
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.
ದ್ವೇಷ ಭಾಷಣ ಮಸೂದೆ ಪ್ರಜಾಪ್ರಭುತ್ವಕ್ಕೆ ಮಾರಕ: ಸಿಎಂ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ ಈ ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕ ಎಂದು ಒಡೆಯಲು ಮುಂದಾಗಿದ್ದರು. ಈಗ ತಮ್ಮ ಲೋಪ ಮುಚ್ಚಿ ಹಾಕಿಕೊಳ್ಳಲು ರಾಜ್ಯವನ್ನು ಕೇಂದ್ರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ನೀಡದೇ ರಾಜ್ಯ ಸರ್ಕಾರ ತರಾತುರಿಯಲ್ಲಿ ದ್ವೇಷ ಭಾಷಣಕ್ಕೆ ಅಂಗೀಕಾರ ಪಡೆದಿತ್ತು. ಈ ಮಸೂದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆಯಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಅವರು, ಈ ಮಸೂದೆಯ ಪರಿಣಾಮವಾಗಿ ತರೀಕೆರೆಯಲ್ಲಿ ಹಿಂದೂ ಕಾರ್ಯಕರ್ತ ವಿಕಾಸ್ ಪುತ್ತೂರು ಭಾಷಣವನ್ನೇ ಆರಂಭಿಸಿರಲಿಲ್ಲ. ಅಲ್ಲಿ ಪೊಲೀಸ್ ಅಧಿಕಾರಿಗಳು ಹೋಗಿ ನೋಟಿಸ್ ಕೊಟ್ಟು, ನೀವೇನಾದರೂ ಮಾತನಾಡಿದರೆ ಬಂಧಿಸುವುದಾಗಿ ಬೆದರಿಸಿದ್ದರು. ದಕ್ಷಿಣ ಕನ್ನಡದಲ್ಲಿ ಬಜರಂಗದಳದ ಕಾರ್ಯಕರ್ತ ಶರಣ್ ಪಂಪ್ವೆಲ್ ಗಡಿ ದಾಟದಂತೆ ಕಡಿವಾಣ ಹಾಕಿದ್ದಾರೆ. ಬೆಂಗಳೂರಿನಲ್ಲಿ ಪುನೀತ್ ಕೆರೆಹಳ್ಳಿ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಪೊಲೀಸರು ಮಾಡುವ ಕೆಲಸ ಮಾಡಿದರೆ, ಅವರನ್ನೂ ಬಂಧಿಸಿದ್ದಾರೆ ಎಂದು ಆಕ್ಷೇಪಿಸಿದರು.
ಅಕ್ರಮವಾಗಿ ಗೋ ಸಾಗಣೆ ಮಾಡುವ ದೇಶದ್ರೋಹಿಗಳನ್ನು ಈಗಿನ ಕಾನೂನಿನಡಿ ವಾಹನ ವಶಕ್ಕೆ ಪಡೆದು ಗೋ ಸಾಗಾಟಗಾರರನ್ನು ಒಳಗೆ ಹಾಕುತ್ತಿದ್ದರು. ಆದರೆ ಸರ್ಕಾರವು ಬಂಧಿತರಿಗೆ ಸ್ಟೇಷನ್ ಜಾಮೀನು ಕೊಡುವ ಮಸೂದೆ ತರಲು ಮುಂದಾಗಿತ್ತು ಎಂದು ದೂರಿದರು.
ದಕ್ಷಿಣ ಭಾರತದ ನಾಯಕರಾಗಲು ಹೊರಟ ಸಿಎಂ
ಸಿಎಂ ಸಿದ್ದರಾಮಯ್ಯ ಈ ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕ ಎಂದು ಒಡೆಯಲು ಮುಂದಾಗಿದ್ದರು. ಈಗ ತಮ್ಮ ಲೋಪ ಮುಚ್ಚಿ ಹಾಕಿಕೊಳ್ಳಲು ರಾಜ್ಯವನ್ನು ಕೇಂದ್ರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ ಹಾಗೂ ದಕ್ಷಿಣ ರಾಜ್ಯಗಳಿಗೂ ಅನ್ಯಾಯ ಮಾಡಿದೆ ಎಂದು ಹೇಳುತ್ತಾ ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ. ಇಂತಹ ವಿಭಜಕ ಮಾನಸಿಕ ಸ್ಥಿತಿ ಸಿದ್ದರಾಮಯ್ಯನವರ ದೃಷ್ಟಿಯಿಂದಲೂ ಒಳ್ಳೆಯದಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದರು.
ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ಗುರಿ
ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಪ್ರತಿಭಟನೆ ಮಾಡಿ ಬಂದಿದ್ದರು. ಹಣಕಾಸು ಸಚಿವರೂ ಆಗಿರುವ ಸಿಎಂ ರಾಜ್ಯದಲ್ಲಿ ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆ ಗುರಿಯನ್ನು 40 ಸಾವಿರ ಕೋಟಿಗೆ ಏರಿಸಿದ್ದಾರಲ್ಲವೇ? ನಿಮ್ಮ ಕೃಪಾಕಟಾಕ್ಷದಿಂದ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ. ನಾಳೆ ಇವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಜನಹಿತ ಬಜೆಟ್
ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿಸಿಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಅಸ್ಪಷ್ಟತೆಯಿಂದ ಸ್ಪಷ್ಟತೆ ಕಡೆಗೆ, ಆಡಂಬರದಿಂದ ಸುಧಾರಣೆಯತ್ತ, ಜನಪ್ರಿಯತೆಗಿಂತ ಜನಹಿತ ಮುಖ್ಯ ಎಂಬುದನ್ನು ಮತ್ತೊಮ್ಮೆ ಅವರು ಋಜುವಾತು ಮಾಡಿದ್ದಾರೆ. ಜಾಗತಿಕ ಪರಿಸ್ಥಿತಿಯನ್ನೂ ನಾವು, ನೀವೆಲ್ಲರೂ ಗಮನಿಸಬೇಕಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತದ ವಿರುದ್ಧ ಸಾರಿರುವ ವಾಣಿಜ್ಯ ಸಮರಕ್ಕೆ ಎದೆಗುಂದದೆ 2047ಕ್ಕೆ ವಿಕಸಿತ ಭಾರತ ಆಗಬೇಕೆಂಬ ಪ್ರಧಾನ ಮಂತ್ರಿಯವರ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಈ ಬಜೆಟ್‌ನಲ್ಲಿ ನೀಡಲಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಸೆಮಿ ಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಆರ್ಥಿಕ ಶಿಸ್ತು ಕಾಪಾಡುವ ಮಹತ್ವದ ಜವಾಬ್ದಾರಿ ಹಣಕಾಸು ಸಚಿವರ ಮೇಲೆ ಇತ್ತು. ಆ ಪ್ರಥಮ ಆದ್ಯತೆ ಇಟ್ಟುಕೊಂಡು, ಹಣಕಾಸು ಕೊರತೆ ಶೇ 4.4ಕ್ಕೆ ತಂದಿರುವುದು ಇದಕ್ಕೆ ಸಾಕ್ಷಿ ಎಂದು ತಿಳಿಸಿದರು.
ರಾಜ್ಯದ ತೆರಿಗೆ ಪಾಲು ಶೇ. 4.13 ಶೇಕಡಾಕ್ಕೆ ಹೆಚ್ಚಳ
ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ತೆಂಗು ಬೆಳೆಗಾರರಿದ್ದಾರೆ. ಅದೇ ರೀತಿ ಗೋಡಂಬಿ, ಕೊಕ್ಕೊ, ಮೀನು ಸಾಕಣೆ ಮಾಡುವವರು, ಶ್ರೀಗಂಧ ಬೆಳೆಗಾರರಿಗೆ ಈ ಬಜೆಟ್ ಅನುಕೂಲ ಕಲ್ಪಿಸಿದೆ. ಇದು ಅತ್ಯಂತ ಸ್ವಾಗತಾರ್ಹ. ಕಳೆದ 2.5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ಪದೇ ಪದೇ ಟೀಕಿಸುತ್ತಲೇ ಇದೆ. 16ನೇ ಹಣಕಾಸು ಆಯೋಗವು ಜಿಡಿಪಿ ಕೊಡುಗೆಗೆ ಶೇ. 10 ರಷ್ಟು ಸುಧಾರಣೆ ಮೊತ್ತ ಪ್ರಕಟಿಸಿದೆ. ಇದರಿಂದ ನಮ್ಮ ರಾಜ್ಯದ ತೆರಿಗೆ ಪಾಲು ಶೇ 3.65 ರಿಂದ ಶೇ. 4.13 ಕ್ಕೆ ಹೆಚ್ಚಾಗಿದೆ. ಪ್ರತಿ ವರ್ಷ ಕರ್ನಾಟಕಕ್ಕೆ 7,387 ಕೋಟಿ ರೂ. ಹೆಚ್ಚುವರಿಯಾಗಿ ಲಭಿಸಲಿದೆ. 5 ವರ್ಷಕ್ಕೆ ಹೆಚ್ಚುವರಿಯಾಗಿ 63,050 ಕೋಟಿ ರೂ. ದೊರಕಲಿದೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯದಲ್ಲಿ ಕ್ರಾಂತಿಕಾರಿ ನಿರ್ಧಾರ
