನು ಸ್ಮರಿಸುವ ಮೂಲಕ, ನೌಕರರಿಗೆ ತಮ್ಮ ಕರ್ತವ್ಯದ ಮಹತ್ವವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. "ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ" ಎಂಬ ಅವರ ನುಡಿ, ರಾಜಕೀಯ ದಾಟಿದ ಸೇವಾ ಮನೋಭಾವದ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.

Read More
Next Story