x

ಕ್ಯಾನ್ಸರ್ ಔಷಧ ದರದಲ್ಲಿ ನಡೆಯುತ್ತಿದೆಯೇ ಮಹಾ ಮೋಸ?

ಕ್ಯಾನ್ಸರ್‌ ಹಾಗೂ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಕೆಲವು ಔಷಧಿಗಳು ಮೂಲ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಆರೋಪಗಳು ಚರ್ಚೆಗೆ ಬಂದಿವೆ. ನಾನ್‌ ಶೆಡ್ಯೂಲ್‌ ಔಷಧಗಳಿಗೆ ದರ ಮಿತಿ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಬಹುದು ಎನ್ನಲಾಗಿದ್ದು, ಇಂತಹ ಔಷಧಗಳಿಗೂ ದರ ನಿಯಂತ್ರಣ ಜಾರಿಗೊಳಿಸುವಂತೆ ಆಗ್ರಹಿಸಲಾಗಿದೆ.


Click the Play button to hear this message in audio format

ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸುವ ಕೆಲವು ಔಷಧಗಳನ್ನು ಮೂಲ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಔಷಧಿಗಳ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಕರ್ನಾಟಕ ಫಾರ್ಮಸಿ ರಿಟೇಲರ್ಸ್‌ ಆ್ಯಂಡ್‌ ಡಿಸ್ಟ್ರಿಬ್ಯೂಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಸಿ. ಜಯರಾಮ್‌ ಅವರ ಪ್ರಕಾರ, ಔಷಧಗಳನ್ನು ಮುಖ್ಯವಾಗಿ ಶೆಡ್ಯೂಲ್‌ ಮತ್ತು ನಾನ್‌ ಶೆಡ್ಯೂಲ್‌ ಎಂಬ ಎರಡು ವಿಭಾಗಗಳಲ್ಲಿ ನೋಡಲಾಗುತ್ತದೆ. ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಶೆಡ್ಯೂಲ್‌ ಔಷಧಗಳಿಗೆ ದರ ನಿಯಂತ್ರಣ ವ್ಯವಸ್ಥೆ ಇದೆ. ಆದರೆ ನಾನ್‌ ಶೆಡ್ಯೂಲ್‌ ಔಷಧಗಳಿಗೆ ಇದೇ ರೀತಿಯ ದರ ಮಿತಿ ಅನ್ವಯಿಸುವುದಿಲ್ಲ.

ಶೆಡ್ಯೂಲ್‌ ಔಷಧಗಳಲ್ಲಿ ವಿತರಕರಿಗೆ ಶೇ 8 ಮತ್ತು ರಿಟೇಲರ್‌ಗಳಿಗೆ ಶೇ 16ರಷ್ಟು ಮಾರ್ಜಿನ್‌ ನಿಗದಿಯಾಗಿದೆ. ನಾನ್‌ ಶೆಡ್ಯೂಲ್‌ ಔಷಧಗಳಲ್ಲಿ ವಿತರಕರಿಗೆ ಶೇ 10 ಮತ್ತು ರಿಟೇಲರ್‌ಗಳಿಗೆ ಶೇ 20ರಷ್ಟು ಮಾರ್ಜಿನ್‌ ಇರುವುದಾಗಿ ಜಯರಾಮ್‌ ವಿವರಿಸಿದ್ದಾರೆ.

ಕ್ಯಾನ್ಸರ್ ಔಷಧಗಳಿಗೆ ಪ್ರೈಸ್‌ ಕ್ಯಾಪ್‌ ಅಗತ್ಯ

ಕ್ರಿಟಿಕಲ್‌ ಕೇರ್‌ ಯೂನಿಟ್‌ಗಳು ಮತ್ತು ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಕೆಲವು ಔಷಧಗಳ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ. ಇಂತಹ ಔಷಧಿಗಳ ಮಾರಾಟ ಪ್ರಮಾಣ ಕಡಿಮೆ ಇರುವ ಕಾರಣ ಅವು ಅಗತ್ಯ ಔಷಧಗಳ ಪಟ್ಟಿಗೆ ಸೇರಿಲ್ಲ. ಹೀಗಾಗಿ ಅವುಗಳ ಮೇಲೆ ದರ ಮಿತಿ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಔಷಧ ನಿಯಂತ್ರಣ ಇಲಾಖೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧೀಯ ಬೆಲೆ ನಿಗದಿ ಪ್ರಾಧಿಕಾರಕ್ಕೆ ಪತ್ರ ಬರೆದು, ಇಂತಹ ಔಷಧಗಳಿಗೆ ಶೀಘ್ರ ದರ ನಿಯಂತ್ರಣ ಜಾರಿಗೊಳಿಸುವಂತೆ ಮನವಿ ಮಾಡಿದೆ ಎಂದು ಜಯರಾಮ್‌ ತಿಳಿಸಿದ್ದಾರೆ.

