
ಮಂಗಳೂರಲ್ಲಿ ಸೆ.18ಕ್ಕೆ ಮಹತ್ವದ ಸಚಿವ ಸಂಪುಟ ಸಭೆ: ಕರಾವಳಿಯ ಅಭಿವೃದ್ಧಿಗೆ ಆದ್ಯತೆ
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳು, ಸ್ಥಳೀಯರ ಬೇಡಿಕೆಗಳು ಮತ್ತು ಭವಿಷ್ಯದ ಅಭಿವೃದ್ಧಿಯ ನೀಲಿನಕ್ಷೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಆಡಳಿತ ಚುಕ್ಕಾಣಿ ಹಿಡಿದಿರುವ ಸರ್ಕಾರ, ಇದೀಗ ಕರಾವಳಿಯತ್ತ ತನ್ನ ದೃಷ್ಟಿ ನೆಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕನಸುಗಳಿಗೆ ರೆಕ್ಕೆ ನೀಡುವ ಉದ್ದೇಶದಿಂದ, ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಈ ಕುರಿತು ಟಿಪ್ಪಣಿಯನ್ನು ಹೊರಡಿಸಿದ್ದು, ಕರಾವಳಿ ಭಾಗದ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಅಗ್ರಸ್ಥಾನ ನೀಡುವಂತೆ ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಬೆಳವಣಿಗೆಯು ಕರಾವಳಿ ಕರ್ನಾಟಕದ ಪಾಲಿಗೆ ಆಡಳಿತಾತ್ಮಕವಾಗಿ ಬಹಳ ಮಹತ್ವದ್ದಾಗಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳು, ಸ್ಥಳೀಯರ ಬೇಡಿಕೆಗಳು ಮತ್ತು ಭವಿಷ್ಯದ ಅಭಿವೃದ್ಧಿಯ ನೀಲಿನಕ್ಷೆಯ ಕುರಿತು ಈ ಸಭೆಯಲ್ಲಿ ಚರ್ಚೆಯಾಗಲಿದ್ದು, ಕರಾವಳಿಯ ಜನತೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ರವಾನಿಸಿರುವ ಟಿಪ್ಪಣಿಯು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಪ್ರಮುಖ ಬೇಡಿಕೆಗಳನ್ನು ಗುರುತಿಸಿ, ಅವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಆರ್ಥಿಕ ಹಾಗೂ ತಾಂತ್ರಿಕ ಪ್ರಸ್ತಾವನೆಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇದು ಸರ್ಕಾರ ಕರಾವಳಿಯತ್ತ ತೋರುತ್ತಿರುವ ಗಂಭೀರತೆಯ ಸಂಕೇತವಾಗಿದೆ.
ಖಾಸಗಿ ಹೂಡಿಕೆಯ ಬಲವರ್ಧನೆ - ಶಾಸಕ ಡಾ. ವೈ. ಭರತ್ ಶೆಟ್ಟಿ
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಕರಾವಳಿಯ ಅಭಿವೃದ್ಧಿಯ ಬಗ್ಗೆ ಭಿನ್ನವಾದ ಮತ್ತು ಆಳವಾದ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಮಂಗಳೂರಿನ ಇಂದಿನ ಬೆಳವಣಿಗೆಗೆ ಶೇ. 80ರಷ್ಟು ಶ್ರೇಯಸ್ಸು ಖಾಸಗಿ ಉದ್ಯಮಿಗಳಿಗೆ ಸಲ್ಲಬೇಕು. ಮಂಗಳೂರಿನಲ್ಲಿ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳು ಬೆಳೆದಿರುವುದು ಖಾಸಗಿಯವರ ಪ್ರಯತ್ನದಿಂದ. ಸರ್ಕಾರ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ, ಖಾಸಗಿ ವಲಯವು ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಮತ್ತು ಐಟಿ ಕ್ಷೇತ್ರ ಬೆಳೆಯಬೇಕಾದರೆ, ವಿಶ್ವದರ್ಜೆಯ ರಸ್ತೆಗಳು, ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಅನಿವಾರ್ಯ. ಪ್ರತಿ ವರ್ಷ ಅಧಿಕಾರಿಗಳು ಬದಲಾದಾಗ ನೀತಿಗಳೂ ಬದಲಾಗಬಾರದು. ದೀರ್ಘಕಾಲೀನ, ಸುಸ್ಥಿರ ಅಭಿವೃದ್ಧಿ ನೀತಿಯನ್ನು ಸರ್ಕಾರ ರೂಪಿಸಬೇಕು. ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಕೇವಲ ಘೋಷಣೆಗೆ ಸೀಮಿತಗೊಳಿಸದೆ, ಉದ್ಯಮಿಗಳಿಗೆ ಕಿರುಕುಳವಿಲ್ಲದ ವಾತಾವರಣ ಸೃಷ್ಟಿಸಬೇಕು. ಕರಾವಳಿಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳುತ್ತಲೇ ಸ್ಥಳೀಯರಿಗೆ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಐವನ್ ಡಿಸೋಜಾ ಅವರ ಬೇಡಿಕೆಗಳು
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಕರಾವಳಿಯ ಅಭಿವೃದ್ಧಿಗೆ ಅಡ್ಡಿಯಾಗಿರುವ ಕಾನೂನು ತೊಡಕುಗಳ ಬಗ್ಗೆ ಗಮನ ಸೆಳೆದಿದ್ದಾರೆ. ಸಿಆರ್‌ಝಡ್ ನಿಯಮಗಳ ಜಟಿಲತೆ, ಸ್ಮಾರ್ಟ್ ಸಿಟಿಯ ಮಂಗಳಾ ಕಾರ್ನಿಶ್ ಯೋಜನೆಯ ವಿಳಂಬ ಮುಂತಾದ ವಿಷಯಗಳತ್ತ ಗಮನಹರಿಸಿದ್ದಾರೆ. ಸಚಿವ ಸಂಪುಟದ ಮುಂದೆ ಮಂಡಿಸಲು ಉದ್ದೇಶಿಸಿರುವ ಪ್ರಮುಖ ಅಂಶಗಳೆಂದರೆ, ಸಿಆರ್‌ಝಡ್ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಹಾಡಿ, ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು. ಮಂಗಳೂರು ನಗರವು ಅತಿಯಾದ ಜನಸಾಂದ್ರತೆಯಿಂದ ಕೂಡಿರುವುದರಿಂದ, ಹೊರವಲಯದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಬೇಕು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠದ ಅಗತ್ಯವಿದೆ. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡಬೇಕು. ಪ್ರವಾಸೋದ್ಯಮ ಬ್ರ್ಯಾಂಡಿಂಗ್ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

