ಜಾಗತಿಕ ಹೂಡಿಕೆ, ವಿದೇಶಾಂಗ ವ್ಯವಹಾರಗಳ ಇಲಾಖೆ ಸ್ಥಾಪನೆಗೆ ಸಂಪುಟ ಒಪ್ಪಿಗೆ
x

ಜಾಗತಿಕ ಹೂಡಿಕೆ, ವಿದೇಶಾಂಗ ವ್ಯವಹಾರಗಳ ಇಲಾಖೆ ಸ್ಥಾಪನೆಗೆ ಸಂಪುಟ ಒಪ್ಪಿಗೆ

ವಿದೇಶಿ ಹೂಡಿಕೆದಾರರು ಬರುವಾಗ ಸಿಂಗಲ್ ವಿಂಡೋ ವ್ಯವಸ್ಥೆಯ ಮೂಲಕ ಶೀಘ್ರ ಅನುಮೋದನೆ ಪಡೆಯುವುದು, ಎನ್ಆರ್‌ಐ ಕಾರ್ಡ್ ವಿತರಣೆ ಮತ್ತು ವಿದೇಶಿ ನಿಯೋಗಗಳೊಂದಿಗೆ ಸಹಯೋಗ ಸಾಧಿಸುವುದಾಗಿದೆ.


Click the Play button to hear this message in audio format

ರಾಜ್ಯದ ಸಮಗ್ರ ಅಭಿವೃದ್ಧಿ, ಆಡಳಿತಾತ್ಮಕ ಸುಧಾರಣೆ ಮತ್ತು ಭೀಕರ ಬರಗಾಲದ ನಿರ್ವಹಣೆಯ ದೃಷ್ಟಿಯಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಹಲವು ಐತಿಹಾಸಿಕ ಮತ್ತು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಲು 'ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲು ತೀರ್ಮಾನಿಸಿರುವುದು ಸಭೆಯ ಅತ್ಯಂತ ಪ್ರಮುಖ ನಿರ್ಣಯಗಳಲ್ಲಿ ಒಂದಾಗಿದೆ.

ರಾಜ್ಯದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರ ಹೊಸ ಇಲಾಖೆಯನ್ನು ರೂಪಿಸುತ್ತಿದೆ. ಇದನ್ನು 'ಸಾಗರೋತ್ತರ ವ್ಯವಹಾರಗಳ ಇಲಾಖೆ' ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ. ವಿದೇಶಿ ಹೂಡಿಕೆದಾರರು ಬರುವಾಗ ಸಿಂಗಲ್ ವಿಂಡೋ ವ್ಯವಸ್ಥೆಯ ಮೂಲಕ ಶೀಘ್ರ ಅನುಮೋದನೆ ಪಡೆಯುವುದು, ಎನ್ಆರ್‌ಐ ಕಾರ್ಡ್ ವಿತರಣೆ ಮತ್ತು ವಿದೇಶಿ ನಿಯೋಗಗಳೊಂದಿಗೆ ಸಹಯೋಗ ಸಾಧಿಸುವುದಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಿಎಂ ಅಧ್ಯಕ್ಷತೆಯಲ್ಲಿ ಕೈಗಾರಿಕೆ, ಕೃಷಿ, ಆರೋಗ್ಯ, ಐಟಿ-ಬಿಟಿ ಸೇರಿದಂತೆ ಹಲವು ಸಚಿವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಹೂಡಿಕೆ ಪ್ರಸ್ತಾವನೆಗಳನ್ನು ಪರಿಶೀಲಿಸಲಿದೆ ಎಂದರು.

ಬರಗಾಲ, ವಿಶೇಷ ಅಧಿವೇಶನ

ರಾಜ್ಯದಲ್ಲಿ ಈ ವರ್ಷ ಎದುರಾಗಿರುವ ಭೀಕರ ಬರಗಾಲದ ಕುರಿತು ವಿಸ್ತೃತ ಚರ್ಚೆ ನಡೆಸಲು ಸೆ.21, 22 ಮತ್ತು 23ರಂದು ವಿಧಾನ ಮಂಡಲದ ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಮಳೆ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಮೇವು ಪೂರೈಕೆ ಮತ್ತು ಕೇಂದ್ರ ಸರ್ಕಾರದಿಂದ ಸಿಗಬೇಕಾದ ಪರಿಹಾರದ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಅಲ್ಲದೇ, ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ. ಕೆ. ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯ ಕರಡು ಅಧಿಸೂಚನೆ ಕುರಿತು ವಿಶೇಷ ಚರ್ಚೆ ನಡೆಸಿ, ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗುವುದು ಎಂದು ಹೇಳಿದರು.

