ಚುನಾವಣೆ ಘೋಷಣೆಯಾದರೆ 25 ಶಾಸಕರು ಬಿಜೆಪಿ ಸೇರ್ಪಡೆ: ಬಿ.ವೈ. ವಿಜಯೇಂದ್ರ ಭವಿಷ್ಯ
x

ಚುನಾವಣೆ ಘೋಷಣೆಯಾದರೆ 25 ಶಾಸಕರು ಬಿಜೆಪಿ ಸೇರ್ಪಡೆ': ಬಿ.ವೈ. ವಿಜಯೇಂದ್ರ ಭವಿಷ್ಯ

" ಕಾಂಗ್ರೆಸ್‌ನ ಸಚಿವರು ಮತ್ತು ಶಾಸಕರು ಬಿಜೆಪಿ ಸೇರಲು ನಮ್ಮ ಕಡೆಯಿಂದ ಗಾಳ ಹಾಕುವ ಅಗತ್ಯವಿಲ್ಲ, ಅವರೇ ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ" ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.


Click the Play button to hear this message in audio format

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಭಿನ್ನಮತ ಉಲ್ಬಣಿಸಿದ್ದು, ಚುನಾವಣೆ ಘೋಷಣೆಯಾದರೆ ಸಚಿವರು ಸೇರಿದಂತೆ 20 ರಿಂದ 25 ಮಂದಿ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಚಿವರು ಮತ್ತು ಶಾಸಕರು ಬಿಜೆಪಿ ಸೇರಲು ನಮ್ಮ ಕಡೆಯಿಂದ ಗಾಳ ಹಾಕುವ ಅಗತ್ಯವಿಲ್ಲ, ಅವರೇ ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ" ಎಂದರು. ಈ ಮೂಲಕ ಕಾಂಗ್ರೆಸ್‌ನಲ್ಲಿದ್ದ ಅತೃಪ್ತಿಯನ್ನು ಬಟಾಬಯಲು ಮಾಡಿದ್ದಾರೆ. ಚುನಾವಣೆ ಘೋಷಣೆಯಾದರೆ ಕಾಂಗ್ರೆಸ್‌ನ ದೊಡ್ಡ ಮಟ್ಟದ ಶಾಸಕರು ಪಕ್ಷ ಬಿಡಲು ಸಿದ್ಧರಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದ ಸಚಿವರು ಅವರ ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅಲ್ಲದೇ, ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆ ಎಂದು ಆರೋಪಿಸಿದರು.