ಡ್ರಗ್ಸ್‌ ಪ್ರೈಸ್‌ ಕಂಟ್ರೋಲ್‌ ಆರ್ಡರ್‌ನಲ್ಲಿ ವಿಶೇಷ ಅಧಿಕಾರ

ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವೆನಿಸಿದರೆ ನಾನ್‌ ಶೆಡ್ಯೂಲ್‌ ಔಷಧಿಗಳಿಗೂ ದರ ನಿಯಂತ್ರಣ ಹೇರಲು ರಾಷ್ಟ್ರೀಯ ಔಷಧೀಯ ಬೆಲೆ ನಿಗದಿ ಪ್ರಾಧಿಕಾರಕ್ಕೆ ಅಧಿಕಾರವಿದೆ ಎಂದು ಅವರು ಹೇಳಿದ್ದಾರೆ. ಡ್ರಗ್ಸ್‌ ಪ್ರೈಸ್‌ ಕಂಟ್ರೋಲ್‌ ಆರ್ಡರ್‌ 2013ರಲ್ಲಿ ಈ ಸಂಬಂಧ ವಿಶೇಷ ಅವಕಾಶವಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಬಳಸುವ ಔಷಧಗಳ ಮೇಲೆ ಹೆಚ್ಚಿನ ಗಮನ

ಕ್ರಿಟಿಕಲ್‌ ಕೇರ್‌ ಮತ್ತು ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ಸಾಮಾನ್ಯ ಮೆಡಿಕಲ್‌ ಸ್ಟೋರ್‌ಗಳಲ್ಲಿ ಹೆಚ್ಚಾಗಿ ಮಾರಾಟವಾಗುವುದಿಲ್ಲ. ಆಸ್ಪತ್ರೆಗಳು ಇವುಗಳನ್ನು ನೇರವಾಗಿ ವಿತರಕರು ಅಥವಾ ಕಂಪನಿಗಳಿಂದ ಖರೀದಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಾಮಾನ್ಯ ಗ್ರಾಹಕರಿಗೆ ಈ ದರ ವ್ಯತ್ಯಾಸದ ಮಾಹಿತಿ ಸುಲಭವಾಗಿ ಲಭ್ಯವಾಗುವುದಿಲ್ಲ ಎಂದು ಜಯರಾಮ್‌ ಹೇಳಿದ್ದಾರೆ.

ನಕಲಿ ಔಷಧ ದಂಧೆಗೂ ಕಠಿಣ ಕ್ರಮಕ್ಕೆ ಆಗ್ರಹ

ಇತ್ತೀಚೆಗೆ ರಾಜ್ಯದಲ್ಲಿ ನಕಲಿ ಔಷಧಗಳ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಔಷಧಿ ಪೂರೈಕೆ ಸರಪಳಿಯ ಮೇಲ್ವಿಚಾರಣೆಯನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಕಂಪನಿಯಿಂದ ಸಿಎಫ್‌ಓ, ಅಧಿಕೃತ ಸ್ಟಾಕಿಸ್ಟ್‌, ವಿತರಕರು ಹಾಗೂ ರಿಟೇಲರ್‌ವರೆಗೆ ಸರಿಯಾದ ಬಿಲ್‌ಗಳೊಂದಿಗೆ ಔಷಧ ಸಾಗಿದರೆ ಪೂರೈಕೆ ಸರಪಳಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬಹುದು ಎಂದು ವಿವರಿಸಿದ್ದಾರೆ.

ನಕಲಿ ಔಷಧ ಅಥವಾ ಅಕ್ರಮ ಮಾರಾಟದ ಮೂಲಕ ರೋಗಿಗಳ ಜೀವದೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಜೀವ-ಮರಣದ ಹೋರಾಟದಲ್ಲಿರುವ ಕ್ಯಾನ್ಸರ್‌ ಮತ್ತು ಕ್ರಿಟಿಕಲ್‌ ಕೇರ್‌ ರೋಗಿಗಳ ಕುಟುಂಬಗಳ ಆರ್ಥಿಕ ಸಂಕಷ್ಟವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಜನೌಷಧಿ ಕೇಂದ್ರಗಳಲ್ಲಿನ ದರದ ಬಗ್ಗೆ ಸ್ಪಷ್ಟನೆ

ಜನೌಷಧಿ ಕೇಂದ್ರಗಳಲ್ಲಿ ಹಲವು ಔಷಧಿಗಳು ಖಾಸಗಿ ಮೆಡಿಕಲ್‌ ಸ್ಟೋರ್‌ಗಳಿಗಿಂತ ಕಡಿಮೆ ದರದಲ್ಲಿ ದೊರೆಯುತ್ತವೆ. ಆದರೆ ಎಲ್ಲ ಔಷಧಿ ಸಂಯೋಜನೆಗಳು ಅಥವಾ ಬ್ರ್ಯಾಂಡ್‌ಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವುದಿಲ್ಲ ಎಂದು ಜಯರಾಮ್‌ ಹೇಳಿದ್ದಾರೆ.

Read More
Next Story