ಮಹದೇವಪ್ಪ ಅವರ ಮನೆ ಖಾಲಿ ಮಾಡುವಂತೆ ಯಾವುದೇ ಒತ್ತಡ ಹೇರಿಲ್ಲ: ಸಚಿವ ಬೈರತಿ ಸುರೇಶ್
x

ಮಹದೇವಪ್ಪ ಅವರ ಮನೆ ಖಾಲಿ ಮಾಡುವಂತೆ ಯಾವುದೇ ಒತ್ತಡ ಹೇರಿಲ್ಲ: ಸಚಿವ ಬೈರತಿ ಸುರೇಶ್

"ನಾನು ಮನೆ ಕೇಳಿದಾಗ, ಸಿಎಂ ಅವರು ಖಾಲಿ ಇದ್ದ ಈ ಮನೆಯನ್ನು ನನಗೆ ನೀಡಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಉದ್ದೇಶಗಳಿಲ್ಲ" ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.


Click the Play button to hear this message in audio format

ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೊಂದಿಗೆ ಸರ್ಕಾರಿ ನಿವಾಸ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ವರದಿಗಳನ್ನು ಸಾರಿಗೆ ಸಚಿವ ಬೈರತಿ ಸುರೇಶ್ ತಳ್ಳಿಹಾಕಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, "ಡಾ. ಮಹದೇವಪ್ಪ ಅವರು ನನಗೆ ಮಾರ್ಗದರ್ಶಕರು, ಅವರೊಂದಿಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ರೆಸೆಂಟ್ ರಸ್ತೆಯ ನಂಬರ್ 2ರ ಸರ್ಕಾರಿ ಬಂಗಲೆಯ ಹಂಚಿಕೆ ಕುರಿತು ಮಾತನಾಡಿದ ಬೈರತಿ ಸುರೇಶ್, "ಈ ಬಂಗಲೆಯನ್ನು ನನಗೆ ಹಂಚಿಕೆ ಮಾಡುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿವೇಚನೆಗೆ ಬಿಟ್ಟ ವಿಷಯ. ನಾನು ಮನೆ ಕೇಳಿದಾಗ, ಸಿಎಂ ಅವರು ಖಾಲಿ ಇದ್ದ ಈ ಮನೆಯನ್ನು ನನಗೆ ನೀಡಿದ್ದಾರೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಉದ್ದೇಶಗಳಿಲ್ಲ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ನಿಯಮಗಳ ಪ್ರಕಾರ ಮನೆಗಳನ್ನು ನವೀಕರಿಸುತ್ತದೆ. ಮನೆ ನವೀಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈ ಮನೆ ಖಾಲಿ ಮಾಡುವಂತೆ ಮಹದೇವಪ್ಪ ಅವರಿಗೆ ಒತ್ತಡ ಹೇರಿದ್ದೇನೆ ಎಂಬುದು ತಪ್ಪು ಮಾಹಿತಿ. ಆ ಮನೆಯನ್ನು ಈಗಾಗಲೇ ಅವರು ಕಳೆದ ತಿಂಗಳ 15ರಂದೇ ಖಾಲಿ ಮಾಡಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ನೀಡಿದ್ದಾರೆ. ಅವರು ಮನೆ ಖಾಲಿ ಮಾಡಿದ ನಂತರವಷ್ಟೇ ಇಲಾಖೆಯವರು ನವೀಕರಣ ಕಾರ್ಯವನ್ನು ಆರಂಭಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

"ನಾನು ಅವರ ಮಗನ ಸಮಾನ"

ಮಹದೇವಪ್ಪ ಅವರು ನಮ್ಮ ನಾಯಕರು. ಅವರ ಮನೆಗೆ ನಾನು ಹಲವು ಬಾರಿ ಭೇಟಿ ನೀಡಿದ್ದೇನೆ. ಅವರು ನನ್ನ ಸ್ನೇಹಿತರಿಗಿಂತ ಮೇಲ್ಪಟ್ಟವರು, ನನ್ನ ತಂದೆಯ ಸಮಾನರಾದವರು. ಅವರೊಂದಿಗೆ ಜಗಳವಾಡುವಂತಹ ಅಥವಾ ಅಸಮಾಧಾನ ಪಟ್ಟುಕೊಳ್ಳುವಂತಹ ಪರಿಸ್ಥಿತಿ ನಮಗಿಲ್ಲ. ಏನೋ ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿರಬಹುದು. ನನಗೆ ಈ ಮನೆ ಸಿಕ್ಕಿರುವುದು ಹೌದು. ಆದರೆ, ಮಹದೇವಪ್ಪಣ್ಣನವರಿಗೆ ಈ ಮನೆಯ ಮೇಲೆ ವ್ಯಾಮೋಹವಿದ್ದರೆ ಅಥವಾ ಅವರಿಗೆ ಅಲ್ಲಿ ಇರಲು ಇಷ್ಟವಿದ್ದರೆ, ಮುಖ್ಯಮಂತ್ರಿಗಳ ಅನುಮತಿ ಪಡೆದು ಅವರು ಇನ್ನೂ ಒಂದೂಮುಕ್ಕಾಲು ವರ್ಷ ಅದೇ ಮನೆಯಲ್ಲಿ ಮುಂದುವರಿಯಲಿ. ಅದಕ್ಕೆ ನನ್ನ ಯಾವುದೇ ತಕರಾರಿಲ್ಲ, ನನಗೆ ಅಂತಹ ಅನಿವಾರ್ಯತೆ ಏನಿಲ್ಲ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ

ಇತ್ತೀಚೆಗೆ ನಡೆದ ಹಿಂದುಳಿದ ಜಾತಿ ವರ್ಗಗಳ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, "ಆ ಕಾರ್ಯಕ್ರಮವನ್ನು ಆಯೋಜಿಸಿದ್ದು ನಾನಲ್ಲ, ಹಿಂದುಳಿದ ವರ್ಗಗಳ ಒಕ್ಕೂಟದ ಸದಸ್ಯರು. ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನನ್ನನ್ನು ಮತ್ತು ಸಿದ್ದರಾಮಯ್ಯನವರನ್ನು ಆಹ್ವಾನಿಸಲಾಗಿತ್ತು. ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಮಾವೇಶಕ್ಕೆ ಯಾರನ್ನು ಕರೆಯಬೇಕು, ಯಾರನ್ನು ಕರೆಯಬಾರದು ಎಂಬುದನ್ನು ಒಕ್ಕೂಟದವರೇ ನಿರ್ಧರಿಸುತ್ತಾರೆ. ಅದರಲ್ಲಿ ಸಚಿವರಾದ ನಮಗೆ ಯಾವುದೇ ಹಸ್ತಕ್ಷೇಪ ಇರುವುದಿಲ್ಲ" ಎಂದರು.

Read More
Next Story