ಸುಪ್ರೀಂ ಮುಂದೆ ರಾಜ್ಯದ ಜಲ ವಾಸ್ತವ; ಪ್ರಜ್ವಲ್‌ಗೆ ಜೈಲಿನಲ್ಲಿ ರಾಜಾತಿಥ್ಯ..?; ಸ್ವೀಕಾರ ಕೇಂದ್ರದಿಂದ 1,776 ಬಾಲಕಿಯರು ನಾಪತ್ತೆ!
ನಾಳಿನ ಕರ್ನಾಟಕ ಬಂದ್‌ಗೆ ಸಿಗಲಿದೆಯೇ ಪ್ರತಿಕ್ರಿಯೆ?; ಶಿಕ್ಷೆಗೊಳಗಾಗಿರುವ ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿದೆ; ಸಂಬಂಧಪಟ್ಟ ಅಧಿಕಾರಿಗಳಿಗೆ ನೊಟೀಸ್ ಜಾರಿ.
ಕಾವೇರಿ ನದಿ ನೀರಿನ ಹಂಚಿಕೆ ವಿವಾದವು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಬಿಸಿಯೇರುತ್ತಿದೆ. ತಮಿಳುನಾಡು ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೂಚಿಸಿದ ಪ್ರಮಾಣದ ನೀರನ್ನು ಕರ್ನಾಟಕ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೆ, ಕರ್ನಾಟಕ ಸರ್ಕಾರವು ತನ್ನಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ವಿವರಿಸಿ ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗಿದೆ. ಈ ಸಂಬಂಧ ನಾಳೆ ನಡೆಯಲಿರುವ ಸುಪ್ರೀಂ ಕೋರ್ಟ್ ವಿಚಾರಣೆಯ ಹಿನ್ನೆಲೆಯಲ್ಲಿ, ಕರ್ನಾಟಕದ ವಕೀಲರ ತಂಡದಿಂದ ಪ್ರತ್ಯುತ್ತರ ಸಲ್ಲಿಕೆ ಮಾಡಲಾಗಿದೆ.
ಕರ್ನಾಟಕದ ವಕೀಲರ ತಂಡವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಉತ್ತರದಲ್ಲಿ, ಪ್ರಸಕ್ತ ಸಾಲಿನಲ್ಲಿ ಎದುರಾಗಿರುವ ಭೀಕರ ಬರಗಾಲ ಮತ್ತು ನೈಸರ್ಗಿಕ ಸಂಕಷ್ಟವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. 'ಎಲ್ ನಿನೋ' ಪರಿಣಾಮದಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಭಾವವಾಗಿದೆ. ರಾಜ್ಯದ ನಾಲ್ಕು ಪ್ರಮುಖ ಜಲಾಶಯಗಳಾದ ಕೆ.ಆರ್.ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿಗೆ ಒಳಹರಿವಿನಲ್ಲಿ ಶೇಕಡಾ 65.76ರಷ್ಟು ಭಾರಿ ಕೊರತೆ ಉಂಟಾಗಿದೆ. ಜಲಾಶಯಗಳ ಭರ್ತಿಯಾಗದ ಹೊರತು ನೀರು ಬಿಡುಗಡೆ ಮಾಡುವುದು ರೈತರ ಬದುಕಿನ ಮೇಲೆ ಮತ್ತು ಕುಡಿಯುವ ನೀರಿನ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಾದಿಸಲಾಗಿದೆ.
ತಮಿಳುನಾಡಿನ ಆರೋಪಗಳಿಗೆ ತಕ್ಕ ಉತ್ತರ ನೀಡಿರುವ ಕರ್ನಾಟಕ, CWMA ಶಿಫಾರಸು ಮಾಡಿದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ಬಿಳಿಗುಂಡ್ಲು ಬಳಿ ಬಿಡುಗಡೆ ಮಾಡಿರುವುದನ್ನು ಸಾಕ್ಷ್ಯಾಧಾರಗಳೊಂದಿಗೆ ಮುಂದಿಟ್ಟಿದೆ. ಜುಲೈ 29 ರಿಂದ ಆಗಸ್ಟ್ 10 ರವರೆಗೆ ವಯನಾಡು ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯ ಲಾಭವನ್ನು ತಮಿಳುನಾಡಿಗೆ ತಲುಪಿಸಲಾಗಿದೆ. ಜಲಾಶಯಗಳಿಂದ ಒಟ್ಟು 1,64,080 ಕ್ಯೂಸೆಕ್ ನೀರು ಹರಿದಿದೆ. ಬಿಳಿಗುಂಡ್ಲು ಗೇಜ್ ಸ್ಟೇಷನ್ ಮೂಲಕ 86,797 ಕ್ಯೂಸೆಕ್ ನೀರು ತಮಿಳುನಾಡು ತಲುಪಿದೆ ಎಂದು ದಾಖಲೆಗಳು ಹೇಳುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಿಳಿಗುಂಡ್ಲುವಿನಲ್ಲಿರುವ ಗೇಜ್ ಸ್ಟೇಷನ್ ಗಂಟೆಗೊಮ್ಮೆ ನೀರಿನ ಹರಿವನ್ನು ನಿಖರವಾಗಿ ದಾಖಲಿಸುತ್ತಿದೆ. ಹೀಗಾಗಿ ನೀರಿನ ಹರಿವಿನ ಕುರಿತು ಯಾವುದೇ ಅನುಮಾನಗಳಿಗೆ ಆಸ್ಪದವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಸಿಸಿಬಿ ದಾಳಿ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಕಾರಾಗೃಹ ವ್ಯವಸ್ಥೆಯ ಭದ್ರತೆ, ಆಡಳಿತಾತ್ಮಕ ವೈಫಲ್ಯ ಮತ್ತು ರಾಜಕೀಯ ಪ್ರಭಾವದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜೈಲು ಎಂಬುದು ಅಪರಾಧಿಗಳನ್ನು ಸುಧಾರಿಸುವ ಕೇಂದ್ರವಾಗಿರಬೇಕು. ಆದರೆ, ಪರಪ್ಪನ ಅಗ್ರಹಾರದಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಗಳು, ಜೈಲುಗಳು ಸುಧಾರಣಾ ಕೇಂದ್ರಗಳ ಬದಲಾಗಿ ಅಕ್ರಮ ಚಟುವಟಿಕೆಗಳ ತಾಣಗಳಾಗಿ ಬದಲಾಗುತ್ತಿವೆಯೇ ಎಂಬ ಆತಂಕವನ್ನು ಸೃಷ್ಟಿಸಿವೆ. ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ 10ಕ್ಕೂ ಹೆಚ್ಚು ಮೊಬೈಲ್ಗಳು ಪತ್ತೆಯಾಗಿರುವುದು, ಜೈಲಿನ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಆಂಡ್ರಾಯ್ಡ್ ಫೋನ್ ಪತ್ತೆಯಾಗಿರುವುದು ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಆ ಫೋನ್ನಲ್ಲಿ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ಗಳಷ್ಟೇ ಅಲ್ಲದೆ ನೆಟ್ಫ್ಲಿಕ್ಸ್ಮತ್ತು ಪ್ರೈಮ್ ವಿಡಿಯೋಗಳಂತಹ ಮನರಂಜನಾ ಆ್ಯಪ್ಗಳಿರುವುದು, ಜೈಲಿನಲ್ಲಿ ಕೈದಿಗಳಿಗೆ ಎಂತಹ ರಾಜಾತಿಥ್ಯ ಸಿಗುತ್ತಿದೆ ಎಂಬುದನ್ನು ತೋರಿಸುತ್ತದೆ. ಜೈಲಿನ ಒಳಗೆ ಕುಳಿತು ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದು, ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ಪ್ರಭಾವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
1,776 ಮಹಿಳೆಯರು ಮತ್ತು ಹೆಣ್ಣುಮಕ್ಕಳು ನಾಪತ್ತೆ..!
ರಾಜ್ಯದ ಆಡಳಿತ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯರ ರಕ್ಷಣೆ, ಪೋಷಣೆ ಮತ್ತು ಪುನರ್ವಸತಿಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಸುತ್ತಿರುವ 'ಸರ್ಕಾರಿ ಸ್ವೀಕಾರ ಕೇಂದ್ರ'ಗಳೇ ಇದೀಗ ಅಪರಾಧ ಕೃತ್ಯಗಳ ತಾಣಗಳಾಗಿ ಬದಲಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಸರ್ಕಾರಿ ಸ್ವೀಕಾರ ಕೇಂದ್ರದಲ್ಲಿ 2000ದಿಂದ 2018ರವರೆಗೆ ದಾಖಲಾಗಿದ್ದ 1,776 ಮಹಿಳೆಯರು ಮತ್ತು ಹೆಣ್ಣುಮಕ್ಕಳು ನಿಗೂಢವಾಗಿ ನಾಪತ್ತೆಯಾಗಿರುವುದು, ರಾಜ್ಯದ ಆಡಳಿತ ಯಂತ್ರದ ವಿಶ್ವಾಸಾರ್ಹತೆಯನ್ನು ಬುಡಮೇಲು ಮಾಡಿದೆ.
ಹಲವು ಬಾರಿ ದೂರು ನೀಡಿದರೂ ಸರ್ಕಾರದ ಮಟ್ಟದಲ್ಲಿ ಯಾವುದೇ ಕ್ರಮ ಜರುಗದ ಕಾರಣ, ಗಜೇಂದ್ರ ಕುಮಾರ್ ಗೌಡ ಎಂಬುವವರು ಲೋಕಾಯುಕ್ತ ಸಂಸ್ಥೆಯ ಮೊರೆ ಹೋಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ಪ್ರಗತಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಕೇಳಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯು ಸೆಪ್ಟೆಂಬರ್ 10ರಂದು ನಿಗದಿಯಾಗಿದೆ.
ದೂರುದಾರರಾದ ಗಜೇಂದ್ರ ಕುಮಾರ್ ಗೌಡ ಅವರು, ಇಲಾಖೆಯ ಆಡಳಿತದಲ್ಲಿನ ಲೋಪದೋಷಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಸಾರ್ವಜನಿಕರಿಗೆ ಅಥವಾ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತರಲ್ಲಿ ಒತ್ತಾಯಿಸಿದ್ದಾರೆ. ಈ ಪ್ರಕರಣವು ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಸೆಪ್ಟೆಂಬರ್ 10ರೊಳಗೆ ಲೋಕಾಯುಕ್ತಕ್ಕೆ ಏನು ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

