ಯುಪಿಎ ಭ್ರಷ್ಟಾಚಾರದ ಕರಾಳ ಅಧ್ಯಾಯ, ಮೋದಿಯವರದ್ದು ಸ್ವಚ್ಛ ಆಡಳಿತ: ಬಿ.ವೈ. ವಿಜಯೇಂದ್ರ
x

ಯುಪಿಎ ಭ್ರಷ್ಟಾಚಾರದ ಕರಾಳ ಅಧ್ಯಾಯ, ಮೋದಿಯವರದ್ದು ಸ್ವಚ್ಛ ಆಡಳಿತ: ಬಿ.ವೈ. ವಿಜಯೇಂದ್ರ

2014ರಲ್ಲಿ ಮೋದಿಯವರು ದೇಶದ ಸವಾಲನ್ನು ಸ್ವೀಕರಿಸಿದಾಗ, ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂಬುದನ್ನು ಸಾಬೀತುಪಡಿಸುವುದಾಗಿ ಭರವಸೆ ನೀಡಿದ್ದರು. ಇಂದು ಅದನ್ನು ಸಾಬೀತುಪಡಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.


Click the Play button to hear this message in audio format

ದೇಶದ ರಾಜಕೀಯ ಇತಿಹಾಸದಲ್ಲಿ ಯುಪಿಎ ಆಡಳಿತಾವಧಿಯನ್ನು ಭ್ರಷ್ಟಾಚಾರದ ಕರಾಳ ಅಧ್ಯಾಯ ಎಂದು ಬಣ್ಣಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರವು ಕಳೆದ ಒಂದು ದಶಕದಲ್ಲಿ ದೇಶವನ್ನು ಭ್ರಷ್ಟಾಚಾರ ಮುಕ್ತ ಹಾಗೂ ಜಾಗತಿಕ ಶಕ್ತಿಯನ್ನಾಗಿ ಪರಿವರ್ತಿಸಿದೆ ಎಂದು ಶ್ಲಾಘಿಸಿದ್ದಾರೆ.

ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ದೇಶವು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿತ್ತು. 2ಜಿ ಹಗರಣ, ಬೋಫೋರ್ಸ್, ಕಾಮನ್ವೆಲ್ತ್ ಗೇಮ್ಸ್ ಹಗರಣ ಹೀಗೆ ಒಟ್ಟು 12 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಗರಣಗಳು ನಡೆದಿದ್ದವು. ಆದರೆ, ನರೇಂದ್ರ ಮೋದಿ ಅವರ ದಶಕದ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವೂ ಇಲ್ಲ. ಇದು ಸ್ವತಃ ಒಂದು ದೊಡ್ಡ ದಾಖಲೆಯಾಗಿದೆ. ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದು ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಧಾನಿಗಳು, ಗುಜರಾತ್ ಮುಖ್ಯಮಂತ್ರಿಯಾಗಿ ಗಳಿಸಿದ್ದ ಆಡಳಿತಾತ್ಮಕ ಅನುಭವವನ್ನು ರಾಷ್ಟ್ರ ಮಟ್ಟದಲ್ಲಿ ಸಮರ್ಥವಾಗಿ ಬಳಸುತ್ತಿದ್ದಾರೆ ಎಂದು ತಿಳಿಸಿದರು.