ರಾಜಕೀಯ ವ್ಯವಹಾರಗಳು, ಅಧಿಕೃತ ವಕ್ತಾರರ ನೇಮಕ

ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ತರಲು ಸಂಪುಟ ಸಭೆ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮಹತ್ವದ ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಚರ್ಚಿಸಲು ಸಿಎಂ ಅಧ್ಯಕ್ಷತೆಯಲ್ಲಿ 10 ಸಚಿವರನ್ನೊಳಗೊಂಡ ರಾಜಕೀಯ ವ್ಯವಹಾರಗಳ ಸಚಿವ ಸಮಿತಿ ರಚಿಸಲಾಗಿದೆ. ಇನ್ಮುಂದೆ ಸರ್ಕಾರದ ಪರವಾಗಿ ಅಧಿಕೃತ ಹೇಳಿಕೆ ನೀಡಲು 8 ಮಂದಿ ಸಚಿವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ. ಇದರಿಂದ ಗೊಂದಲಗಳಿಗೆ ತೆರೆ ಬೀಳಲಿದೆ.

ಮೂಲಸೌಕರ್ಯ, ಅಭಿವೃದ್ಧಿ ಯೋಜನೆಗಳು

ರಾಜ್ಯದ ವಿವಿಧ ಭಾಗಗಳ ಅಭಿವೃದ್ಧಿಗಾಗಿ ಸಂಪುಟ ಸಭೆ ಭಾರಿ ಅನುದಾನವನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಇ-ಡ್ರೈವ್ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಜಿಸಿಸಿ ಮಾದರಿಯಲ್ಲಿ ಸೇರ್ಪಡೆಗೊಳಿಸಲು ಅನುಮೋದನೆ ನೀಡಲಾಗಿದೆ. ಇದರ ನಿರ್ವಹಣಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 249 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಚಿಂತಾಮಣಿ ನಗರದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ಹಾಗೂ ಮದ್ದೂರಿನಲ್ಲಿ 137.92 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಲಾಗಿದೆ.

ಆರೋಗ್ಯ, ತುರ್ತು ಸೇವೆಗಳ ಬಲವರ್ಧನೆ

ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಮಹತ್ತರ ಬದಲಾವಣೆಗಳಿಗೆ ನಾಂದಿ ಹಾಡಿದೆ. ರಾಜ್ಯದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ, ಐಸಿಯು ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಗಾಗಿ 46 ಕೋಟಿ ರೂ. ಬಿಡುಗಡೆ. ಇದರಡಿ 100 ಬೇಸಿಕ್ ಲೈಫ್ ಸಪೋರ್ಟ್ ಅಂಬುಲೆನ್ಸ್ ಹಾಗೂ ಸಿಟಿ ಸ್ಕ್ಯಾನ್ ಯಂತ್ರಗಳ ಖರೀದಿ. 182 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 46.72 ಕೋಟಿ ರೂ. ವೆಚ್ಚದಲ್ಲಿ ಐಸಿಟಿ ಉಪಕರಣಗಳ ಅಳವಡಿಕೆ. ರಾಜ್ಯದ ಎಲ್ಲಾ ಆಸ್ಪತ್ರೆಗಳ ರೋಗಿಗಳ ದತ್ತಾಂಶವನ್ನು ಏಕೀಕರಣಗೊಳಿಸಿ ಒಂದೇ ವೇದಿಕೆಗೆ ತರುವುದು ಇದರ ಉದ್ದೇಶವಾಗಿದೆ.

ಇತರ ಪ್ರಮುಖ ನಿರ್ಣಯಗಳು

* ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕಿಟ್ ಖರೀದಿಗಾಗಿ 25 ಕೋಟಿ ರೂ. ಮಂಜೂರು

* ಬಳ್ಳಾರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಒಪ್ಪಿಗೆ

* ಪ್ರಾದೇಶಿಕ ಸಂಪರ್ಕ ಯೋಜನೆ RCS-UDAN 6.0ರಲ್ಲಿ ಭಾಗವಹಿಸಲು ಸರ್ಕಾರ ಒಪ್ಪಿಗೆ ನೀಡಿದೆ

* ಜಿಲ್ಲಾ ಖನಿಜ ಪ್ರತಿಷ್ಠಾನ ನಿಯಮಗಳಲ್ಲಿ ತಿದ್ದುಪಡಿ ತಂದು, ಸಿಎಂ ನೇತೃತ್ವದ ಸ್ಥಾಯಿ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ.

Read More
Next Story