
ಸಂಪುಟ ವಿಸ್ತರಣೆ ವೇಳೆ ಕೊನೆ ಕ್ಷಣ ಬದಲಾವಣೆ: 20ರ ಬದಲಿಗೆ 19 ಸಚಿವರ ಪದಗ್ರಹಣ
ಕಾಂಗ್ರೆಸ್ ಹೈಕಮಾಂಡ್ ಮೊದಲು ಪ್ರಕಟಿಸಿದ 20 ಸಚಿವರ ಪಟ್ಟಿಯಲ್ಲಿದ್ದ ಏಕೈಕ ಮಹಿಳಾ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡಲಾಯಿತು. ಹೀಗಾಗಿ 19 ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟ ವಿಸ್ತರಣೆಯು ನಿರೀಕ್ಷೆಯಂತೆ ಪ್ರಮಾಣವಚನ ಸ್ವೀಕಾರ ನಡೆದಿದ್ದು, ಕೊನೆಯ ಕ್ಷಣದ ಬದಲಾವಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯ ಮಹೂರ್ತದ ವೇಳೆಗೆ ಹೈಡ್ರಾಮಾ ನಡೆಯಿತು. ಕಾಂಗ್ರೆಸ್ ಹೈಕಮಾಂಡ್ ಮೊದಲು ಪ್ರಕಟಿಸಿದ 20 ಸಚಿವರ ಪಟ್ಟಿಯಲ್ಲಿದ್ದ ಏಕೈಕ ಮಹಿಳಾ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡಲಾಯಿತು. ಹೀಗಾಗಿ 19 ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನಕ್ಕೂ ಕೆಲವೇ ಗಂಟೆಗಳ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಗೌಪ್ಯ ಸಭೆಯು ಬದಲಾವಣೆಗೆ ಕಾರಣವಾಯಿತು ಎನ್ನಲಾಗಿದೆ. ಗಾಯತ್ರಿ ಶಾಂತೇಗೌಡ ಅವರು ಹೆಸರು ಬದಲಿಸುವಂತೆ ರಾಜ್ಯದ ನಾಯಕರು ವರಿಷ್ಠರ ಮೇಲೆ ಒತ್ತಡ ಹೇರಿದ್ದೇ ಈ ನಾಟಕೀಯ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಮಹಿಳೆಯರಲ್ಲಿ ಜಟಾಪಟಿ ?
ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೊರತೆಯಿಲ್ಲ. ಅದರಲ್ಲೂ ಮಹಿಳಾ ಸಚಿವ ಸ್ಥಾನಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ಅವರಂತಹ ಪ್ರಭಾವಿ ನಾಯಕಿಯರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಈ ಇಬ್ಬರು ನಾಯಕಿಯರ ಬೆಂಬಲಿಗರ ಆಕ್ರೋಶ ಮತ್ತು ಒತ್ತಡವನ್ನು ತಣಿಸಲು ಪಕ್ಷವು ಗಾಯತ್ರಿ ಶಾಂತೇಗೌಡ ಅವರನ್ನು ಬಲಿಕೊಟ್ಟಿತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಅಲ್ಲದೆ, ಸಂಸದ ಇ. ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರ ಪರವಾಗಿಯೂ ಲಾಬಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ತುಕಾರಾಂ ಅವರ ಬೆಂಬಲಿಗರು ಹೈಕಮಾಂಡ್ ಮಟ್ಟದಲ್ಲಿ ನಡೆಸಿದ ಲಾಬಿ ಮತ್ತು ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಚರ್ಚೆಗಳು ಕೊನೆಯ ಕ್ಷಣದಲ್ಲಿ ಗಾಯತ್ರಿ ಅವರ ಹೆಸರು ಕೈಬಿಡಲಾಯಿತು ಎನ್ನಲಾಗಿದೆ.
ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ದಶಕಗಳಿಂದ ಇದೆ. ಆದರೆ, ಈ ಬಾರಿ 20 ಮಂದಿಯ ಪಟ್ಟಿಯಲ್ಲಿ ಒಬ್ಬರೇ ಒಬ್ಬ ಮಹಿಳೆಯನ್ನು ನೇಮಿಸುವ ಅನಿವಾರ್ಯತೆ ಕಾಂಗ್ರೆಸ್‌ಗೆ ಇತ್ತು. ಆ ಹೆಸರನ್ನೂ ಕೊನೆಯ ಕ್ಷಣದಲ್ಲಿ ತೆಗೆಯುವ ಮೂಲಕ ಪಕ್ಷವು ಮಹಿಳಾ ಸಬಲೀಕರಣದ ವಿಷಯದಲ್ಲಿ ಹಿನ್ನಡೆ ಅನುಭವಿಸಿದೆ. ಗಾಯತ್ರಿ ಅವರಂತಹ ಪರಿಷತ್ ಸದಸ್ಯರಿಗೆ ಮಣೆ ಹಾಕುವ ಮೂಲಕ ಸಮುದಾಯದ ಸಮತೋಲನ ಕಾಯ್ದುಕೊಳ್ಳುವ ಹೈಕಮಾಂಡ್‌ನ ಪ್ರಯತ್ನಕ್ಕೆ ಸ್ಥಳೀಯ ನಾಯಕರ ಒಳ ರಾಜಕೀಯ ಅಡ್ಡಿಯಾಯಿತು. ಕೊನೆಕ್ಷಣದಲ್ಲಿ ನಡೆದ ಹೈಡ್ರಾಮಾದಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಮುಜುಗರಕ್ಕೀಡಾಗಿದ್ದಾರೆ. ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಬೇಕಿದ್ದ ಸಂದರ್ಭದಲ್ಲಿ ಸಚಿವರ ಪಟ್ಟಿಯಲ್ಲಿನ ಗೊಂದಲವು ಹೈಕಮಾಂಡ್‌ನ ಅಧಿಕಾರದ ಮೇಲೆ ರಾಜ್ಯ ನಾಯಕರ ಹಿಡಿತ ಹೇಗಿದೆ ಎಂಬುದನ್ನು ತೋರಿಸಿದೆ.