ಆರ್ಥಿಕತೆ ಮತ್ತು ಮೂಲಸೌಕರ್ಯದಲ್ಲಿ ಕ್ರಾಂತಿ

2014ರಲ್ಲಿ ಮೋದಿಯವರು ದೇಶದ ಸವಾಲನ್ನು ಸ್ವೀಕರಿಸಿದಾಗ, ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂಬುದನ್ನು ಸಾಬೀತುಪಡಿಸುವುದಾಗಿ ಭರವಸೆ ನೀಡಿದ್ದರು. ಇಂದು ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಕೈಗೊಂಡ ಆಮೂಲಾಗ್ರ ಬದಲಾವಣೆಗಳ ಫಲವಾಗಿ ಮೂಲಸೌಕರ್ಯ ಕ್ಷೇತ್ರಕ್ಕೆ 12 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಹರಿದುಬಂದಿದೆ. ರಾಷ್ಟ್ರೀಯ ಹೆದ್ದಾರಿಗಳ ಜಾಲ, ಮೆಟ್ರೋ ರೈಲುಗಳ ವಿಸ್ತರಣೆ ಮತ್ತು ಅತ್ಯಾಧುನಿಕ ವಿಮಾನ ನಿಲ್ದಾಣಗಳ ನಿರ್ಮಾಣ. ಎಲ್‌ಪಿಜಿ ಸಂಪರ್ಕ ಶೇ. 100 ತಲುಪಿದೆ, ಸೋಲಾರ್ ಮತ್ತು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಭಾರತ ಜಾಗತಿಕ ಮನ್ನಣೆ ಗಳಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಹಿಂದೆ ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಇಂದು ಉಪಕರಣಗಳನ್ನು ಉತ್ಪಾದಿಸುವ ಮಟ್ಟಕ್ಕೆ ಬೆಳೆದಿದೆ. ಬಜೆಟ್ ಹಂಚಿಕೆಯಲ್ಲಿ ಶೇ. 165ರಷ್ಟು ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ಮೋದಿಯವರ ಆಡಳಿತದಲ್ಲಿ ಜಾತಿ-ಧರ್ಮದ ಭೇದವಿಲ್ಲದೆ, ದೇಶದ ಪ್ರತಿಯೊಬ್ಬ ನಾಗರಿಕನ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ. ದೇಶದಲ್ಲಿ ಇರುವುದು ನಾಲ್ಕು ಜಾತಿ ಮಾತ್ರ. ಬಡವರು, ರೈತರು, ಮಹಿಳೆಯರು ಮತ್ತು ಯುವಕರು. ಈ ನಾಲ್ಕು ವರ್ಗಗಳ ಸಬಲೀಕರಣವೇ ಮೋದಿಯವರ ಸರ್ಕಾರದ ಗುರಿಯಾಗಿದೆ. ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದ ಈಶಾನ್ಯ ಭಾರತ ಇಂದು ದೇಶದ ಮುಖ್ಯವಾಹಿನಿಗೆ ಸೇರಿದೆ. ರೈಲ್ವೆ, ಹೆದ್ದಾರಿ ಮತ್ತು ವಿಮಾನ ನಿಲ್ದಾಣಗಳ ಸಂಪರ್ಕದಿಂದ ಆ ಭಾಗದ ಜನರಲ್ಲಿ ನಾವೂ ಭಾರತೀಯರು ಎಂಬ ಅಭಿಮಾನ ಜಾಗೃತವಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಠಿಣ ಕ್ರಮಗಳಿಂದ ನಕ್ಸಲ್ ಪಿಡುಗನ್ನು ನಿರ್ಮೂಲನೆ ಮಾಡಲಾಗಿದೆ. ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಇಂದು ಐಟಿಐಗಳು ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ತಲೆ ಎತ್ತಿದ್ದು, ಯುವಕರಿಗೆ ಉದ್ಯೋಗ ಸಿಗುತ್ತಿದೆ. ಕಾಶ್ಮೀರದ ಅಭಿವೃದ್ಧಿ ಮತ್ತು ಅಲ್ಲಿನ ಪ್ರವಾಸೋದ್ಯಮದ ಭರಾಟೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಜಾಗತಿಕ ವೇದಿಕೆಯಲ್ಲಿ ಭಾರತದ ವರ್ಚಸ್ಸು

ಕೋವಿಡ್ ಸಂದರ್ಭದಲ್ಲಿ ಭಾರತದ ಕಾರ್ಯಕ್ಷಮತೆಯನ್ನು ವಿಜಯೇಂದ್ರ ಸ್ಮರಿಸಿದರು. ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಕಂಗಾಲಾಗಿದ್ದಾಗ, ಭಾರತವು ಲಸಿಕೆಗಳನ್ನು ತಯಾರಿಸಿ ಜಗತ್ತಿಗೆ ಪುಕ್ಕಟೆಯಾಗಿ ಪೂರೈಸಿತು. ಇದು ಮೋದಿಯವರ ದೂರದೃಷ್ಟಿ ಮತ್ತು ಭಾರತದ ವೈಜ್ಞಾನಿಕ ಪ್ರಗತಿಗೆ ಸಾಕ್ಷಿ. ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ಭಾರತ ಹೆಚ್ಚಿನ ಅಭಿವೃದ್ಧಿ ದರವನ್ನು ದಾಖಲಿಸಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ವಿಜಯೇಂದ್ರ, ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೈಲದ ಮೇಲೆ ನಾಲ್ಕು ಬಾರಿ ತೆರಿಗೆ ಹೆಚ್ಚಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗಿದ್ದರಿಂದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ. ಇದು ದೇಶೀಯ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ. ಆದರೆ, ರಾಜ್ಯ ಸರ್ಕಾರವು ತನ್ನ ಖಜಾನೆ ತುಂಬಿಸಿಕೊಳ್ಳಲು ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆಯನ್ನು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧ ಪಕ್ಷಗಳು ಹತಾಶೆಯಿಂದ ಅಪಪ್ರಚಾರ ಮಾಡುತ್ತಿವೆ. ಮೋದಿ ಅವರು ದೇಶವನ್ನು 'ವಿಕಸಿತ ಭಾರತ'ವನ್ನಾಗಿ ಮಾಡಲು ಹಗಲಿರುಳು ದುಡಿಯುತ್ತಿದ್ದಾರೆ. ದೇಶದ 140 ಕೋಟಿ ನಾಗರಿಕರಿಗೆ ಮೋದಿಯವರ ನಾಯಕತ್ವದ ಮೇಲೆ ಅಚಲ ವಿಶ್ವಾಸವಿದೆ ಎಂದು ಹೇಳಿದರು.

Read More
Next Story