2014 ಪೂರ್ವದಲ್ಲಿ ಹಿಂದಿನ ಯುಪಿಎ ಸರ್ಕಾರವದ್ದಾಗ ದೇಶದಲ್ಲಿ ಮೂಲಭೂತ ಸೌಕರ್ಯ ನಿರ್ಮಿಸಲು ಸುಮಾರು 2 ಲಕ್ಷ ಕೋಟಿ ಹಣ ನೀಡುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ ಸರ್ಕಾರ ಬಂದ ಬಳಿಕ 12 ಲಕ್ಷ ಕೋಟಿ ರೂಗಳನ್ನು ದೇಶದ ಮೂಲಭೂತ ಸೌಕರ್ಯಕ್ಕೆ ನೀಡಲಾಗಿದೆ. ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ ಈ ರೀತಿ ಅಭಿವೃದ್ಧಿಗೆ ಹೆಚ್ಚು ಹಣ ಮೀಸಲಿಟ್ಟಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲು ಪೂರಕ ನಿರ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.
ರೈತರ ಆದಾಯ ದ್ವಿಗುಣ
ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದೆ. ಆಹಾರ, ವಾಣಿಜ್ಯ ಮತ್ತು ಮೀನುಗಾರಿಕಾ ಕ್ಷೇತ್ರಕ್ಕೆ ಶೇ. 6ರಷ್ಟು ಹೆಚ್ಚುವರಿ ಹಣಕಾಸಿನ ಕೊಡುಗೆಯನ್ನು ಈ ಬಜೆಟ್‍ನಲ್ಲಿ ನೀಡಿದ್ದಾರೆ. ಈ ದೇಶ ಅಭಿವೃದ್ಧಿ ಆಗಬೇಕೆಂದರೆ, ಬಡವರು, ರೈತರು, ಮಹಿಳೆಯರು ಮತ್ತು ಯುವಜನತೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಉದ್ಯಮ ಸ್ಥಾಪನೆಗಾಗಿ, ಅವರನ್ನು ಸಮಾಜದ ಮುಂಚೂಣಿಗೆ ತರಲು ʼಶೀ ಮಾರ್ಟ್ʼ ಮೂಲಕ ಮಹಿಳಾ ಉದ್ಯಮ ಮತ್ತು ಉದ್ಯೋಗ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು.
ಮಹಿಳಾ ಶಿಕ್ಷಣಕ್ಕೆ ಒತ್ತು
ಪ್ರತಿ ಜಿಲ್ಲೆಗೊಂದು ಮಹಿಳಾ ಹಾಸ್ಟೆಲ್ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಹೇಳುವ ಮೂಲಕ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಉನ್ನತ ಶಿಕ್ಷಣವನ್ನು ಆದ್ಯತಾ ವಲಯವೆಂದು ಪರಿಗಣಿಸಿ ಶೇ. 13ರಷ್ಟು ಹೆಚ್ಚಿನ ಹಣಕಾಸಿನ ನೆರವನ್ನು ಬಜೆಟ್‍ನಲ್ಲಿ ಘೋಷಿಸಿದ್ದು ಸ್ವಾಗತಾರ್ಹ. ಹೈಸ್ಪೀಡ್ ರೈಲುಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್- ಬೆಂಗಳೂರು, ಚೆನ್ನೈ- ಬೆಂಗಳೂರು ಇವೆರಡು ಹೈಸ್ಪೀಡ್ ರೈಲುಗಳನ್ನು ಘೋಷಿಸಿದ್ದಾರೆ. ಇದರಿಂದ ಅತಿ ಹೆಚ್ಚು ತೆರಿಗೆ ಕೊಡುವ ಬೆಂಗಳೂರಿಗೆ ಇನ್ನೂ ಹೆಚ್ಚು ಉದ್ಯಮಗಳು ಬರಲು ಅವಕಾಶವಾಗಲಿದೆ ಎಂದರು.