ಗಾಯತ್ರಿ ಶಾಂತೇಗೌಡ ಅವರ ಬೆಂಬಲಿಗರು ಮತ್ತು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಇತರ ನಾಯಕಿಯರನ್ನು ಹೇಗೆ ಸಮಾಧಾನಪಡಿಸಲಾಗುತ್ತದೆ ಎಂಬುದರ ಮೇಲೆ ಸರ್ಕಾರದ ಸ್ಥಿರತೆ ಅವಲಂಬಿತವಾಗಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಶಾಸಕರ ನಡುವೆ ಸಚಿವ ಸ್ಥಾನದ ಹಂಚಿಕೆಯಲ್ಲಿ ಅಸಮತೋಲನ ಉಂಟಾಗಿದ್ದು, ಈ ಗೊಂದಲ ಮುಂಬರುವ ದಿನಗಳಲ್ಲಿ ಆಂತರಿಕ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಲಿದೆ.
ಜಾತಿವಾರು ಪ್ರಾತಿನಿಧ್ಯ
ಹೈಕಮಾಂಡ್‌ನ ಲೆಕ್ಕಾಚಾರದ ಪ್ರಕಾರ ಈ ಪಟ್ಟಿಯು ಜಾತಿವಾರು ಪ್ರಾತಿನಿಧ್ಯ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ಬಿಂಬಿಸುತ್ತದೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್‌ನ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದವರು ಮತ್ತು ದಲಿತರು) ರಾಜಕಾರಣದ ಮುದ್ರೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.
ಸಚಿವ ಸಂಪುಟದ ಜಾತಿವಾರು ಲೆಕ್ಕಾಚಾರ ನೋಡುವುದಾದರೆ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯದ ಮಾನದಂಡಗಳನ್ನು ಪಾಲಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿಗೆ 4 ಸ್ಥಾನಗಳು ಲಭಿಸಿವೆ, ಪರಿಶಿಷ್ಟ ಪಂಗಡಕ್ಕೆ 2 ಸ್ಥಾನಗಳು ಹಿಂದುಳಿದ ವರ್ಗಗಳು 4 ಸ್ಥಾನಗಳು, ಲಿಂಗಾಯತ ಸಮುದಾಯಕ್ಕೆ 4 ಸ್ಥಾನಗಳು, ಒಕ್ಕಲಿಗ ಸಮುದಾಯಕ್ಕೆ 3 ಸ್ಥಾನಗಳು ಮುಸ್ಲಿಂ ಸಮುದಾಯಕ್ಕೆ 2 ಸ್ಥಾನಗಳು ಲಭಿಸಿವೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರ ಪಟ್ಟಿ
ಅಜಯ್ ಸಿಂಗ್, ಎಚ್.ಸಿ. ಬಾಲಕೃಷ್ಣ, ಕೆ.ಎಸ್. ಬಸವಂತಪ್ಪ, ಬಸವರಾಜ ರಾಯರಡ್ಡಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮಣ ಸವದಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಬಿ. ನಾಗೇಂದ್ರ, ಪಿ.ಎಂ. ನರೇಂದ್ರಸ್ವಾಮಿ, ಸಿ. ಪುಟ್ಟರಂಗಶೆಟ್ಟಿ, ಟಿ. ರಘುಮೂರ್ತಿ, ರಿಜ್ವಾನ್ ಅರ್ಷದ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಕೆ.ಎಂ. ಶಿವಲಿಂಗೇಗೌಡ, ಶಿವರಾಜ ತಂಗಡಗಿ, ವಿಜಯಾನಂದ ಕಾಶಪ್ಪನವರ ಮತ್ತು ಜಮೀರ್ ಅಹಮದ್ ಖಾನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಒಟ್ಟಾರೆ 20ರ ಪಟ್ಟಿಯಲ್ಲಿ 19 ಮಂದಿ ಮಾತ್ರ ಸಚಿವರಾಗುವ ಮೂಲಕ, ಪಕ್ಷವು ಒಂದು ಸ್ಥಾನವನ್ನು 'ಖಾಲಿ' ಇರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಯಾರಿಗೆ ಆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