ರಾಜಕೀಯ 'ವ್ಯಭಿಚಾರ'ವಾಗಿ ಪರಿವರ್ತನೆಯಾದ ಸ್ಟಿಂಗ್ ಆಪರೇಷನ್

ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, "ಸ್ಟಿಂಗ್ ಮಾಡುವುದು ರಾಜಕೀಯ ವ್ಯಭಿಚಾರ ಇದ್ದ ಹಾಗೆ" ಎಂದು ಕಿಡಿಕಾರಿದ್ದಾರೆ. ರಾಜ್ಯದ ರಾಜಕಾರಣವು ಕೀಳುಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ. ಯಾರು ಯಾರ ಮೇಲೆ ಸ್ಟಿಂಗ್ ಮಾಡಿದ್ದಾರೆ ಮತ್ತು ಆ ಮೂಲಕ ಸಿಎಂ ಪಟ್ಟಕ್ಕೇರಲು ಅಥವಾ ಸಚಿವ ಸ್ಥಾನ ಪಡೆಯಲು ಯಾರು ಪ್ರಯತ್ನಿಸುತ್ತಿದ್ದಾರೆ ಎಂಬುದು ಸದ್ಯದ ಚರ್ಚೆಯ ವಿಷಯವಾಗಿದೆ. ಇದು ರಾಜ್ಯದ ಘನತೆಗೆ ಶೋಭೆ ತರುವಂತದ್ದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬರ ಪರಿಹಾರದಲ್ಲಿ ನಿರ್ಲಕ್ಷ್ಯ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ ಎಂದು ಆರೋಪಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಮೇಲೆ ಸರ್ಕಾರದ ಕಾಳಜಿ ಇಲ್ಲ. ಭೀಕರ ಬರಗಾಲವಿದ್ದರೂ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಬರ ಪರಿಹಾರವಾಗಿ ಘೋಷಿಸಿದ ಹಣವನ್ನು "ಭಿಕ್ಷುಕರಿಗೆ ನೀಡಿದಂತೆ" ವಿಳಂಬ ಮಾಡುತ್ತಿದೆ. ಇಂತಹ ಗಂಭೀರ ವಿಷಯಗಳನ್ನು ಮುಚ್ಚಿ ಹಾಕಲು ಮತ್ತು ಸರ್ಕಾರದ ಜವಾಬ್ದಾರಿಯಿಂದ ನುಣುಚಿಕೊಳ್ಳಲು, ಕಾಂಗ್ರೆಸ್ ನಾಯಕರು 'ಸ್ಟಿಂಗ್ ಆಪರೇಷನ್' ಎಂಬ ಅಜೆಂಡಾವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ದೆಹಲಿಯಲ್ಲಿ ಇಂಡಿ ಒಕ್ಕೂಟದ ನಾಯಕರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಲು ಯತ್ನಿಸಿರುವುದು ಕೇವಲ ನಾಟಕ ಎಂದು ಟೀಕಿಸಿದ್ದಾರೆ. "ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂದು ರಾದ್ಧಾಂತ ಮಾಡುವುದು ಕಾಂಗ್ರೆಸ್‌ನ ಹತಾಶ ಮನೋಭಾವವನ್ನು ತೋರಿಸುತ್ತದೆ. ಅವರು ದೇಶದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮಾನ, ಮರ್ಯಾದೆ ಮತ್ತು ತಾಕತ್ ಇದ್ದರೆ ಜನರ ಮನಸ್ಸು ಗೆದ್ದು ಅಧಿಕಾರಕ್ಕೆ ಬರಲಿ, ಅಂತಹ ಪಿತೂರಿಗಳನ್ನು ದೇಶದ ಜನ ಒಪ್ಪುವುದಿಲ್ಲ" ಎಂದು ಗುಡುಗಿದ್ದಾರೆ.

ರಾಜಕೀಯ ಚದುರಂಗದಾಟ

ವಿಜಯೇಂದ್ರ ಅವರ ಹೇಳಿಕೆಗಳು ಹಲವು ಆಯಾಮಗಳನ್ನು ಹೊಂದಿವೆ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಎಂದು ಹೇಳುತ್ತಿದ್ದರೂ, ಬಿಜೆಪಿ ನಾಯಕರು ಪದೇ ಪದೇ ಶಾಸಕರ ಪಕ್ಷಾಂತರದ ವಿಚಾರವನ್ನು ಪ್ರಸ್ತಾಪಿಸುತ್ತಿರುವುದು ಆಡಳಿತ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಸ್ಟಿಂಗ್ ಆಪರೇಷನ್ ವಿಚಾರವು ಕೇವಲ ವ್ಯಕ್ತಿಗಳಲ್ಲ, ಇಡೀ ಸರ್ಕಾರವನ್ನೇ ಅಸ್ಥಿರಗೊಳಿಸುವಷ್ಟು ಸಾಮರ್ಥ್ಯ ಹೊಂದಿದೆ ಎಂದು ಬಿಜೆಪಿ ಭಾವಿಸಿದೆ. ಬರಗಾಲದ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿನ ವಿಳಂಬವನ್ನು ಎತ್ತಿ ತೋರಿಸುವ ಮೂಲಕ, ಬಿಜೆಪಿ ತನ್ನನ್ನು ತಾನು ಜನರ ಪರವಾಗಿರುವ ಪಕ್ಷವಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ವಿಜಯೇಂದ್ರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಒಂದು ವೇಳೆ ಸಚಿವರು ಮತ್ತು ಶಾಸಕರು ನಿಜಕ್ಕೂ ಬಿಜೆಪಿ ಸೇರುವ ಹಂತದಲ್ಲಿದ್ದರೆ, ಅದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅಲ್ಲದೆ, ಸ್ಟಿಂಗ್ ಆಪರೇಷನ್ ಕುರಿತಾದ ತನಿಖೆ ಮತ್ತು ಅದರಿಂದ ಬಹಿರಂಗವಾಗುವ ಸತ್ಯಗಳು ಯಾವೆಲ್ಲಾ ನಾಯಕರ ವೃತ್ತಿಜೀವನಕ್ಕೆ ಕುತ್ತು ತರುತ್ತವೆ ಎಂಬುದು ಕಾದು ನೋಡಬೇಕಿದೆ.

Read More
Next Story