
ವರಮಹಾಲಕ್ಷ್ಮಿ ಹಬ್ಬದ ಬಂಪರ್ ಗಿಫ್ಟ್: ಬಾಕಿ ವೇತನದ 170 ಕೋಟಿ ರೂ. ಬಿಡುಗಡೆ
ಜಾರಿಯಲ್ಲಿದ್ದ ವೇತನ ಪರಿಷ್ಕರಣೆಯನ್ನು ಇನ್ನೂ 12 ತಿಂಗಳುಗಳ ಕಾಲ ವಿಸ್ತರಿಸಬೇಕು. ನಾಲ್ಕು ವರ್ಷಕ್ಕೊಮ್ಮೆ ಕಡ್ಡಾಯವಾಗಿ ವೇತನ ಪರಿಷ್ಕರಣೆ ನಡೆಸಬೇಕು ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ.
ಸಾರಿಗೆ ಇಲಾಖೆಯ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಹೊಸ್ತಿಲಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಸಾರಿಗೆ ನಿಗಮಗಳ ನೌಕರರ ಬಾಕಿ ವೇತನದ ಪೈಕಿ 170 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಿರುವುದಾಗಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ 15ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ, ಸಚಿವರು ನೌಕರರ ಹಿತದೃಷ್ಟಿಯಿಂದ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
2025ರಲ್ಲಿ ಮಾಡಲಾದ ವೇತನ ಪರಿಷ್ಕರಣೆಯ ಹಿನ್ನೆಲೆಯಲ್ಲಿ ನೌಕರರಿಗೆ ಒಟ್ಟು 1,221 ಕೋಟಿ ರೂಪಾಯಿಗಳನ್ನು ಪಾವತಿಸಬೇಕಿತ್ತು. ಈ ಪೈಕಿ ಈಗಾಗಲೇ 450 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಇನ್ನೂ ಬಾಕಿ ಇರುವ 821 ಕೋಟಿಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ ನಂತರ, ತುರ್ತಾಗಿ 170 ಕೋಟಿ ರೂಪಾಯಿ ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಈ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದ್ದು, ನೌಕರರಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ಕಾರ್ಮಿಕರ ಸಂಘಟನೆಗಳ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ
ಸಭೆಯಲ್ಲಿ ಕಾರ್ಮಿಕ ಸಂಘಟನೆಗಳು ಪ್ರಮುಖವಾದ ಹಲವು ಬೇಡಿಕೆಗಳನ್ನು ಸಚಿವರ ಮುಂದಿಟ್ಟಿವೆ. ಈ ಹಿಂದೆ ಜಾರಿಯಲ್ಲಿದ್ದ ವೇತನ ಪರಿಷ್ಕರಣೆಯನ್ನು ಇನ್ನೂ 12 ತಿಂಗಳುಗಳ ಕಾಲ ವಿಸ್ತರಿಸಬೇಕು. ನಾಲ್ಕು ವರ್ಷಕ್ಕೊಮ್ಮೆ ಕಡ್ಡಾಯವಾಗಿ ವೇತನ ಪರಿಷ್ಕರಣೆ ನಡೆಸಬೇಕು. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕಾರ್ಮಿಕ ಸಂಘಟನೆಗಳ ಚುನಾವಣೆಗಳನ್ನು ಕೂಡಲೇ ನಡೆಸಬೇಕು. ಈ ಎಲ್ಲ ಬೇಡಿಕೆಗಳ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇವುಗಳ ಜಾರಿಗೆ ಆರ್ಥಿಕ ಇಲಾಖೆಯ ಅನುಮೋದನೆ ಅಗತ್ಯವಿರುವುದರಿಂದ, ವಿಧಾನಮಂಡಲ ಅಧಿವೇಶನದ ನಂತರ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸಿ, ಸಚಿವ ಸಂಪುಟದ ಮುಂದೆ ಇಟ್ಟು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಆರೋಗ್ಯ ವಿಮೆ, ನಿವೃತ್ತ ನೌಕರರಿಗೆ ಉಚಿತ ಪ್ರಯಾಣ
ನೌಕರರ ಕಲ್ಯಾಣದ ದೃಷ್ಟಿಯಿಂದ ಸಚಿವರು ಎರಡು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ಈಗಾಗಲೇ ಜಾರಿಯಲ್ಲಿರುವ ಆರೋಗ್ಯ ವಿಮಾ ಯೋಜನೆಯನ್ನು ಇನ್ನು ಮುಂದೆ ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ನೌಕರರಿಗೂ ಅನ್ವಯಿಸಲಾಗುವುದು. ಇದು ನೌಕರರ ಕುಟುಂಬಗಳಿಗೆ ಭಾರಿ ಆರ್ಥಿಕ ಭದ್ರತೆಯನ್ನು ಒದಗಿಸಲಿದೆ. ಇದುವರೆಗೂ ನಿವೃತ್ತ ನೌಕರರಿಗೆ ವಾರ್ಷಿಕ 500 ಶುಲ್ಕ ಪಡೆದು ಬಸ್ ಪಾಸ್ ನೀಡಲಾಗುತ್ತಿತ್ತು. ಇನ್ನು ಮುಂದೆ ಈ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿ, ನಿವೃತ್ತ ನೌಕರರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಪ್ರಯಾಣ ದರ ಹೆಚ್ಚಳದ ಸುಳಿವು
ಸಾರಿಗೆ ನಿಗಮಗಳ ನಷ್ಟದ ಬಗ್ಗೆ ಮಾತನಾಡಿದ ಸಚಿವ ಬೈರತಿ ಸುರೇಶ್, ತೈಲೋತ್ಪನ್ನಗಳ ಬೆಲೆ ಕಳೆದ ಕೆಲವು ವರ್ಷಗಳಲ್ಲಿ 9 ಬಾರಿ ಏರಿಕೆಯಾಗಿದ್ದರೂ, ಸಾರಿಗೆ ನಿಗಮಗಳು ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಇದರಿಂದ ನಿಗಮಗಳಿಗೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ವರದಿಯನ್ನು ಆಧರಿಸಿ, ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಪ್ರಯಾಣ ದರವನ್ನು ವೈಜ್ಞಾನಿಕವಾಗಿ ಹೆಚ್ಚಿಸಲು ಚಿಂತನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಚಾಲಿತ ಬಸ್‌ಗಳ ಸೇವೆಯನ್ನು ರದ್ದು ಮಾಡಲಾಗುವುದು ಎಂಬ ವದಂತಿಗಳಿಗೆ ಸಚಿವರು ತೆರೆ ಎಳೆದಿದ್ದಾರೆ. "ಎಲೆಕ್ಟ್ರಿಕ್ ಬಸ್‌ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಕೇಂದ್ರ ಸರ್ಕಾರದ ಪಿಎಂ ಯೋಜನೆಯಡಿ ಪೂರ್ವ ನಿಗದಿಯಂತೆ 4,500 ಇವಿ ಬಸ್‌ಗಳನ್ನು ಪಡೆಯಲಾಗುವುದು" ಎಂದು ಹೇಳಿದ್ದಾರೆ. ಶಕ್ತಿ ಯೋಜನೆಯಡಿ ಬರುವ ಆದಾಯದ ಹಣವನ್ನು ಹಂತ ಹಂತವಾಗಿ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.

